ಸಾರಾಂಶ
ಈ ಕುರಿತು ಬಹಿಷ್ಕಾರಕ್ಕೆ ಒಳಗಾದ ಮೂರು ಕುಟುಂಬದ ಮುಖ್ಯಸ್ಥರು ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಕುಷ್ಟಗಿ
ಹದಿನೈದು ವರ್ಷಗಳ ಹಿಂದಿನ ಹಣಕಾಸು ವ್ಯವಹಾರದ ಹಿನ್ನೆಲೆಯಲ್ಲಿ ತಾಲೂಕಿನ ಹನುಮಸಾಗರದಲ್ಲಿ ಮುಸ್ಲಿಂ ಸಮಾಜವು (ತಂಜೀಮ್ ಇಸ್ಲಾಂ ಸಮಿತಿ) ತಮ್ಮದೇ ಸಮಾಜದ ಮೂರು ಕುಟುಂಬಗಳಿಗೆ ಬಹಿಷ್ಕಾರ ಹಾಕಿದ್ದು, ಅವರ ಜೊತೆ ಯಾವುದೇ ವ್ಯವಹಾರ ಮಾಡಬಾರದು, ಅವರ ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮಗಳಿಗೆ ಹೋಗಬಾರದು, ಅವರು ಇನ್ನಿತರ ಕಾರ್ಯಕ್ರಮಗಳಿಗೆ ಬರುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ.ಈ ಕುರಿತು ಬಹಿಷ್ಕಾರಕ್ಕೆ ಒಳಗಾದ ಮೂರು ಕುಟುಂಬದ ಮುಖ್ಯಸ್ಥರು ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಅಹ್ಮದಹುಸೇನ ಹೊಸಮನಿ ಮಾತನಾಡಿ, ಮೂರು ಕುಟುಂಬಗಳಿಗೆ ಮುಸ್ಲಿಂ ಸಮಾಜದವರು ಜಮಾತ್‌ನಿಂದ ಬಹಿಷ್ಕಾರ ಹಾಕಿದ್ದಾರೆ. ಹಲವು ಸಲ ಮನವಿ ಮಾಡಿಕೊಂಡರೂ ಸಹಿತ ನಮ್ಮನ್ನು ಸೇರಿಸಿಕೊಳ್ಳುತ್ತಿಲ್ಲ. ಆದ ಕಾರಣ ಈ ಕುರಿತು ತಹಸೀಲ್ದಾರಗೆ ಮನವಿ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಸಿಪಿಐ, ಎಸ್ಪಿಗೆ ದೂರು ಕೊಡಲಾಗುವುದು ಎಂದರು.ಸುಮಾರು 15 ವರ್ಷದ ಹಿಂದೆ ಮಾಡಿರುವ ಹಣಕಾಸಿನ ವ್ಯವಹಾರವನ್ನು ಮುಂದಿಟ್ಟುಕೊಂಡು ಈಗ ನಮ್ಮ ಮೂರು ಕುಟುಂಬಗಳನ್ನು ಸಮಾಜದಿಂದ ಹೊರಗಡೆ ಹಾಕಿದ್ದಾರೆ. ಇದರಿಂದ ನಾವು ನಮ್ಮ ಸಂಬಂಧಿಕರೊಂದಿಗೆ ಸಭೆ-ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ಕೊಡುತ್ತಿಲ್ಲ, ಅವರೂ ನಮ್ಮ ಕಾರ್ಯಕ್ರಮಗಳಿಗೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಕಳೆದ 9 ತಿಂಗಳಿಂದ ಹೇರಿರುವ ಈ ಬಹಿಷ್ಕಾರದಿಂದ ನಮ್ಮ ಕುಟುಂಬದ ಸದಸ್ಯರು ಭಯಭೀತರಾಗಿದ್ದೇವೆ. ನಾವು ನಮ್ಮ ಸಹೋದರ, ಸಹೋದರಿಯರು, ಸಂಬಂಧಿಕರ ಮನೆಗಳಿಗೆ ಹೋಗಲು ಹಾಗೂ ಅವರು ನಮ್ಮನೆಗೆ ಬರಲು ನಿರ್ಬಂಧ ಹೇರಿದ್ದಾರೆ. ಇದರಿಂದ ಸಹಬಾಳ್ವೆ ನಡೆಸುವುದು ತುಂಬಾ ಕಷ್ಟವಾಗಿದೆ ಎಂದರು.ಆದ ಕಾರಣ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ತಂಜೀಮ್ ಇಸ್ಲಾಂ ಕಮೀಟಿಯ ಅಧ್ಯಕ್ಷ ನಜೀರಸಾಬ ಮೆಣೆದಾಳ ಮತ್ತು ಪದಾಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ನಮ್ಮ ಮೇಲೆ ಹೇರಿರುವ ಬಹಿಷ್ಕಾರ ತೆರವುಗೊಳಿಸಿ ನಮ್ಮನ್ನು ಸಹಿತ ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಡಬೇಕು ಎಂದರು.
ಈ ಸಂದರ್ಭ ಬಹಿಷ್ಕಾರಕ್ಕೆ ಒಳಪಟ್ಟಿರುವ 2 ಕುಟುಂಬದ ಮುಖ್ಯಸ್ಥರಾದ ಹುಸೇನಸಾಬ ಹೊಸಮನಿ ಹಾಗೂ ಹಸೇನಸಾಬ ಹೊಸಮನಿ ಇದ್ದರು.ತಪ್ಪನ್ನು ಒಪ್ಪಿಕೊಂಡರೆ ಮರುಸೇರ್ಪಡೆ:
ಕೆಲ ಕಾರಣಗಳಿಂದ ನಮ್ಮ ಸಮಾಜದ ಎಲ್ಲರ ಒಪ್ಪಿಗೆ ಮೇರೆಗೆ ಅವರನ್ನು ಸಮಾಜದಿಂದ ಹೊರಗಡೆ ಇಡಲಾಗಿದೆ. ಅವರಿಗೆ ಈಗಾಗಲೇ ತಿಳಿಸಲಾಗಿದ್ದು, ಹಿರಿಯರ ಜೊತೆಗೆ ಬಂದು ತಪ್ಪನ್ನು ಒಪ್ಪಿಕೊಂಡರೆ ನಮ್ಮ ಸಮಾಜಕ್ಕೆ ಮರು ಸೇರಿಸಿಕೊಳ್ಳಲಾಗುತ್ತದೆ ಎಂದು ತಂಜೀಮ್ ಇಸ್ಲಾಂ ಕಮಿಟಿ ಅಧ್ಯಕ್ಷ ನಜೀರಸಾಬ ಮೆಣೆದಾಳ ತಿಳಿಸಿದ್ದಾರೆ.