ಬ್ಯಾಂಕ್ ದರೋಡೆ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಎಸ್ಪಿ ದೀಪನ್ ಎಂ.ಎನ್.

| Published : Sep 24 2025, 01:01 AM IST

ಬ್ಯಾಂಕ್ ದರೋಡೆ ತಡೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಎಸ್ಪಿ ದೀಪನ್ ಎಂ.ಎನ್.
Share this Article
  • FB
  • TW
  • Linkdin
  • Email

ಸಾರಾಂಶ

ಈಚಿನ ದಿನದಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳು ನಡೆದಿದ್ದು, ಜಿಲ್ಲೆಯಲ್ಲಿ ಇಂತಹ ಪ್ರಕರಣ ತಡೆಯುವ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕ್‌ಗಳಲ್ಲಿ ಗರಿಷ್ಠ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು.

ಕನ್ನಡಪ್ರಭ ವಾರ್ತೆ ಕಾರವಾರ

ಈಚಿನ ದಿನದಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬ್ಯಾಂಕ್ ದರೋಡೆ ಪ್ರಕರಣಗಳು ನಡೆದಿದ್ದು, ಜಿಲ್ಲೆಯಲ್ಲಿ ಇಂತಹ ಪ್ರಕರಣ ತಡೆಯುವ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕ್‌ಗಳಲ್ಲಿ ಗರಿಷ್ಠ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಮತ್ತು ಸುರಕ್ಷತಾ ಸಾಧನ ಅಳವಡಿಸಿಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಪಂ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ಸುರಕ್ಷತಾ ಸಾಧನಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಆಂತರಿಕ ಸುರಕ್ಷತಾ ಪರಿಶೀಲನೆ ಕೈಗೊಂಡು ಈ ಸಂದರ್ಭ ಕಂಡುಬರುವ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಬ್ಯಾಂಕ್‌ಗಳಲ್ಲಿ ಉತ್ತಮ ಗುಣಮಟ್ಟದ ಅತ್ಯಾಧುನಿಕ ಎಫ್.ಆರ್.ಎಸ್ ( ಫೇಸ್ ರೆಕಗ್ನೇಷನ್ ಸಿಸ್ಟಂ) ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಮತ್ತು ಬ್ಯಾಂಕ್‌ನ ಹೊರಭಾಗದಲ್ಲಿ ಎಎನ್‌ಪಿಆರ್ (ಆಟೋಮೇಟಿಕ್ ನಂಬರ್ ಪ್ಲೇಟ್ ರೆಕಗ್ನೇಷನ್ ) ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ತಿಳಿಸಿದ ಅವರು, ಎಲ್ಲಾ ಕ್ಯಾಮೆರಾ ಸೂಕ್ತ ಜಾಗದಲ್ಲಿ ಅಳವಡಿಸುವಂತೆ ಹಾಗೂ ಆಗಾಗ್ಗೆ ಅವುಗಳ ಕಾರ್ಯವೈಖರಿ ಪರಿಶೀಲಿಸುವಂತೆ ತಿಳಿಸಿದರು.

ಬ್ಯಾಂಕ್‌ಗಳಲ್ಲಿನ ಅಲಾರಂ ವ್ಯವಸ್ಥೆಯನ್ನು ತುರ್ತು ಸಮಯದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಎಚ್ಚರಿಕೆಯನ್ನು ರವಾನಿಸುವ ರೀತಿಯಲ್ಲಿ ಮಾರ್ಪಡಿಸಿಕೊಳ್ಳಿ, ಎಲ್ಲಾ ಬ್ಯಾಂಕ್ ಗಳಿಗೆ ಸಶಸ್ತ್ರಧಾರಿ ಕಾವಲುಗಾರರನ್ನು ನೇಮಕ ಮಾಡಿ, ಕಾವಲುಗಾರರಿಗೆ ಶಸ್ತ್ರಾಸ್ತಗಳನ್ನು ಹೊಂದಲು ಪೊಲೀಸ್ ಇಲಾಖೆಯಿಂದ ಸೂಕ್ತ ಅನುಮತಿ ನೀಡಲಾಗುವುದು. ದೂರ ಪ್ರದೇಶದಲ್ಲಿರುವ ಮತ್ತು ಕಾವಲುಗಾರರಿಲ್ಲದ ಎಟಿಎಂಗಳನ್ನು ರಾತ್ರಿಯ ವೇಳೆ ಮುಚ್ಚುವುದು ಉತ್ತಮ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪ್ರದೇಶದಲ್ಲಿನ ಎಟಿಎಂಗಳ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದಲ್ಲಿ ಇ-ಬೀಟ್ ವ್ಯವಸ್ಥೆಯ ಮೂಲಕ ನಿರಂತರವಾಗಿ ಪರಿಶೀಲನೆ ನಡೆಸಲಾಗುವುದು ಎಂದರು.

ಬ್ಯಾಂಕ್‌ಗಳ ಹಿಂಭಾಗದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿಯ ವೇಳೆ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದ ಅವರು, ಬ್ಯಾಂಕ್‌ಗಳಲ್ಲಿನ ಸುರಕ್ಷತೆ ಬಗ್ಗೆ ಆಗಾಗ್ಗೆ ಅಣುಕು ಪರೀಕ್ಷೆ ಮಾಡಿ ಹೆಚ್ಚು ಸುರಕ್ಷಿತವಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಿ ಎಂದರು.

ಜಿಲ್ಲೆಯ ಮುಂಡಗೋಡ ಮತ್ತಿತರ ಪ್ರದೇಶದಲ್ಲಿ ಮೀಟರ್ ಬಡ್ಡಿಯ ಹಾವಳಿ ಇದ್ದು, ಇಲ್ಲಿನ ಬಡವರು, ಬೀದಿ ಬದಿ ವ್ಯಾಪಾರಿಗಳು ಹಾಗೂ ಅಮಾಯಕರಿಂದ ಖಾಲಿ ಚೆಕ್ ಪಡೆದು ಅವರನ್ನು ವಂಚಿಸುತ್ತಿರುವುದು ಕಂಡು ಬರುತ್ತಿದೆ, ಈ ಪ್ರದೇಶದಲ್ಲಿನ ಸಾರ್ವಜನಿಕರಿಗೆ ಬ್ಯಾಂಕ್ ಗಳಿಂದ ದೊರೆಯುವ ಸಾಲ ಸೌಲಭ್ಯದ ಬಗ್ಗೆ ಸಾಕ್ಷರತಾ ಕಾರ್ಯಕ್ರಮ ಆಯೋಜಿಸುವಂತೆ ಹಾಗೂ ಖಾಲಿ ಚೆಕ್ ನೀಡಿದರೆ ಆಗುವ ಪರಿಣಾಮಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ ಅವರಿಗೆ ವಿವಿಧ ಯೋಜನೆಗಳಲ್ಲಿ ಸಾಲ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಎಸ್ಪಿ ನಿರ್ದೇಶನ ನೀಡಿದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಇದ್ದರು.