ಸಾರಾಂಶ
ತೇಜಸ್ವಿ ಪ್ರತಿಷ್ಠಾನದಲ್ಲಿ ತೇಜಸ್ವಿ ನೆನಪು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಕೊಟ್ಟಿಗೆಹಾರಸಾಮಾನ್ಯರ ಅನುಭವಗಳಿಗೆ ದಿಕ್ಸೂಚಿಯಾಗಿ ಸಾಮಾನ್ಯರ ಮೂಲಕ ಚರಿತ್ರೆಯನ್ನು ಕಟ್ಟಿದವರು ತೇಜಸ್ವಿ ಎಂದು ಲೇಖಕ ಡಾ.ನರೇಂದ್ರ ರೈ ದೇರ್ಲ ಹೇಳಿದರು.ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಭಾನುವಾರ ನಡೆದ ತೇಜಸ್ವಿ ನೆನಪು ಕಾರ್ಯಕ್ರಮ ಹಾಗೂ ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಕಾರ್ಯಕ್ರಮದಲ್ಲಿ ತೇಜಸ್ವಿ ಅರಿವಿನ ಇರವು ವಿಷಯ ಕುರಿತು ಅವರು ಮಾತನಾಡಿದರು.ಪ್ರಕೃತಿಯನ್ನು ಗೆಲ್ಲುವುದೆಂದರೇ ಪ್ರಕೃತಿಯ ಮೇಲೆ ಸವಾರಿ ಮಾಡುವುದಲ್ಲ. ಪ್ರಕೃತಿಗೆ ವಿದಾಯರಾಗಿರುವುದು. ನೆಲ ಜಲದ ಸಂರಕ್ಷಣೆ ಮಹತ್ವವನ್ನು ತಮ್ಮ ಕೃತಿಗಳಲ್ಲಿ ತಂದವರು ತೇಜಸ್ವಿ. ಅತಿರೇಕಕ್ಕೆ ಬಿದ್ದು ಬರೆಯುವ ಲೇಖನಗಳನ್ನು ತೇಜಸ್ವಿ ಅವರು ಕೊಡಲಿಲ್ಲ. ತಮ್ಮದೇ ಆದ ವಿಶಿಷ್ಠ ಮಾದರಿ ಬರಹಗಳನ್ನು ಕೊಟ್ಟವರು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಎಲೆಕ್ಟ್ರೀಷಿಯನ್ ಮತ್ತು ಸೂಪರ್ ವೈಸರ್ ಶ್ರೀನಿವಾಸ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನವೂ ಚಾರಣ, ವಿಚಾರ ಸಂಕಿರಣ, ಸಂವಾದ, ನಾಟಕ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ತೇಜಸ್ವಿ ಪ್ರತಿಷ್ಠಾನದಲ್ಲಿ ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ, ಗ್ರಂಥಾಲಯ, ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಕಲಾಕೃತಿಗಳ ಗ್ಯಾಲರಿ ನಿರ್ಮಾಣ ವಾಗಿದ್ದು ಮುಂದಿನ ದಿನಗಳಲ್ಲಿ ಆರ್ಕಿಡೇರಿಯಂ ಮತ್ತು ಚಿಟ್ಟೆ ಉದ್ಯಾನವನ ನಿರ್ಮಾಣವಾಗಲಿದೆ ಎಂದರು.ತೇಜಸ್ವಿ ಒಡನಾಡಿಗಳು ಮತ್ತು ಕಲಾವಿದರಾದ ಬಾಪು ದಿನೇಶ್ ಮಾತನಾಡಿ, ತೇಜಸ್ವಿ ಅವರು ನಿತ್ಯ ಬದುಕಿನ ವಿವರ ಗಳನ್ನು ಜನಸಾಮಾನ್ಯರ ಬದುಕು ಬವಣೆಗಳನ್ನು ತಮ್ಮ ವಿಶಿಷ್ಠ ನಿರೂಪಣಾ ಶೈಲಿಯಿಂದ ಓದುಗರಿಗೆ ಓದಿನ ರುಚಿ ಹತ್ತಿಸಿ ದವರು. ತೇಜಸ್ವಿ ಅವರ ಸಾಹಿತ್ಯದಿಂದ ಹೊಸ ಓದುಗ ವರ್ಗ ಸೃಷ್ಠಿಯಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಲೇಖಕರು ಹಾಗೂ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಡಾ. ಪ್ರದೀಪ್ ಕೆಂಜಿಗೆ, ತಾಂತ್ರಿಕ ಸಹಾಯಕರಾದ ನವದೀಪ್, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ಕೀಟ ತಜ್ಞ ಡಾ.ಅವಿನಾಶ್, ಲೇಖಕ ಪೂರ್ಣೇಶ್ ಮತ್ತಾವರ, ತಾಂತ್ರಿಕ ನಿರ್ವಾಹಕ ಸ್ಯಾಮ್ಯುಯೆಲ್ ಹ್ಯಾರಿಸ್ ಇದ್ದರು.
-- ಬಾಕ್ಸ್--ಜನಮನ ಸೆಳೆದ ಕ್ಯಾಲಿಗ್ರಫಿ ಪ್ರದರ್ಶನ:ತೇಜಸ್ವಿ ಅವರ 86 ನೇ ಹುಟ್ಟುಹಬ್ಬದ ಪ್ರಯುಕ್ತ ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಪ್ರದರ್ಶನ ನಡೆದಿದ್ದು 50 ಕ್ಕೂ ಹೆಚ್ಚು ಕ್ಯಾಲಿಗ್ರಫಿ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ವಿವಿಧ ವಿನ್ಯಾಸ ಆಕರ್ಷಕ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆದವು. ತುಮಕೂರು, ಬೆಂಗಳೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ತೇಜಸ್ವಿ ಓದುಗರು, ಅಭಿಮಾನಿಗಳು ಆಗಮಿಸಿದ್ದರು.
8 ಕೆಸಿಕೆಎಂ 4ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಭಾನುವಾರ ನಡೆದ ತೇಜಸ್ವಿ ನೆನಪು ಕಾರ್ಯಕ್ರಮ ಹಾಗೂ ತೇಜಸ್ವಿ ಸಾಲುಗಳ ಕ್ಯಾಲಿಗ್ರಫಿ ಕಾರ್ಯಕ್ರಮದಲ್ಲಿ ತೇಜಸ್ವಿ ಅರಿವಿನ ಇರವು ವಿಷಯದ ಬಗ್ಗೆ ಲೇಖಕರಾದ ಡಾ.ನರೇಂದ್ರ ರೈ ದೇರ್ಲ ಮಾತನಾಡಿದರು.;Resize=(128,128))
;Resize=(128,128))
;Resize=(128,128))