ತಲಕಾವೇರಿ: ‘ನಮಾಮಿ ಕಾವೇರಿ ಯೋಜನೆ’ಗೆ ಚಾಲನೆ

| Published : Jun 21 2024, 01:11 AM IST / Updated: Jun 21 2024, 09:13 AM IST

ತಲಕಾವೇರಿ: ‘ನಮಾಮಿ ಕಾವೇರಿ ಯೋಜನೆ’ಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ನಮಾಮಿ ಕಾವೇರಿ ಯೋಜನೆಗೆ ತಲಕಾವೇರಿ ಕ್ಷೇತ್ರದಲ್ಲಿ ಸಂಕಲ್ಪ ಮಾಡುವ ಮೂಲಕ ಚಾಲನೆ ನೀಡಲಾಯಿತು. ಭಾಗಮಂಡಲ, ನಾಪೋಕ್ಲು ವ್ಯಾಪ್ತಿಯಲ್ಲಿ ಗ್ರಾಮ ಮಟ್ಟದಲ್ಲಿ ನಮಾಮಿ ಕಾವೇರಿ ತಂಡಗಳನ್ನು ರಚಿಸಲಾಯಿತು.

ನಾಪೋಕ್ಲು: ಕಾವೇರಿ ರಿವರ್ ಸೇವಾ ಟ್ರಸ್ಟ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕರ್ನಾಟಕ ಜನಜಾಗೃತಿ ವೇದಿಕೆ, ಯೋಜನೆಯ ಶೌರ್ಯ ತಂಡ ಸಂಯುಕ್ತ ಆಶ್ರಯದಲ್ಲಿ ನಮಾಮಿ ಕಾವೇರಿ ಯೋಜನೆಗೆ ತಲಕಾವೇರಿ ಕ್ಷೇತ್ರದಲ್ಲಿ ಸಂಕಲ್ಪ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಕಾವೇರಿ ನದಿ ಸಂರಕ್ಷಣೆಯ ನಿಟ್ಟಿನಲ್ಲಿ ನೇರವಾಗಿ ಕಲುಷಿತ ತಪ್ಪಿಸುವ ಸಂಬಂಧ ನದಿ ತಟದ ಜನರಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಜಾಗೃತಿ ಮೂಡಿಸುವ ಯೋಜನೆ ಇದಾಗಿದ್ದು, ಬುಧವಾರ ಕ್ಷೇತ್ರದಲ್ಲಿ ಸಂಕಲ್ಪ ಮಾಡುವ ಮೂಲಕ ಭಾಗಮಂಡಲ, ನಾಪೋಕ್ಲು ವ್ಯಾಪ್ತಿಯಲ್ಲಿ ಗ್ರಾಮ ಮಟ್ಟದಲ್ಲಿ ನಮಾಮಿ ಕಾವೇರಿ ತಂಡಗಳನ್ನು ರಚಿಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ನೇತ್ರಾವತಿ ನದಿಯ ಸಂರಕ್ಷಣೆಗಾಗಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶ್ರೀ ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿಗಳ ಸೂಚನೆಯಂತೆ ಈಗಾಗಲೇ ಸ್ವಚ್ಛತಾ ಕಾರ್ಯಕ್ರಮಗಳು ನಡೆಯುತ್ತಿವೆ. ಜೀವನದಿ ಕಾವೇರಿ ಬಗ್ಗೆ ಕೂಡ ಕಾಳಜಿ ಹೊಂದಿರುವ ಡಾ.ವೀರೇಂದ್ರ ಹೆಗ್ಗಡೆ ಅವರ ಸೂಚನೆ ಮೇರೆಗೆ ಕೊಡಗು ಜಿಲ್ಲೆಯಲ್ಲಿ ತಲಕಾವೇರಿಯಿಂದ ರಾಮನಾಥಪುರ ತನಕ ನದಿ ತಟದ ಸಂರಕ್ಷಣೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ಎಂದು ಹೇಳಿದ್ದಾರೆ.

ಭಾಗಮಂಡಲ ವಿಎಸ್‌ಎಸ್ಎನ್‌ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಸತೀಶ್ ಜೋಯಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಯಕರ್ತರೊಂದಿಗೆ ಚರ್ಚಿಸಿ ಸ್ವಚ್ಛ ಕಾವೇರಿಯ ಗುರಿಯೊಂದಿಗೆ ನಮಾಮಿ ಕಾವೇರಿ ತಂಡಗಳನ್ನು ಆಯ್ಕೆ ಮಾಡಲಾಯಿತು. ಈ ಸಮಿತಿಗಳು ಕಾವೇರಿ ರಿವರ್ ಸೇವಾ ಟ್ರಸ್ಟ್ ಪ್ರಮುಖರ ನೇತೃತ್ವದಲ್ಲಿ ಸ್ವಚ್ಛ ಕಾವೇರಿಗಾಗಿ ನಮಾಮಿ ಕಾವೇರಿ ಮೂಲಕ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಎಂದು ತಿಳಿಸಿದರು.

ಕಾವೇರಿ ರಿವರ್ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ಎನ್‌. ಚಂದ್ರಮೋಹನ್ ಮಾತನಾಡಿ, ಜೀವನದಿ ಕಾವೇರಿ ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯಲ್ಲಿ ಕಲುಷಿತಗೊಳ್ಳುವ ಮೂಲಕ ತನ್ನ ಮೂಲ ಅಸ್ತಿತ್ವವನ್ನು ಕಳೆದುಕೊಳ್ಳುವಂತಾಗಿದೆ. ಈ ಸಂಬಂಧ ಸ್ಥಳೀಯರ ಪಾಲ್ಗೊಳ್ಳುವಿಕೆ ಮೂಲಕ ನದಿಯ ಸಂರಕ್ಷಣೆಗಾಗಿ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದೊಂದಿಗೆ ಗ್ರಾಮ ಮಟ್ಟದ ತಂಡಗಳನ್ನು ರಚಿಸುವ ಚಿಂತನೆ ಹೊಂದಲಾಗಿದೆ ಎಂದರು.

ಭಾಗಮಂಡಲ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಗಂಗಮ್ಮ, ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ , ತಾಲೂಕು ಯೋಜನಾಧಿಕಾರಿ ಪುರುಷೋತ್ತಮ್, ಕಾವೇರಿ ಮಹಾ ಆರತಿ ಬಳಗದ ಸಂಚಾಲಕಿ ವನಿತಾ ಚಂದ್ರಮೋಹನ್, ಕಾವೇರಿ ರಿವರ್ ಸೇವಾ ಟ್ರಸ್ಟ್ ನಿರ್ದೇಶಕ ಕೃಷ್ಣಮೂರ್ತಿ ಭಟ್, ಸಂಘದ ಮೇಲ್ವಿಚಾರಕರಾದ ಸುನಿಲ್ ಕುಮಾರ್, ಸೇವಾ ಪ್ರತಿನಿಧಿ ವೆಂಕಟರಮಣ ಇದ್ದರು.

ಸಂಗಮದಲ್ಲಿ ಕಾವೇರಿ ನದಿಗೆ ವಿಶೇಷ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಿರಿಯ ಅರ್ಚಕ, ಕಾವೇರಿ ರಿವರ್ ಸೇವಾ ಟ್ರಸ್ಟ್ ನ ಕೃಷ್ಣಮೂರ್ತಿ ಭಟ್ ಆರತಿ ಮಹತ್ವದ ಬಗ್ಗೆ ಮಾಹಿತಿ ನೀಡಿದರು.