ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ. ರಾಜಧಾನಿ ಬೆಂಗಳೂರಿನ ವಿಧಾನಸೌಧದಂತೆ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯ್ತಿ ಕಟ್ಟಡಗಳು ಶಕ್ತಿಸೌಧಗಳಾಗಿ ಕೆಲಸ ನಿರ್ವಹಿಸುತ್ತಿವೆ ಎಂದು ಶಾಸಕ ಎಚ್.ಟಿ.ಮಂಜು ಅಭಿಪ್ರಾಯಪಟ್ಟರು.ತಾಲೂಕಿನ ಸ್ವಗ್ರಾಮ ಹರಳಹಳ್ಳಿಯಲ್ಲಿ ನೂತನ ಗ್ರಾಮ ಪಂಚಾಯ್ತಿ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಆಡಳಿತದ ವಿಕೇಂದ್ರೀಕರಣ ದೃಷ್ಟಿಯಿಂದ ಸರ್ಕಾರ ನೂರಾರು ಯೋಜನೆಗಳನ್ನು ಗ್ರಾಪಂಗಳ ಮೂಲಕ ಅನುಷ್ಠಾನ ಮಾಡುತ್ತಿದೆ ಎಂದರು.
ಸುಮಾರು 10-12 ಗ್ರಾಮಗಳ ವ್ಯಾಪ್ತಿಯಲ್ಲಿ ಒಂದೊಂದು ಗ್ರಾಪಂ ಕಟ್ಟಡಗಳಲ್ಲಿ ಎಲ್ಲಾ ರೀತಿಯ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಗಣಕೀಕೃತ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಕೆಲಸ ಕಾರ್ಯಗಳು ವೇಗವಾಗಿ ಸಾಗುವಂತೆ ಮಾಡಲಾಗಿದೆ ಎಂದರು.ಸುಸಜ್ಜಿತ ಹಾಗೂ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಗ್ರಾಪಂ ಕಟ್ಟಡಗಳ ಅವಶ್ಯಕವಿದೆ. ನನ್ನ ಸ್ವಗ್ರಾಮದಲ್ಲಿ ಹಳೆಯ ಹಾಗೂ ಶಿಥಿಲವಾದ ಕಟ್ಟಡವನ್ನು ನೆಲಸಮಗೊಳಿಸಿ ಸುಸಜ್ಜಿತ ಕಟ್ಟಡ ಕಟ್ಟಲು ತೀರ್ಮಾನಿಸಿ ಭೂಮಿಪೂಜೆ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದರು.ಹುಟ್ಟೂರಿನ ಋಣ ತೀರಿಸುವೆ:ಶಾಸಕನಾಗಿ ತಾಲೂಕಿನ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಜೊತೆಗೆ ಸ್ವಗ್ರಾಮ ಅಭಿವೃದ್ಧಿಗೂ ಚಿತ್ತ ಹರಿಸಬೇಕಿದೆ. ಆ ಮೂಲಕ ಜನ್ಮಭೂಮಿಯ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದರು. ಕ್ಷೇತ್ರದಾದ್ಯಂತ ಸಂಚರಿಸಿ ಕಾರ್ಯಕರ್ತರ ಹಾಗೂ ಜನಸಾಮಾನ್ಯರ ಕಷ್ಟಸುಖಗಳಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ. ರಾಜ್ಯದಲ್ಲಿ ವಿಪಕ್ಷದ ಸರ್ಕಾರ ಇದ್ದರೂ ನನ್ನ ಶಕ್ತಿಮೀರಿ ಅನುದಾನ ತರಲು ಯತ್ನಿಸುತ್ತಿದ್ದೇನೆ. ಇದಕ್ಕಾಗಿ ಸಿಎಂ ಹಾಗೂ ಸಚಿವರ ಬಳಿ ತೆರಳಿ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದೇನೆ. ಇನ್ನೂ ಮೂರುವರೆ ವರ್ಷಗಳ ಅವಧಿಯಲ್ಲಿ ನನ್ನ ನಿರೀಕ್ಷೆಗೆ ತಕ್ಕಂತೆ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಿದ್ದೇನೆ ಎಂದು ಹೇಳಿದರು.ಈ ಬಾರಿ ಜಿಲ್ಲೆಗೆ ಕೇವಲ ಎರಡು ಗ್ರಾಪಂ ಕಟ್ಟಡಗಳ ನಿರ್ಮಾಣಕ್ಕೆ ಮಾತ್ರ ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ ಯೋಜನೆಯಲ್ಲಿ ಅನುದಾನ ಬಿಡುಗಡೆಯಾಗಿದೆ. ಅವುಗಳನ್ನು ನಮ್ಮ ತಾಲೂಕಿಗೆ ತರುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.ಈ ವೇಳೆ ತಾಲೂಕು ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್.ದೇವರಾಜು, ನರೇಗ ಸಹಾಯಕ ನಿರ್ದೇಶಕ ಡಾ:ನರಸಿಂಹರಾಜು, ಗ್ರಾಪಂ ಅಧ್ಯಕ್ಷ ಯೋಗೇಶ್, ಉಪಾಧ್ಯಕ್ಷೆ ಸುಶೀಲಮ್ಮ, ಸದಸ್ಯರಾದ ಕರ್ತೇನಹಳ್ಳಿ ಸುರೇಶ್, ಯೋಗೇಶ್, ಅಶೋಕ್, ಗ್ರಾಪಂ ಮಾಜಿ ಅಧ್ಯಕ್ಷ ಶಿವಲಿಂಗಗೌಡ, ಮುಖಂಡರಾದ ಕೆಂಪೇಗೌಡ, ಪಿಡಿಓ ಬಸವಶೆಟ್ಟಿ, ಕಾರ್ಯದರ್ಶಿ ಮಹದೇವ್, ಸುನಿಲ್, ಚೈತ್ರ, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.