ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯಾದ್ಯಂತ ಜನ-ಜಾನುವಾರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಅವಶ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶ್ರೀರೂಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಐದು ತಾಲೂಕುಗಳು ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಣೆಯಾಗಿದ್ದು, ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಾಗಿದ್ದರೂ ಇತ್ತೀಚೆಗೆ ಹಿಂಗಾರು ಚುರುಕುಗೊಂಡಿದೆ. ಸಾಧ್ಯವಾದಷ್ಟು ಉತ್ತಮ ಮಳೆ ನಿರೀಕ್ಷಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ತಹಶೀಲ್ದಾರ್ಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಟಾಸ್ಕ್ಫೋರ್ಸ್ ಸಭೆಗಳನ್ನು ನಡೆಸಿ ಜನರ ಕುಂದುಕೊರತೆ ಆಲಿಸಬೇಕು. ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.ಪ್ರಸ್ತುತ ಜಿಲ್ಲೆಯ ಹನೂರು ತಾಲೂಕಿನ ಆರು ಗ್ರಾಮಪಂಚಾಯಿತಿಗಳ 7 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಂತಹ ಕಡೆ ಖಾಸಗಿ ಬೋರ್ವೆಲ್ಗಳ ಮೂಲಕ ಕುಡಿಯುವ ನೀರು ಪೂರೈಸಬೇಕು. ಅಗತ್ಯವಿದ್ದರೆ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡಬೇಕು. ಜಿಲ್ಲೆಯಲ್ಲಿ ಮುಂಬರುವ ಡಿಸೆಂಬರ್ ತಿಂಗಳಲ್ಲಿ ನೀರಿನ ಸಮಸ್ಯೆಯಾಗಬಹುದು. ಹಾಗಾಗಿ ಸಂಬAಧಪಟ್ಟ ಟಾಸ್ಕ್ಪೋರ್ಸ್ ಹಾಗೂ ನೋಡೆಲ್ ಅಧಿಕಾರಿಗಳು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಈಗಿನಿಂದಲೇ ಗುರುತಿಸಲು ಮುಂದಾಗಬೇಕು. ಆರ್.ಓ ಪ್ಲಾಂಟ್ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಎಂದರು.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೊಸದಾಗಿ ಕೊರೆಸಿರುವ ಬೋರ್ವೆಲ್ಗಳಲ್ಲಿ ಪೈಪ್ಲೈನ್ ಕಾಮಗಾರಿ ಸಮರ್ಪಕವಾಗಿರಬೇಕು. ಮೋಟಾರ್ ಅಳವಡಿಸಿರಬೇಕು. ಇದಕ್ಕಾಗಿ ತಾಲೂಕು ಪಂಚಾಯಿತಿ ನಿಧಿಯನ್ನು ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಪಂಚಾಯಿತಿಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಈ ಬಗ್ಗೆ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಪರಿಶೀಲಿಸಬೇಕು. ಬೋರ್ವೆಲ್ಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಬೇಕು. ಈ ಸಂಬಂಧ ಪಂಚಾಯಿತಿಗಳಲ್ಲಿ ಕೊರೆಸಿರುವ ಬೋರ್ವೆಲ್, ಪೈಪ್ಲೈನ್ ಹಾಗೂ ಮೋಟಾರು ಅಳವಡಿಸಿರುವ ಕುರಿತ ಸಮಗ್ರ ವರದಿ ಸಲ್ಲಿಸುವಂತೆ ಎಲ್ಲಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಳೆಹಾನಿ ಸಮೀಕ್ಷೆ ಕಾರ್ಯವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಸಮೀಕ್ಷೆ ಕಾರ್ಯ ತಡವಾದರೇ ಬೆಳೆಹಾನಿ ಪರಿಹಾರ ವಿತರಣೆಯೂ ವಿಳಂಬವಾಗಲಿದೆ. ಜಿಲ್ಲೆಯ ಸಾಕಷ್ಟು ಗ್ರಾಮಗಳು ಕಾಡಂಚಿನಲ್ಲಿ ಇದ್ದು, ಕಾಡುಪ್ರಾಣಿಗಳು ರಸ್ತೆಯಲ್ಲಿಯೇ ಓಡಾಡುತ್ತಿರುವುದರಿಂದ ಪಿ.ಆರ್ ಗಳಿಗೆ ಪ್ರಾಣಿಗಳ ಹಾವಳಿ ಭಯವು ಇದೆ. ಪಸ್ತುತ ಇರುವ ಅಡೆತಡೆಗಳನ್ನು ನಿವಾರಿಸಿ ಬೆಳೆ ಸಮೀಕ್ಷೆ ಕಾರ್ಯಕ್ಕೆ ನಿಯೋಜಿತರಾಗಿರುವ ಪಿ.ಆರ್. ಗಳನ್ನು ತಕ್ಷಣವೇ ಕಾರ್ಯಪ್ರವೃತ್ತಗೊಳಿಸಬೇಕು. ಜಾನುವಾರು ಮೇವು, ರಸಗೊಬ್ಬರ, ಬಿತ್ತನೆಬೀಜ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಕೃತಿ ಬನ್ಸಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ವಿ.ಪ್ರಿಯದರ್ಶಿನಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಿ.ಸಿ.ಶೃತಿ, ಡಿವೈಎಸ್ಪಿ ಸ್ನೇಹರಾಜ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವೆಂಕಟೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಭಾನುಪ್ರಕಾಶ್, ರೇಷ್ಮೆ ಇಲಾಖೆ ಉಪನಿರ್ದೇಶಕ ರೇಣುಕೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಗಿರೀಶ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಮಂಜುನಾಥ್, ತಹಸೀಲ್ದಾರ್ ಬಸವರಾಜು, ಕೆ.ಎಸ್.ಚೈತ್ರಾ, ತನ್ಮಯ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಇತರರು ಇದ್ದರು.