ಸಾರಾಂಶ
ನಗರದಲ್ಲಿ ಆಸ್ತಿಗಳ ಭೂ ದಾಖಲೆ ನಕ್ಷಾ ಯೋಜನೆ । ಮಾಲೀಕತ್ವದ ಮಾಹಿತಿಗೆ ಸಹಕಾರಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಡಿಜಿಟಲೀಕೃತ ಭೂ ನಕ್ಷೆಯಿಂದ ಭೂ ಅಕ್ರಮವನ್ನು ತಡೆಗಟ್ಟುವುದರ ಜತೆಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಎಲ್ಲಾ ಆಸ್ತಿಗಳನ್ನು ಆಧುನಿಕ ತಂತ್ರಜ್ಞಾನ ಬಳಸಿ ಸರ್ವೆ ನಡೆಸಿ ಸ್ಪಷ್ಟವಾದ ಮಾಲೀಕತ್ವದ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.
ಕಂದಾಯ ಇಲಾಖೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ವತಿಯಿಂದ ಮಂಗಳವಾರ ನಗರ ಸಭೆ ಕಾರ್ಯಾಲಯದಲ್ಲಿ ಆಯೋಜಿಸಿದ್ದ ನಗರ ಪ್ರದೇಶಗಳಲ್ಲಿ ಆಸ್ತಿಗಳ ಭೂ ದಾಖಲೆಗಳ ರಚನೆ ನಕ್ಷಾ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದರು.ನಕ್ಷಾ ಯೋಜನೆ ಅಡಿಯಲ್ಲಿ ಪ್ರಾಯೋಗಿಕವಾಗಿ ರಾಜ್ಯದ ೧೦ ನಗರಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಜಿಲ್ಲೆಯ ನಗರ ಸಭೆಯನ್ನು ಆಯ್ಕೆ ಮಾಡಲಾಗಿದ್ದು ಯೋಜನೆಯೂ ನಗರ ಸಭೆ ವ್ಯಾಪ್ತಿಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಸರಳ ಸರ್ವೆ ಕಾರ್ಯಗಳ ಜತೆಗೆ ನಾಗರಿಕರು ಸಾಲ ಮತ್ತು ಇತರ ಪ್ರಯೋಜನಗಳನ್ನು ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಪಡೆಯುವ ಸುಲಭ ಪ್ರಕ್ರಿಯೆಗೆ ಸಹಕಾರಿಯಾಗಲಿದೆ ಎಂದರು.
ನಕ್ಷಾ ಯೋಜನೆಯನ್ನು ಭಾರತ ಸರ್ಕಾರದ ಭೂಸಂಪನ್ಮೂಲ ಇಲಾಖೆಯು ಆರಂಭಿಸಿದ್ದು, ಕೇಂದ್ರ ಬಜೆಟ್‌ನಲ್ಲಿ ನಗರ ಪ್ರದೇಶಗಳಲ್ಲಿ ಭೂ-ಸಂಬಂಧಿತ ಸುಧಾರಣೆಗಳು ಮತ್ತು ಕ್ರಮಗಳನ್ನು ಸೂಕ್ತ ಹಣಕಾಸಿನ ಬೆಂಬಲದ ಮೂಲಕ ಮುಂದಿನ ೩ ವರ್ಷಗಳಲ್ಲಿ ಪೂರ್ಣಗೊಳಿಸಲು ಪ್ರೋತ್ಸಾಹಿಸಲಾಗುವುದು. ಪ್ರಾಯೋಗಿಕವಾಗಿ ದೇಶದ ೧೫೨ ನಗರ/ಪಟ್ಟಣ ಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲು ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮಾಡ್ರನೈಸೇಷನ್ ಪ್ರೋಗ್ರಾಮ್ ಅಡಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಆಯ್ಕೆಮಾಡಲಾಗಿದೆ ಎಂದರು.ಶಾಸಕ ಎಚ್.ಡಿ ತಮ್ಮಯ್ಯ ಮಾತನಾಡಿ ನಕ್ಷಾ ಯೋಜನೆಯನ್ನು ನಗರ ಸ್ಥಳೀಯ ಸಂಸ್ಥೆಗಳ ಭೂ ಸಮೀಕ್ಷೆ ಸರಳೀಕರಣದ ಉದ್ದೇಶದಿಂದ ಜಾರಿ ಮಾಡಲಾಗಿದೆ. ಇದರಿಂದ ಆಸ್ತಿಗಳ ವಿಭಜನೆ, ಅನುವಂಶಿಕ ಬದಲಾವಣೆ, ಉತ್ತರಾಧಿತ್ವ ಪ್ರಕ್ರಿಯೆಗಳು ಸುಲಭವಾಗುತ್ತದೆ. ಇದು ಪ್ರತಿ ಆಸ್ತಿಯ ಪಾರದರ್ಶಕ ಮತ್ತು ಸ್ಪಷ್ಟವಾದ ಮಾಲೀಕತ್ವದ ಪ್ರಮಾಣಪತ್ರವಾಗಿದೆ. ಆಸ್ತಿಯ ನಕ್ಷೆ, ಮಾಲೀಕತ್ವದ ವಿವರಗಳು ಮತ್ತು ಅದರ ಹಕ್ಕುಗಳು ಮತ್ತು ಆಸ್ತಿಯ ಮೇಲಿನ ವಿವರಗಳನ್ನು ಕಾರ್ಡ್ ಒಳಗೊಂಡಿರುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್., ನಗರ ಪ್ರದೇಶದ ಪ್ರತಿಯೊಂದು ಆಸ್ತಿಯ ಹಕ್ಕು ಅಥವಾ ಮಾಲೀಕತ್ವದ ದಾಖಲೆಯನ್ನು ಕಾನೂನಿನ ಅಡಿಯಲಿ ಆಸ್ತಿ ಮಾಲೀಕತ್ವದ ಪುರಾವೆ ಅಥವಾ ಮಾಲೀಕತ್ವದ ಪ್ರಮಾಣಪತ್ರವನ್ನು ಸಿದ್ಧಪಡಿಸುವುದೇ ರಾಷ್ಟ್ರೀಯ ಜಿಯೋಸೋಷಿಯಲ್ ಆಧಾರಿತ ನಗರ ವಸತಿಗಳ ಭೂ ಸಮೀಕ್ಷೆ (ನಕ್ಷಾ) ಯೋಜನೆಯಾಗಿದೆ ಎಂದರು.ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮರ್ ಮಾತನಾಡಿ, ನಗರ ಸಭೆ ವ್ಯಾಪ್ತಿಯ ಎಲ್ಲಾ ಖಾಸಗಿ ಆಸ್ತಿಗಳು, ಖಾಲಿ ನಿವೇಶನಗಳು, ಸಾರ್ವಜನಿಕ ಆಸ್ತಿಗಳು, ನಗರ ಸಭೆ ಆಸ್ತಿಗಳು, ದೇವಸ್ಥಾನ, ಬಸ್ ನಿಲ್ದಾಣ, ರಸ್ತೆ, ಹಳ್ಳ, ಕೆರೆ, ಕಟ್ಟೆ, ಸ್ಮಶಾನ ಮತ್ತು ಇತರೆ ಸರ್ಕರಿ ಆಸ್ತಿಗಳ ನಿಖರವಾದ ಸರ್ವೆ ಕಾರ್ಯ ನಡೆಸಲು ಸಹಕರಿಯಾಗಲಿದ್ದು ತೆರಿಗೆ ವಸೂಲಿಗೂ ಅನುಕೂಲವಾಗಲಿದೆ ಎಂದರು.
ನಗರ ಸಭೆ ಆಯುಕ್ತ ಬಿ.ಸಿ ಬಸವರಾಜ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನ ನಿರ್ದೇಶಕಿ ನಾಗರತ್ನ, ಭೂ ದಾಖಲೆಗಳ ಉಪನಿರ್ದೇಶಕ ಲೋಹಿತ್.ಟಿ.ಕೆ. ಸಹಾಯಕ ನಿರ್ದೇಶಕ ರುದ್ರೇಶ್, ಸರ್ವೇ ಸೂಪರ್‌ವೈಸರ್ ಪ್ರಕಾಶ್, ಸಿಬ್ಬಂದಿ ಇದ್ದರು.