ಸಾರಾಂಶ
- ವಿಜಯಪುರ ಶಾಸಕರಿಗೆ ಚಂದ್ರಶೇಖರ ಪೂಜಾರ ಎಚ್ಚರಿಕೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಬಗ್ಗೆ ಕೇವಲವಾಗಿ, ಹಗುರವಾಗಿ ಮಾತನಾಡಿದರೆ ಪರಿಣಾಮ ನೆಟ್ಟಗಿರದು ಎಂದು ವಿಜಯಪುರ ಶಾಸಕ ಯತ್ನಾಳ್‌ಗೆ ಶ್ರೀಪೀಠದ ಧರ್ಮದರ್ಶಿ, ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ ಎಚ್ಚರಿಕೆ ರವಾನಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ವಚನಾನಂದ ಸ್ವಾಮೀಜಿ ಬಗ್ಗೆ ಲಘುವಾಗಿ ಮಾತನಾಡಿ, ಹತ್ತಾರು ಕೋಟಿ ಲೂಟಿ ಮಾಡಿದ್ದಾರೆಂಬ ಆರೋಪ ಸತ್ಯಕ್ಕೆ ದೂರವಾದುದು. ಬಸವನಗೌಡ ಪಾಟೀಲ ಯತ್ನಾಳ್ ಬಳಸಿದ ಪದಗಳಂತಹ ಸ್ವಾಮೀಜಿ ನಮ್ಮವರಲ್ಲ ಎಂದರು.
ಹರಿಹರ ಪೀಠ ಯಾರೋ ಆಡಳಿತ ಮಾಡುವ ಪೀಠವಲ್ಲ. ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ಸೇರಿದಂತೆ ಧರ್ಮದರ್ಶಿಗಳಿದ್ದೇವೆ. ಚೆಕ್‌ಗೆ ಸಹಿ ಹಾಕುವ ಅಧಿಕಾರಿ ಸಹಿತ ಸ್ವಾಮೀಜಿ ಹೊಂದಿಲ್ಲ. ಯತ್ನಾಳ್ ಅವರೇ, ನಿಮಗೆ ಸಮಯ ಸಿಕ್ಕಾಗ ಹರಿಹರ ಪೀಠಕ್ಕೆ ಒಮ್ಮೆ ಭೇಟಿ ನೀಡಿ. ಸರ್ಕಾರದಿಂದ ₹10 ಕೋಟಿ ಸಹಾಯ ಪಡೆದು, ₹35 ಕೋಟಿ ವೆಚ್ಚದ ಕೆಲಸ ಮಾಡಿದ್ದು ನಮ್ಮ ಪೀಠ ಎಂದು ತಿರುಗೇಟು ನೀಡಿದರು.ದಿನದ 24 ಗಂಟೆ ದಾಸೋಹ ಸೇವೆಗೈಯ್ಯುವ ಮಠ ನಮ್ಮದು. ಶ್ರೀ ಪೀಠದ ಬಗ್ಗೆ, ಶ್ರೀಗಳ ಬಗ್ಗೆ ಹಗುರ ಮಾತನಾಡಿದರೆ ಸಮಾಜದ ನಾಯಕನಾಗಿ ಎಚ್ಚರಿಕೆ ನೀಡುತ್ತಿದ್ದೇನೆ. ನಾವು ಬೀದಿಗಿಳಿದರೆ ಸರಿ ಇರುವುದಿಲ್ಲ. ಶ್ರೀ ವಚನಾನಂದ ಸ್ವಾಮೀಜಿಗೆ ಏಕವಚನದಲ್ಲಿ ಯತ್ನಾಳ್ ಮಾತನಾಡುತ್ತಿದ್ದು, ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನಿಮಗೆ ಅಂದಂತೆ ಅಂತಾ ಅರ್ಥ ಮಾಡಿಕೊಳ್ಳಬೇಕು. ಖಾವಿಗೆ ಮಾತನಾಡಿದರೆ ಅದು ಎಲ್ಲ ಖಾವಿಧಾರಿಗಳಿಗೂ ಅಂದಂತೆ. ಕೂಡಲ ಶ್ರೀಗಳ ಬಗ್ಗೆ ನಮಗೆ ಗೌರವ, ಅಭಿಮಾನವಿದೆ. ವೀರಶೈವ ಲಿಂಗಾಯತಕ್ಕೆ, ಪಂಚಮಸಾಲಿ ಮೀಸಲಾತಿಗಾಗಿ ನಿಮ್ಮ ಹೋರಾಟಕ್ಕೆ ಗೌರವ, ಅಭಿಮಾನವಿದೆ. ಆದರೆ, ಯತ್ನಾಳರಂತಹ ವ್ಯಕ್ತಿ ಪರ ಮಾತನಾಡಿ, ಆ ಗೌರವಕ್ಕೆ ಯಾಕೆ ಕುಂದು ತಂದುಕೊಳ್ಳುತ್ತೀರಿ ಎಂದು ಅವರು ಪ್ರಶ್ನಿಸಿದರು.
ಯತ್ನಾಳ ಮಾತು ಸಮಾಜದ ಉದ್ಧಾರಕ್ಕಲ್ಲ. ಅಂತಹ ಹರಕು, ಹೊಲಸು ಬಾಯಿಯಿಂದ ನಿಮ್ಮ ಗೌರವವನ್ನೂ ಕಡಿಮೆ ಮಾಡುತ್ತಿದ್ದಾರೆ. ಸಂಸದ, ಕೇಂದ್ರ ಸಚಿವ, ಈಗ ಶಾಸಕನಾಗಿ ಸಮಾಜವನ್ನು ಪ್ರತಿನಿಧಿಸಿದ್ದರೆ ಇಂದು ಯತ್ನಾಳ್ ಏನೋ ಆಗಿರುತ್ತಿದ್ದರೇನೋ. ಇನ್ನಾದರೂ ತಮ್ಮ ಬಾಯಿ ಮೇಲೆ ಹಿಡಿತ ಇಟ್ಟುಕೊಂಡು ಸುಮ್ಮನಿರಲಿ ಎಂದರು.ಬಿಜೆಪಿಯಲ್ಲಿ ಮುರುಗೇಶ ನಿರಾಣಿ, ಸಿ.ಸಿ.ಪಾಟೀಲ, ಕತ್ತಿ, ಅರವಿಂದ ಬೆಲ್ಲದ್ ಸೇರಿದಂತೆ ಅನೇಕ ನಾಯಕರಿದ್ದಾರೆ. ಇಂತಹ ಅಗ್ರಗಣ್ಯ ನಾಯಕರಿಗೆ ಭವಿಷ್ಯವೂ ಇದೆ. ಹಾಗಾಗಿ, ಸ್ವಾಮೀಜಿ ಯಾರೋ ಒಬ್ಬ ವ್ಯಕ್ತಿಗೆ ಓಲೈಸುವುದನ್ನು ನಿಲ್ಲಿಸಲಿ ಎಂದು ಮನವಿ ಮಾಡಿದರು.
- - -