ಸಾರಾಂಶ
ಹಾರೋಹಳ್ಳಿ: ಕೈಗಾರಿಕಾ ಪ್ರದೇಶವನ್ನು ಹೊಂದಿರುವ ಹಾರೋಹಳ್ಳಿವರೆಗೆ ನಮ್ಮ ಮೆಟ್ರೋ ವಿಸ್ತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.
ಪಟ್ಟಣದ ಚಾಮುಂಡೇಶ್ವರ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಮತ್ತು ನಗರ ವಸತಿ ಮಂಡಳಿ ಆಶ್ರಯದಲ್ಲಿ ಕೇಂದ್ರ ಪುರಸ್ಕೃತ ಅಮೃತ 2.0 ಅನುದಾನದಡಿ ಹಾರೋಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಕಾವೇರಿ ನೀರು ಸರಬರಾಜು ಕಲ್ಪಿಸುವ ಸುಮಾರು 33.80 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಹಾರೋಹಳ್ಳಿಯಲ್ಲಿ ಹೊಸ ತಾಲೂಕು ಕಚೇರಿ ನಿರ್ಮಿಸಬೇಕು. ದೊಡ್ಡಕೆರೆ ಶುದ್ಧಕಾರಣ ಮಾಡಬೇಕು. ಆ ನಿಟ್ಟಿನಲ್ಲಿ 20 ಕೊಟಿ ಅನುದಾನ ನಮ್ಮ ಸರ್ಕಾರ ಒದಗಿಸಿದ್ದು, ಹೈಟೆಕ್ ಶಾಲೆ ನಿರ್ಮಿಸುವ ಕೆಲಸ ನಡೆಯುತ್ತಿದೆ. ಹಾರೋಹಳ್ಳಿಗೆ ಮೆಟ್ರೋ ತರಲು ಚಿಂತನೆ ನಡೆಸಲಾಗುತ್ತಿದೆ. ತಾಲೂಕು ಸುಸಜ್ಜಿತ ಆಸ್ಪತ್ರೆ ನಿರ್ಮಿಸಲಾಗುವುದು, ಅಗ್ನಿಶಾಮಕ ಠಾಣೆ ಜೊತೆಗೆ ಮರಳವಾಡಿಯಲ್ಲಿ ಪೊಲೀಸ್ ಠಾಣೆ ನಿರ್ಮಿಸಲಾಗುವುದು ಎಂದರು.
ನಮ್ಮದು ಹೊಸ ತಾಲೂಕು ಯಾವುದೇ ಕಚೇರಿಗಳು, ಸರ್ಕಾರಿ ಅಭಿವೃದ್ಧಿ ಕೆಲಸಗಳು ಇಲ್ಲ, ಒಂದೇ ಒಂದು ರಸ್ತೆಗೂ ದಾಂಬರೀಕಾರಣ ಆಗಿರಲಿಲ್ಲ. ಬೆಂಗಳೂರಿನ ಜನ ಕಾವೇರಿ ನೀರು ಕುಡಿಯುತ್ತಿದ್ದಾರೆ, ಆದರೆ, ನಮ್ಮ ಹಾರೋಹಳ್ಳಿ ಜನತೆಗೆ ಕಾವೇರಿ ನೀರಿನ ಲಭ್ಯ ಇರಲಿಲ್ಲ. ಈಗ ನಮ್ಮ ನಾಯಕರು ಮನಸ್ಸುಮಾಡಿದ್ದರಿಂದ ಕಾವೇರಿ ತಾಯಿ ಹಾರೋಹಳ್ಳಿಯ ಮನೆ ಮನ ತಲುಪಲಿದ್ದಾಳೆ, 33.80 ಕೋಟಿ ರು.ಗಳ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಡಿ.ಕೆ.ಸುರೇಶ್ ಅವರು 4.5 ಎಂ.ಎಲ್.ಡಿ ನೀರನ್ನು ಮಂಜೂರು ಮಾಡಿಸಿದ್ದಾರೆ. ತಾಲೂಕಿನ ಎಲ್ಲಾ ಮನೆಗಳಿಗೂ ನೀರನ್ನು ಒದಗಿಸಲಾಗುವುದು ಎಂದು ಹೇಳಿದರು.ಮುಂದಿನ ವಾರದಲ್ಲಿ 300 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ತಾಲೂಕಿನ ಮರಳವಾಡಿ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು. ವಿರೋಧ ಪಕ್ಷದವರಿಗೆ ಅಭಿವೃದ್ಧಿ ಕೆಲಸಗಳು ಇಷ್ಟವಿಲ್ಲ, ನಾವು ಇದೇ ತಾಲೂಕಿನ ಮಕ್ಕಳು ಅಭಿವೃದ್ಧಿ ಕೆಲಸಗಳೇ ನಮ್ಮ ಆದ್ಯತೆ, ಹಿಂದಿನವರು ಒಬ್ಬ ಬಡವನಿಗೆ ಮನೆ ಕೊಡಲು ಆಗಲಿಲ್ಲ. ಆದರೆ ನಮ್ಮ ವ್ಯಾಪ್ತಿಯಲ್ಲಿ 1500 ನಿವೇಶನ ಹಂಚುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪಟ್ಟಣದ ಆರ್ಥಿಕ ಅಭಿವೃದ್ಧಿ ಮತ್ತು ಸೌಂದರ್ಯದ ದೃಷ್ಟಿಯಿಂದ ರಸ್ತೆ ಆಗಲೀಕಾರಣ ಅಗತ್ಯ ಇದೆ. ಇಲ್ಲಿ ಅಭಿವೃದ್ಧಿ ಕೆಲಸ ಮಾತ್ರ ಮಾಡಲಾಗುತ್ತಿದೆ. ದಲಿತ ಕಾಲೋನಿಗಳು ಶುದ್ಧವಾಗಬೇಕಿದೆ. ಎಲ್ಲರ ಬೆವರು, ಹೋರಾಟ ನನ್ನ ಕೆಲಸಗಳಿಗೆ ಪ್ರೇರಣೆ. ನಮಗೆ ಅಭಿವೃದ್ಧಿ ಮುಖ್ಯ. ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಮಾಡಲಾಗುವುದು. ಮುಂದೆ ಕೆರೆ ತುಂಬಿಸುವ ಕೆಲಗಳನ್ನು ಸಹ ಮಾಡಲಾಗುವುದು ಎಂದು ಇಕ್ಬಾಲ್ ಹುಸೇನ್ ಹೇಳಿದರು.ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬಮೂಲ್ ನಿರ್ದೇಶಕ ಹರೀಶ್ ಕುಮಾರ್ , ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶ್ವೇತಾಬಾಯಿ, ಬೆಸ್ಕಾಂ ಅಧಿಕಾರಿ ಪವಿತ್ರ, ಮುಖಂಡರಾದ ದುಂತೂರು ವಿಶ್ವನಾಥ್, ನಾಗರಾಜು, ಮೋಹನ್, ಸೋಮಶೇಖರ್, ಜೆ.ಸಿ.ಪಿ ಅಶೋಕ್, ರುದ್ರೇಶ್, ಮರಳವಾಡಿ ಕೃಷ್ಣಪ್ಪ, ಬೆಣಚಕಲ್ದೊಡ್ಡಿ ರುದ್ರೇಶ್, ಕಾಶಿರಾಮ್, ಕೃಷ್ಣಮೂರ್ತಿ, ರವಿಕುಮಾರ್, ಚಂದ್ರಶೇಖರ್ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
18ಕೆಆರ್ ಎಂಎನ್ 1.ಜೆಪಿಜಿಹಾರೋಹಳ್ಳಿ ಪಟ್ಟಣದ ಚಾಮುಂಡೇಶ್ವರ ದೇವಸ್ಥಾನದ ಆವರಣದಲ್ಲಿ ಬಿ.ಡಬ್ಲ್ಯೂ.ಎಸ್.ಎಸ್.ಬಿ ಕಾವೇರಿ ನೀರು ಸರಬರಾಜು ಕಲ್ಪಿಸುವ ಸುಮಾರು 33.80 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡುವ ಸಮಾರಂಭದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಅಭಿನಂದಿಸಲಾಯಿತು.