ಸಾರಾಂಶ
ಕೊಪ್ಪಳ ಸುದ್ದಿ, ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಸಮೀಕ್ಷೆಗೆ 2685 ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ನಿಯೋಜಿಸಿದ್ದು 150 ಮನೆಗೆ ಒಬ್ಬ ಗಣತಿದಾರರು ಇರಲಿದ್ದಾರೆ. ಜಿಲ್ಲೆಯಲ್ಲಿ ಅಂದಾಜು 3.55 ಲಕ್ಷ ಮನೆಗಳಿದ್ದು, ಜೆಸ್ಕಾಂ ಶೇ. 85ರಷ್ಟು ಜಿಯೋ ಟ್ಯಾಗ್ ಮಾಡಿದ್ದಾರೆ. ಇದನ್ನು ಮಾಡದ ಮನೆಗಳಿಗೆ ಚೀಟಿ ಅಂಟಿಸಲಾಗಿದೆ.
ಕೊಪ್ಪಳ:
ಜಿಲ್ಲೆಯಲ್ಲಿ ಸೆ. 22ರಿಂದ ಅ. 7ರ ವರೆಗೆ ನಡೆಯಲಿರುವ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತ ಸಮೀಕ್ಷೆಯಲ್ಲಿ ಯಾರು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತ ಸಮೀಕ್ಷೆ-2025ರ ಜಿಲ್ಲಾಮಟ್ಟದ ಮಾಸ್ಟರ್ ಟ್ರೈನರ್‌ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಮೀಕ್ಷೆಯಿಂದ ಯಾವ ಮನೆ ಬಿಟ್ಟು ಹೋಗದಂತೆ ಎಚ್ಚರವಹಿಸಬೇಕು. ಸಮೀಕ್ಷೆಯಲ್ಲಿರುವ ಎಲ್ಲ ಪ್ರಶ್ನೆಗಳ ಬಗ್ಗೆ ಮೊದಲು ಅರ್ಥಮಾಡಿಕೊಳ್ಳಬೇಕು. ಸಮಸ್ಯೆಗಳಿಗೆ ರಾಜ್ಯಮಟ್ಟದ ಮಾಸ್ಟರ್ ಟ್ರೈನರ್‌ಗಳಿಂದ ಪರಿಹಾರ ಕಂಡುಕೊಳ್ಳಬೇಕು. ಪ್ರತಿ ಮನೆಗೆ ಹೋದಾಗ ತಮಗೆ ನೀಡಿದ ನೇಮಕಾತಿ ಆದೇಶ ಪ್ರತಿ ಮತ್ತು ಐಡಿ ಕಾರ್ಡ್ ಧರಿಸಿರಬೇಕು. ಮನೆಯಲ್ಲಿ ಯಾರು ಇಲ್ಲದೆ ಇದ್ದರೆ ಮತ್ತೊಮ್ಮೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂದರು.ಸಮೀಕ್ಷೆಗೆ 2685 ಪ್ರಾಥಮಿಕ ಶಾಲೆಯ ಶಿಕ್ಷಕರನ್ನು ನಿಯೋಜಿಸಿದ್ದು 150 ಮನೆಗೆ ಒಬ್ಬ ಗಣತಿದಾರರು ಇರಲಿದ್ದಾರೆ. ಜಿಲ್ಲೆಯಲ್ಲಿ ಅಂದಾಜು 3.55 ಲಕ್ಷ ಮನೆಗಳಿದ್ದು, ಜೆಸ್ಕಾಂ ಶೇ. 85ರಷ್ಟು ಜಿಯೋ ಟ್ಯಾಗ್ ಮಾಡಿದ್ದಾರೆ. ಇದನ್ನು ಮಾಡದ ಮನೆಗಳಿಗೆ ಚೀಟಿ ಅಂಟಿಸಲಾಗಿದೆ ಎಂದು ತಿಳಿಸಿದರು.
ಸಂವಿಧಾನದಂತೆ ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ನೀಡಬೇಕಿದೆ. ಅಸಮಾನತೆ, ಲಿಂಗ ತಾರತಮ್ಯ, ವರ್ಗ, ಧರ್ಮ, ಜಾತಿ ಆಧಾರಿತ ಅಸಮಾನತೆ ಹೋಗಲಾಡಿಸಿ ಸಮಾನ ಅವಕಾಶ ನೀಡಿ ಸಮಸಮಾಜ ನಿರ್ಮಿಸಬೇಕಿದೆ. ಪ್ರತಿ 10 ವರ್ಷಕ್ಕೆ ಸರ್ಕಾರ ಜನರ ಸಾಮಾಜಿಕ. ಶೈಕ್ಷಣಿಕ ಸ್ಥಿತಿಗತಿಗಳ ಅಧ್ಯಯನ ಮಾಡುತ್ತದೆ ಎಂದು ಹೇಳಿದರು.ತರಬೇತಿದಾರರಾದ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕೃಷ್ಣಮೂರ್ತಿ ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅಜ್ಜಪ್ಪ ಸೊಗಲದ., ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಅಜ್ಮಿರ್ ಅಲಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ್ ಮಾಹಿತಿ ನೀಡಿದರು.
ಈ ವೇಳೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನಾಗಮಣಿ ಹೊಸಮನಿ. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಜಿ. ಸೇರಿದಂತೆ ರಾಜ್ಯ ಮತ್ತು ಜಿಲ್ಲಾಮಟ್ಟದ ಮಾಸ್ಟರ್ ಟ್ರೈನರ್‌ಗಳು ಭಾಗವಹಿಸಿದ್ದರು.