ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಿಂದ ಉತ್ಪಾದನೆಗೊಳ್ಳುತ್ತಿರುವ ಘನತ್ಯಾಜ್ಯವನ್ನು ವ್ಯವಸ್ಥಿತವಾಗಿ ಸಂಸ್ಕರಿಸಿ, ವಿಲೇವಾರಿ ಮಾಡಬಹುದಾದ ಆಧುನಿಕ ವಿಧಾನಗಳ ಬಗ್ಗೆ ಅರಿತು ಅಳವಡಿಸಿಕೊಳ್ಳುವ ತುರ್ತು ಅನಿವಾರ್ಯತೆ ಇದೆ ಎಂದು ಜಿಲ್ಲಾಧಿಕಾರಿ ಗುರುದತ್ತಹೆಗಡೆ ಹೇಳಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ 193ನೇ ಏಕಗವಾಕ್ಷಿ ಸಮಿತಿ ಹಾಗೂ ಕೈಗಾರಿಕಾ ಸ್ಪಂದನಾ ಸಭೆಯಲ್ಲಿ ಅವರು ಮಾತನಾಡಿ, ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಿಂದ ಉತ್ಪಾದನೆಗೊಳ್ಳುತ್ತಿರುವ ಭಾರೀ ಪ್ರಮಾಣದ ರಾಸಾಯನಿಕ ಮಿಶ್ರಿತ ಮರಳು ತ್ಯಾಜ್ಯದಿಂದ ಪರಿಸರದ ಮೇಲೆ ದುಷ್ಪರಿಣಾಮಗಳಾಗುತ್ತಿರುವುದಲ್ಲದೇ ಅಂತರ್ಜಲದಲ್ಲಿ ಸೇರ್ಪಡೆಯಾಗುತ್ತಿರುವ ಸಾಧ್ಯತೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿನ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಪಡಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಬಗ್ಗೆ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು, ಕೆ.ಐ.ಎ.ಡಿ.ಬಿ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಆಟೋ ಕಾಂಪ್ಲೆಕ್ಸ್ ಮತ್ತು ಸಾಗರ ರಸ್ತೆ ಕೈಗಾರಿಕಾ ಪ್ರದೇಶಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವ ಬಗ್ಗೆ ಮಹಾ ನಗರಪಾಲಿಕೆಯ ಅಧಿಕಾರಿಗಳು ತಕ್ಷಣದ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಕಲ್ಲೂರು ಮಂಡ್ಲಿ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪಿಸಲು ಅಗತ್ಯವಾಗಿರುವ ಭೂಮಿಯನ್ನು ಗುರುತಿಸಲು ತಹಸೀಲ್ದಾರರಿಗೆ ಸೂಚಿಸಿದ ಅವರು, ಭದ್ರಾವತಿ ಮತ್ತು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳು ಕ್ರಮಕೈಗೊಳ್ಳುವಂತೆ ತಿಳಿಸಿದರು.ಕೆ.ಎಸ್.ಎಸ್.ಐ.ಡಿ.ಸಿ.,ಸಿದ್ಲೀಪುರ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಹೆಚ್ಚುವರಿ ವಿದ್ಯುತ್ ಶುಲ್ಕ ಪಡೆಯುತ್ತಿರುವ ಬಗ್ಗೆ ಪರಿಶೀಲಿಸಲಾಗಿ, ಈ ಸಮಸ್ಯೆಯ ಇತ್ಯರ್ಥಗೊಳಿಸುವ ಮುನ್ನ ಸದರಿ ಕೈಗಾರಿಕಾ ಪ್ರದೇಶದ ಕೈಗಾರಿಕೋದ್ಯಮಿಗಳು ಮನವಿ ಸಲ್ಲಿಸಿದಲ್ಲಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಶುಲ್ಕ ಪಾವತಿಸಲು ವಿನಾಯಿತಿ ನೀಡಬಹುದೇ ಅಥವಾ ಮೇಲಾಧಿಕಾರಿಗಳ ಗಮನಸೆಳೆದು ವಿನಾಯಿತಿ ನೀಡುವಂತೆ ಮನವಿ ಮಾಡುವ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.
ಸಾಗರ ರಸ್ತೆಯ ಕೆ.ಎಸ್.ಎಸ್.ಐ.ಡಿ.ಸಿ. ಕೈಗಾರಿಕಾ ವಸಾಹತು ಶಿವಮೊಗ್ಗ ಮಹಾ ನಗರಪಾಲಿಕೆಗೆ ಹಸ್ತಾಂತರವಾಗಿದ್ದು, ಸದರಿ ಕೈಗಾರಿಕಾ ಪ್ರದೇಶದ ನಿರ್ವಹಣೆಯಲ್ಲಿ ತೀವ್ರತರಹದ ನ್ಯೂನತೆಗಳಿರುವುದನ್ನು ಕೈಗಾರಿಕಾ ಸಂಘದ ಪದಾಧಿಕಾರಿಗಳು ಗಮನಸೆಳೆದಾಗ, ಪಾಲಿಕೆಯ ಪರಿಸರ ಅಧಿಕಾರಿಗಳು ಕೂಡಲೇ ಅಲ್ಲಿನ ಸಮರ್ಪಕ ಕಸವಿಲೇವಾರಿಯಲ್ಲಿ ವಿಶೇಷ ಗಮನ ಸೆಳೆಯುವಂತೆ ಸೂಚಿಸಿದ ಅವರು, ಸ್ಥಳೀಯ ಪ್ರದೇಶದ ಕೈಗಾರಿಕಾ ಸಂಘದ ಪದಾಧಿಕಾರಿಗಳು ಆಂತರಿಕ ಸಭೆ ನಡೆಸಿ, ಅಲ್ಲಿ ಕೈಗೊಳ್ಳಬಹುದಾದ ಸುಧಾರಣಾ ಕ್ರಮಗಳ ಬಗ್ಗೆಯೂ ಚರ್ಚಿಸುವಂತೆ ಸೂಚಿಸಿದರು.ಸಾಗರ ರಸ್ತೆ ಕೈಗಾರಿಕಾ ಪ್ರದೇಶದಲ್ಲಿ ವಾಹನಗಳ ನಿಲುಗಡೆಯಿಂದಾಗಿ ಆಕಸ್ಮಿಕ ಅಪಘಾತಗಳು ಉಂಟಾಗುತ್ತಿವೆ. ಆದ್ದರಿಂದ ವಾಹನಗಳ ನಿಲುಗಡೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ. ಅಲ್ಲಿನ ಕಸ ವಿಲೇವಾರಿ ಬಗ್ಗೆಯೂ ಪಾಲಿಕೆ ಅಧಿಕಾರಿಗಳು ಗಮನಹರಿಸುವಂತೆ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಸೆಳೆದರು. ಆಟೋ ಕಾಂಪ್ಲೆಕ್ಸ್‌ನಲ್ಲಿರುವ ಪ್ರತಿ ಕೈಗಾರಿಕಾ ಘಟಕಗಳಿಗೆ ಪ್ರತ್ಯೇಕ ಯು.ಜಿ.ಡಿ.ಸಂಪರ್ಕ ಕಲ್ಪಿಸಿಕೊಳ್ಳಲು ನೋಟಿಸ್ ಜಾರಿಗೊಳಿಸುವಂತೆಯೂ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಪ್ರೊಬೇಷನರ್ ಜಿಲ್ಲಾಧಿಕಾರಿ ನಾಗೇಂದ್ರ ಕುಮಾರ್ ಬಾಬು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯದರ್ಶಿ ಸುಜಾತಾ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ರಾಮಾಚಾರ್, ಬೆನಕಪ್ಪ, ಮಲ್ಲಿಕಾರ್ಜುನ, ಗೇವರ್ಚಂದ್, ರಮೇಶ್ ಹೆಗ್ಡೆ, ಜಿಲ್ಲಾ ಕೈಗಾರಿಕಾ ಸಂಘದ ಜಂಟಿ ನಿರ್ದೇಶಕ ಗಣೇಶ್, ಉಪನಿರ್ದೇಶಕ ಸುರೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.