ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಮಳೆಗಾಲ ಪ್ರಾರಂಭವಾಗಿದ್ದು, ಸಾಂಕ್ರಮಿಕ ರೋಗಗಳಾದ ಡೆಂಘೀ ಜ್ವರ ಮತ್ತು ಕಾಲರಾ ರೋಗ ಹರಡದಂತೆ ಮುಂಜಾಗ್ರತೆ ಕ್ರಮ ವಹಿಸಬೇಕೆಂದು ಯಾದಗಿರಿ ತಾಪಂ ಇಒ ಬಸವರಾಜ ಶರಭೈ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಇಲ್ಲಿನ ತಾಲೂಕು ಪಂಚಾಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ, ಸಾಂಕ್ರಮಿಕ ರೋಗಗಳು ಬಾರದಂತೆ ರಕ್ಷಿಸಿಕೊಳ್ಳಲು ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವುದು ಅಗತ್ಯವಿದೆ ಎಂದರು.ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಜಲ ಮೂಲಗಳ ಮಾಹಿತಿ ಪಡೆದುಕೊಂಡು, ನೀರಿನ ಪರೀಕ್ಷೆ ಮಾಡಿಸಿ, ಕುಡಿಯಲು ಯೋಗ್ಯವಿಲ್ಲದ ನೀರಿನ ಕೊಳೆವೆ ಬಾವಿಯನ್ನು ತಕ್ಷಣವೇ ಬಂದ ಮಾಡಿಸಬೇಕು. ನೀರಿನ ಟ್ಯಾಂಕ್ ಸ್ವಚ್ಛಗೊಳಿಸಬೇಕು. ಕುಡಿವ ನೀರಿನ ಪೈಪ್‌ಗಳು ಸೊರಿಕೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಚರಂಡಿ ಸ್ವಚ್ಛ ಗೊಳಿಸುವುದರ ಜೊತೆಗೆ ಗ್ರಾಮದಲ್ಲಿ ನೀರು ನೀಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ಕುಡಿಯುವ ನೀರು ಕಾಯಿಸಿ, ಸೋಸಿ ನೀರು ಕುಡಿಯುವಂತೆ ಗ್ರಾಮದಲ್ಲಿ ಡಂಗೂರ ಸಾರಿಸುವ ಮೂಲಕ ಸಾರ್ವಜನಿಕರಿಗೆ ತಿಳಿಸಬೇಕು. ಗ್ರಾಪಂ ಸಂಪನ್ಮೂಲದಿಂದ ಸೊಳ್ಳೆ ಪರದೆಗಳನ್ನು ಖರೀದಿ ಮಾಡುವಂತೆ ನಿರ್ದೇಶನ ನೀಡಿದರು.ತಾಲೂಕಿನಲ್ಲಿ ಈಗಾಗಲೇ 4 ಗ್ರಾಪಂಗಳಲ್ಲಿ ಕೂಸಿನ ಮನೆಗಳು ಪ್ರಾರಂಭವಾಗಿದ್ದು, ಇನ್ನು ಮೂರು ದಿನಗಳಲ್ಲಿ ಉಳಿದ 18 ಗ್ರಾಪಂ ಗಳಲ್ಲಿ ಕೂಸಿನ ಮನೆಗಳನ್ನು ಪ್ರಾರಂಭಿಸಬೇಕೆಂದು ಸೂಚಿಸಿದರು. ಸಭೆಯಲ್ಲಿ ತಾಲೂಕಿನ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ನರೇಗಾ ತಾಂತ್ರಿಕ ಸಹಾಯಕರು ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ವರ್ಗದವರು ಸೇರಿದಂತೆ ಇತರರಿದ್ದರು.