ಸಮಾಜದಲ್ಲಿ ಉತ್ತಮರನ್ನು ಗುರುತಿಸಿ, ಗೌರವಿಸುವುದು ಪ್ರಜ್ಞಾವಂತ ನಾಗರೀಕರ ಕರ್ತವ್ಯ: ಡಾ.ಕೆ.ಸುಧಾರಾವ್

| Published : Aug 01 2024, 12:30 AM IST

ಸಮಾಜದಲ್ಲಿ ಉತ್ತಮರನ್ನು ಗುರುತಿಸಿ, ಗೌರವಿಸುವುದು ಪ್ರಜ್ಞಾವಂತ ನಾಗರೀಕರ ಕರ್ತವ್ಯ: ಡಾ.ಕೆ.ಸುಧಾರಾವ್
Share this Article
  • FB
  • TW
  • Linkdin
  • Email

ಸಾರಾಂಶ

ರಂಗಸ್ವಾಮಿಯವರು ವಿಶ್ವವಿದ್ಯಾನಿಲಯದ ಕುಲಪತಿಯಾಗುವ ಎಲ್ಲ ಅರ್ಹತೆ ಹೊಂದಿದ್ದಾರೆ. ಅವರು ಹೊಂದಿರುವ ಕನ್ನಡದಲ್ಲಿನ ವಿದ್ವತ್ತು, ವಿವೇಕ, ಅರ್ಹತೆ ಬೇರೆ ಯಾವುದೇ ವಿಷಯದಲ್ಲಿ ಹೊಂದಿದ್ದರೂ ಅವರಿಂದು ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಬೆಳೆಯುತ್ತಿದ್ದರು. ಆದರೆ ಕನ್ನಡದ ಚೌಕಟ್ಟಿನೊಳಗೆ ಸೀಮಿತಗೊಳಿಸಿಕೊಂಡ ರಂಗಸ್ವಾಮಿ ಅವರಿಗೆ ಸಿಗಬೇಕಾದ ಗೌರವ, ಸ್ಥಾನಮಾನ ಕರ್ನಾಟಕದ ಒಳಗೆ ಅವಕಾಶ ವಂಚಿತರನ್ನಾಗಿ ಮಾಡಿತು.

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜದಲ್ಲಿ ಉತ್ತಮರನ್ನು ಗುರುತಿಸಿ ಗೌರವಿಸುವುದು ಪ್ರಜ್ಞಾವಂತ ನಾಗರೀಕರ ಆದ್ಯ ಕರ್ತವ್ಯ. ಇಲ್ಲದಿದ್ದರೆ, ನಮ್ಮ ಗೌರವವನ್ನು ನಾವೇ ಕಳೆದುಕೊಂಡಂತೆ. ಈ ನಿಟ್ಟಿನಲ್ಲಿ ಸತ್ಪುರುಷ, ಸಜ್ಜನ ಪ್ರಿಯರಾದ ಡಾ.ಕೆ.ರಂಗಸ್ವಾಮಿ ಅವರನ್ನು ಅಭಿನಂದಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾದದ್ದು ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಕೆ.ಸುಧಾರಾವ್ ಹೇಳಿದರು.

ಮಾನಸ ಗಂಗೋತ್ರಿಯ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಎ.ರಂಗಸ್ವಾಮಿ ಅವರಿಗೆ ಸಲ್ಲಿಸಿದ ಅಭಿವರ್ಧನ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಂಗಸ್ವಾಮಿಯವರು ವಿಶ್ವವಿದ್ಯಾನಿಲಯದ ಕುಲಪತಿಯಾಗುವ ಎಲ್ಲ ಅರ್ಹತೆ ಹೊಂದಿದ್ದಾರೆ. ಅವರು ಹೊಂದಿರುವ ಕನ್ನಡದಲ್ಲಿನ ವಿದ್ವತ್ತು, ವಿವೇಕ, ಅರ್ಹತೆ ಬೇರೆ ಯಾವುದೇ ವಿಷಯದಲ್ಲಿ ಹೊಂದಿದ್ದರೂ ಅವರಿಂದು ರಾಷ್ಟ್ರಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ ಬೆಳೆಯುತ್ತಿದ್ದರು. ಆದರೆ ಕನ್ನಡದ ಚೌಕಟ್ಟಿನೊಳಗೆ ಸೀಮಿತಗೊಳಿಸಿಕೊಂಡ ರಂಗಸ್ವಾಮಿ ಅವರಿಗೆ ಸಿಗಬೇಕಾದ ಗೌರವ, ಸ್ಥಾನಮಾನ ಕರ್ನಾಟಕದ ಒಳಗೆ ಅವಕಾಶ ವಂಚಿತರನ್ನಾಗಿ ಮಾಡಿತು ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಅಧ್ಯಾಪಕರ ಕೊರತೆ ಇತ್ತು. ಮೈಸೂರು ವಿಶ್ವವಿದ್ಯಾನಿಲಯದ ಅಧ್ಯಾಪಕರನ್ನು ನಿಯೋಜಿಸಿಕೊಂಡು ಅಲ್ಲಿನ ಅಧ್ಯಾಪಕರಿಗೆ ಇಲ್ಲಿ ವೇತನ ನೀಡಲಾಗುತ್ತಿತ್ತು. ಇದಕ್ಕೆ ಮುಕ್ತಿ ನೀಡಿ ಕಾಯಂ ಅಧ್ಯಾಪಕ ಅಧ್ಯಾಪಕೇತರರನ್ನು ನೇಮಕ ಮಾಡಿಕೊಂಡ ಕೀರ್ತಿ ನಮ್ಮಿಬ್ಬರ ಕಾಲದ್ದು ಎಂಬ ಹೆಮ್ಮೆ ನಮಗಿದೆ. ಅವರೆಲ್ಲರು ಇಂದು ಈ ಕಾರ್ಯಕ್ರಮದಲ್ಲಿ ಡಾ. ಎ.ರಂಗಸ್ವಾಮಿ ಅವರಿಗೆ ಕೃತಜ್ಞತಾಪೂರ್ವಕ ಅಭಿನಂದನೆ ಸಲ್ಲಿಸಬೇಕಾಗಿತ್ತು. ಆದರೆ ಅವರ ಅನುಪಸ್ಥಿತಿ ಅವರಿಗೆ ಅವರೇ ಮಾಡಿಕೊಂಡ ಆತ್ಮವಂಚನೆಯಾಗಿದೆ ಎಂದರು.

ನಾನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕುಲಪತಿಯಾಗಿ ಬಂದಾಗ ಮೈಸೂರಿನವಳಾದ ನನಗೆ ಯಾರ ಪರಿಚಯವು ಇರಲಿಲ್ಲ. ದೆಹಲಿ ಮತ್ತು ಜೈಪುರದಲ್ಲಿ ಸೇವೆ ಸಲ್ಲಿಸಿ ಬಂದ ನನಗೆ ಅನೇಕ ವರ್ಷಗಳ ಕಾಲ ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ತರಬೇತಿ ಕೊಡುವ ಕಾರ್ಯ ಮಾಡಿದೆ. ಆದರೆ ಒಂದಷ್ಟು ವರ್ಷಗಳ ಕಾಲ ಒಂದು ನಿರ್ದಿಷ್ಟ ಸಂಸ್ಥೆಯಲ್ಲಿ ಕೂತು ಕೆಲಸ ಮಾಡಬೇಕು ಎಂಬ ಆಸೆಯಿಂದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಯಾಗಿ ಬಂದಾಗ, ಕುಲಸಚಿವರಾಗಿ ಬಂದ ಡಾ. ಎ. ರಂಗಸ್ವಾಮಿ ಅವರು ನನ್ನ ಎಲ್ಲ ಕಾರ್ಯಗಳಿಗೆ ಒಡಹುಟ್ಟಿದ ತಮ್ಮನಂತೆ ಬೆನ್ನೆಲುಬಾಗಿ ನಿಂತರು, ಆ ಕ್ಷಣವನ್ನು ನಾನು ಎಂದೂ ಮರೆಯಲು ಸಾಧ್ಯವಿಲ್ಲ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಯಾವುದೋ ವಿಶ್ವವಿದ್ಯಾನಿಲಯದ ವಿಭಾಗದಂತಿತ್ತು. ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಫಂಡ್ ಇರಲಿಲ್ಲ. ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರನ್ನು ಕೊಡಲೇಬೇಕೆಂದು ಹಠ ಹಿಡಿದು ಫಂಡ್ ಬಿಡುಗಡೆಗೊಳಿಸಿದೆವು. ಆ ಫಂಡ್ ನಿಂದ ಕೆಎಸ್.ಓಯು ಗೆ ಒಂದು ನಿರ್ಧಿಷ್ಟ ರೂಪಕೊಟ್ಟು ಬಹುಮಹಡಿ ಕಟ್ಟಡ ನಿರ್ಮಾಣ ಮಾಡಿದೆವು. ಇದರ ಹಿಂದಿನ ಧಣಿವರಿಯದ ಸೇವೆ ಡಾ. ಎ. ರಂಗಸ್ವಾಮಿ ಅವರದು ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪಿ. ಬೆಟ್ಟೇಗೌಡ ಅವರು ಅಭಿನಂದನಾ ಗ್ರಂಥ ಕುರಿತು ಮಾತನಾಡಿದರು.

ಅರಕಲಗೂಡಿನ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಡಾ. ರಾಗೌ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಮತ್ತು ಕರ್ನಾಟಕ ಸಂಘದ ಅಧ್ಯಕ್ಷರಾದ ಪ್ರೊ. ಜಯಪ್ರಕಾಶ್ ಗೌಡ ಮತ್ತು ಸಂಘಟಕರಾದ ಡಾ. ನೀ.ಗೂ. ರಮೇಶ್, ಡಾ.ಮೈಸೂರು ಉಮೇಶ್ ಮೊದಲಾದವರು ಇದ್ದರು.