ಸಾರಾಂಶ
ದರನಿಗದಿ ಪಡಿಸುವರೆಗೆ ಕಾರ್ಖಾನೆ ಆರಂಭಿಸುವುದಿಲ್ಲವೆಂದು ಕಾರ್ಖಾನೆಯಿಂದ ಭರವಸೆ
ಐದು ದಿನಗಳಿಂದ ಆಹೋರಾತ್ರಿ ಧರಣಿಕನ್ನಡಪ್ರಭ ವಾರ್ತೆ ಹಳಿಯಾಳ
ಪ್ರತಿಟನ್ ಕಬ್ಬಿಗೆ ₹3300 ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಸೋಮವಾರ ಪಟ್ಟಣದಲ್ಲಿ ರೈತರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನಾ ಸಭೆ ನಡೆಸಿ, ದರ ನಿಗದಿಯಾಗುವರೆಗೂ ಕಾರ್ಖಾನೆ ಆರಂಭಿಸಬಾರದೆಂದು ಆಗ್ರಹಿಸಿದರು. ಕಾರ್ಖಾನೆ ಆಡಳಿತ ಮಂಡಳಿಯ ರೈತ ವಿರೋಧಿ ಧೋರಣೆ ಖಂಡಿಸಿದ ರೈತರು ಸಮಸ್ಯೆ ಇತ್ಯರ್ಥಪಡಿಸಲು ಶಾಸಕ ದೇಶಪಾಂಡೆಯವರು ಮುಂದಾಗುತ್ತಿಲ್ಲವೆಂದು ಆರೋಪಿಸಿದರು.ಕಾರ್ಖಾನೆ ಆಡಳಿತ ಮಂಡಳಿಯವರು ದರನಿಗದಿಪಡಿಸುವವರೆಗೂ ಕಾರ್ಖಾನೆಯು ಕಬ್ಬು ನುರಿಸುವುದಿಲ್ಲವೆಂದು ಭರವಸೆ ನೀಡಿದ್ದರಿಂದ, ಕಳೆದ ಐದು ದಿನಗಳಿಂದ ಆರಂಭಗೊಂಡ ಆಹೋರಾತ್ರಿ ಧರಣಿಯನ್ನು ಎರಡು ದಿನಗಳವರೆಗೆ ಸ್ಥಗಿತಗೊಳಿಸುವ ನಿರ್ಣಯವನ್ನು ರೈತರು ಕೈಗೊಂಡರು.ರಸ್ತೆತಡೆ:
ಶಿವಾಜಿ ವೃತದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ವೃತ್ತಾಕಾರದಲ್ಲಿ ಕುಳಿತು ರೈತರು ರಸ್ತೆತಡೆ ಆರಂಭಿಸಿದರು. ಕಾರ್ಖಾನೆ ವ್ಯಾಪ್ತಿಯ ಕಲಘಟಗಿ, ಧಾರವಾಡ ಗ್ರಾಮೀಣ, ಅಳ್ನಾವರ ತಾಲೂಕಿನಿಂದ ಆಗಮಿಸಿದ ರೈತರು ಪಾಲ್ಗೊಂಡಿದ್ದರು. ಪ್ರತಿಭಟನೆ ಬೆಂಬಲಿಸಿ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ಮಾಜಿ ವಿಪ ಸದಸ್ಯ ಎಸ್.ಎಲ್. ಘೋಟ್ನೇಕರ ಮುಂದಾಳತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಮುಖಂಡರು ಭಾಗವಹಿಸಿದರು. ಬೆಳಗ್ಗೆ 12 ಗಂಟೆಗೆ ಆರಂಭಗೊಂಡ ರಸ್ತೆ ತಡೆ ಪ್ರತಿಭಟನೆಯು 5 ತಾಸಿಗಿಂತಲೂ ಹೆಚ್ಚು ಹೊತ್ತು ನಡೆಯಿತು. ಪ್ರತಿಭಟನೆಯ ಸಮಯದಲ್ಲಿ ಮಳೆ ಸುರಿಯಲಾರಂಭಿಸಿದರೂ ಪ್ರತಿಭಟನಾಕಾರರು ಸುರಿಯುವ ಮಳೆಯಲ್ಲಿಯೇ ಪ್ರತಿಭಟನೆ ಮುಂದುವರೆಸಿದರು.ದೇಶಪಾಂಡೆಯೇ ಮೇನ್ ಟಾರ್ಗೆಟ್:
ಪ್ರತಿಭಟನೆಯುದ್ದಕ್ಕೂ ಶಾಸಕ ಆರ್.ವಿ. ದೇಶಪಾಂಡೆಯವರೇ ಪ್ರತಿಭಟನಾಕಾರರ ಕೆಂಗೆಣ್ಣಿಗೆ ಗುರಿಯಾದರು. ರೈತ ಮುಖಂಡರು ಸೇರಿ ರಾಜಕೀಯ ಮುಖಂಡರು ದೇಶಪಾಂಡೆಯವರನ್ನು ಮನಸೋ ಇಚ್ಛೆ ಟೀಕಿಸಿದರೇ, ಇನ್ನೂ ಕೆಲವರು ದೇಶಪಾಂಡೆಯವರ ಮಿಮಿಕ್ರಿ ಮಾಡಿ ಲೇವಡಿ ಮಾಡಿದರು. ಹಳಿಯಾಳದಲ್ಲಿದ್ದರೂ ರೈತರ ಸಮಸ್ಯೆ ಬಗೆಹರಿಸಲು ದೇಶಪಾಂಡೆಯವರು ಮುಂದಾಗಲಿಲ್ಲ, ರೈತರನ್ನು ಕರೆದು ಸೌಜನ್ಯಕ್ಕಾದರೂ ಮಾತನಾಡಿ ಸಮಸ್ಯೆ ಆಲಿಸಲಿಲ್ಲ ಎಂಬ ರೈತರ ಮಾತಿನಲ್ಲಿ ಆಕ್ರೋಶ ವ್ಯಕ್ತವಾಯಿತು.ದೇಶಪಾಂಡೆಯವರೇ ಶಾಸಕರ ಧರ್ಮಪಾಲಿಸಿ: ಶಾಸಕ ದೇಶಪಾಂಡೆಯವರು ತಮ್ಮ ಶಾಸಕ ಧರ್ಮಪಾಲನೆ ಮಾಡಬೇಕು ಎಂದು ಮಾಜಿ ಶಾಸಕ ಸುನೀಲ ಆಗ್ರಹಿಸಿದರು. ಹಳಿಯಾಳ ರೈತರು ನಿಮಗೆ 9 ಬಾರಿ ಶಾಸಕರಾಗಿ ಆಯ್ಕೆಮಾಡಿದ್ದು, ರೈತರ ಋಣ ನಿಮ್ಮ ಮೇಲಿದೆ, ಇದನ್ನು ಮರೆತಿದ್ದಿರಿ, ಈಗ ಹಳಿಯಾಳದ ರೈತರು ಬೇರೆಡೆ ಕಬ್ಬು ಸಾಗಾಟ ಮಾಡಬಾರದೆಂದು ಹೇಳುವ ನೀವು, ಅದೇ ಅಧಿಕಾರದಲ್ಲಿ ಕಾರ್ಖಾನೆಯವರನ್ನು ಕರೆಯಿಸಿ, ಕಬ್ಬಿಗೆ ದರನಿಗದಿ ಪಡಿಸದಿದ್ದರೇ ಇಲ್ಲಿನ ಕಬ್ಬು ಬೇರೆಡೆ ಕಳಿಸುವುದಾಗಿ ಹೇಳಿ ಅವರ ಮೇಲೆ ಒತ್ತಡ ಹೇರಲು ನಿಮಗೆ ಧೈರ್ಯ ಸಾಲುತ್ತಿಲ್ಲವೇ ಎಂದು ಪ್ರಶ್ನಿಸಿದರು.ನೀವು ಎಷ್ಟೇ ಪ್ರಭಾವ ಬಳಸಿ ತಂತ್ರಗಳನ್ನು ಮಾಡಿ ಕಾರ್ಖಾನೆ ಆರಂಭಿಸಲು ಯತ್ನಿಸಿದ್ದರೂ ನಾವು ದರನಿಗದಿಯಾಗುವರೆಗೂ ಕಾರ್ಖಾನೆ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದರು.
ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ಕಬ್ಬು ಬೆಳೆಗಾರರ ಪ್ರಮುಖರಾದ ಕುಮಾರ ಬೊಬಾಟೆ, ನಾಗೇಂದ್ರ ಜಿವೋಜಿ, ಶಂಕರ ಕಾಜಗಾರ, ಧಾರವಾಡ ಜಿಲ್ಲೆಯ ರೈತ ಪ್ರಮುಖರಾದ ಮಹೇಶ ಬೆಳಗಾಂವಕರ, ಪರಶುರಾಮ ಯತ್ತಿನಗುಡ್ಡ, ಉಳವಪ್ಪ ಹಲವರು ಮಾತನಾಡಿದರು.ಕಾರ್ಖಾನೆ ಆರಂಭಿಸುವುದಿಲ್ಲ:ಪ್ರತಿಭಟನಾ ನಿರತ ರೈತರನ್ನು ಭೇಟಿಯಾಗಲು ಮಧ್ಯಾಹ್ನ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ ತೆರಳಿದರು, ಕಾರ್ಖಾನೆ ಆಡಳಿತ ಮಂಡಳಿಯವರು ಹಾಗೂ ಜಿಲ್ಲಾಧಿಕಾರಿ ಆಗಮಿಸಿ ಸಮಸ್ಯೆ ಬಗೆಹರಿಸುವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ರೈತರು ಪಟ್ಟು ಹಿಡಿದರು. ಸಂಜೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾರ್ಖಾನೆ ಮುಖ್ಯಸ್ಥ ಬಾಲಾಜಿ ಮುಂದಾಳತ್ವದ ನಿಯೋಗವು ದರ ನಿಗದಿಯಾಗುವರೆಗೂ ಕಾರ್ಖಾನೆ ಕಾರ್ಯಾರಂಭಿಸುವುದಿಲ್ಲ ಎಂದು ಭರವಸೆ ನೀಡಿದರು.
;Resize=(128,128))
;Resize=(128,128))
;Resize=(128,128))