ಸಾರಾಂಶ
ತಿಪಟೂರು: ಇಲ್ಲಿನ ಎಪಿಎಂಸಿಯಲ್ಲಿನ ಕೊಬ್ಬರಿ ಮಾರುಕಟ್ಟೆಯಲ್ಲಿ ಟೆಂಡರ್‌ಧಾರಣೆ ಹಾಗೂ ದಲ್ಲಾಳಿ ವರ್ತಕರ ಖರೀದಿ ಧಾರಣೆಯಲ್ಲಿ ಭಾರಿ ವ್ಯತ್ಯಾಸ ಉಂಟಾದ ಕಾರಣ ಮಾರುಕಟ್ಟೆಯಲ್ಲಿ ಶನಿವಾರ ಉದ್ವಿಗ್ನ ಸ್ಥಿತಿ ಉಂಟಾಯಿತು.
ಕೊಬ್ಬರಿ ಖರೀದಿಗೆ ರವಾನೆದಾರರು ಹಾಕುವ ಟೆಂಡರ್ ಪ್ರಕ್ರಿಯೆಯಲ್ಲಿ ನಮೂದಿಸಿದ್ದ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬಂದವು. ವಿ.ಪಿ.ಟ್ರೇಡರ್ಸ್‌ನವರು ಕ್ವಿಂಟಾಲ್ ಕೊಬ್ಬರಿಗೆ 18000 ರು. ದಾಖಲಿಸಿದ್ದರೆ, ಮಾಜಿ ಶಾಸಕ ಬಿ.ನಂಜಾಮರಿಯವರ ಶ್ರೀ ಸಿದ್ಧರಾಮೇಶ್ವರ ಟ್ರೇಡರ್ಸ್‌ನವರು ಕ್ವಿಂಟಾಲ್ ಕೊಬ್ಬರಿಗೆ 16666 ರು. ನಮೂದಿಸಿ ಕೊಬ್ಬರಿ ಖರೀದಿಗೆ ಟೆಂಡರ್ ಹಾಕಿದ್ದರು.ಟೆಂಡರ್ ನಂತರ ದಲ್ಲಾಳಿ ವರ್ತಕರ ಬಳಿ ವಿ.ಪಿ. ಟ್ರೇಡರ್ಸ್‌ನವರು 18000 ರು.ಗೆ ಕೊಬ್ಬರಿ ಖರೀದಿಸಲು ಬಾರದ ಕಾರಣ, ದಲ್ಲಾಳಿ, ವರ್ತಕರು ನಂಜಾಮರಿಯವರು ದಾಖಲಿಸಿದ್ದ 16666 ರು.ಗೆ ರೈತರಿಂದ ಕೊಬ್ಬರಿ ಖರೀದಿಸಲು ಮುಂದಾದರು. ಆದರೆ ಮಾರುಕಟ್ಟೆಗೆ ಕೊಬ್ಬರಿ ಮಾರಾಟ ಮಾಡಲು ಬಂದಿದ್ದ ರೈತರು 18000 ರು.ಗೆ ಗರಿಷ್ಟ ಟೆಂಡರ್ ಪ್ರಕಟಣೆಯಾಗಿದ್ದು, ವರ್ತಕರು ಕೇವಲ 16666 ರು.ಗೆ ಖರೀದಿ ಮಾಡಲು ಉತ್ಸುಕರಾಗಿರುವುದು ಖಂಡನೀಯ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಗರಿಷ್ಟ ಟೆಂಡರ್ 18000 ರು.ಗೆ ಪ್ರಕಟಣೆಯಾಗಿದ್ದು, ದಲ್ಲಾಳ ವರ್ತಕರು ಇದೇ ಬೆಲೆಗೆ ಖರೀದಿಸಬೇಕು ಎಂದು ರೈತರು ಪಟ್ಟು ಹಿಡಿದು ಮಾರುಕಟ್ಟೆಯ ಪ್ರಮುಖ ಗಣೇಶ್ ಸರ್ಕಲ್‌ನಲ್ಲಿ ಜಮಾವಣೆಗೊಂಡು ವರ್ತಕರು ಹಾಗೂ ಮಾರುಕಟ್ಟೆ ಅಧಿಕಾರಿಗಳ ವಿರುದ್ಧ ದಿಢೀರ್ ಪ್ರತಿಭಟನೆಗೆ ಮುಂದಾದರು.ಈ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾದರೂ, ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ನಂತರ ಮಾರುಕಟ್ಟೆ ಕಾರ್ಯದರ್ಶಿ ಎಸ್.ಬಿ.ನ್ಯಾಮೇಗೌಡರು ಆಗಮಿಸಿ ರೈತರನ್ನು ಸಮಾಧಾನಿಸಿ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಇದಾದ ಬಳಿಕ ಮಾರುಕಟ್ಟೆ ಕಚೇರಿಗೆ ಶಾಸಕ ಕೆ.ಷಡಕ್ಷರಿ ಆಗಮಿಸಿ ಕಾರ್ಯದರ್ಶಿಯೊಂದಿಗೆ ಮಾತುಕತೆ ನಡೆಸಿ ನಂತರ ರವಾನೆ ಹಾಗೂ ದಲ್ಲಾಳಿ ವರ್ತಕರು ಮತ್ತು ರೈತರ ಜೊತೆ ಸಭೆ ನಡೆಸಿ ಅಂತಿಮವಾಗಿ ಕ್ವಿಂಟಾಲ್ ಕೊಬ್ಬರಿಗೆ 17000 ರು.ಗೆ ಖರೀದಿಸಲು ತೀರ್ಮಾನಿಸಲಾಯಿತು.18000 ರು.ಗೆ ಟೆಂಡರ್ ನಮೂದಿಸಿ ಕೊಬ್ಬರಿ ಖರೀದಿಸಲು ಹಿಂದೇಟು ಹಾಕಿದ್ದ ವಿ.ಪಿ. ಟ್ರೇಡರ್ಸ್ ಮಾಲೀಕನೇ 16666 ರು. ಹಾಗೂ ಸಭೆಯಲ್ಲಿ ತೀರ್ಮಾನಿಸಿದ ಖರೀದಿ ದರ 17000 ರು. ಮಧ್ಯೆ ವ್ಯತ್ಯಾಸವಾಗುವ 334 ರು.ಯನ್ನು ಶನಿವಾರ ಮಾರುಕಟ್ಟೆಯಲ್ಲಿ ರೈತರಿಂದ ಕೊಬ್ಬರಿ ಖರೀದಿಸುವ ಎಲ್ಲ ದಲ್ಲಾಳಿ ವರ್ತಕರಿಗೆ ನೀಡಬೇಕೆಂದು ತೀರ್ಮಾನಿಸಲಾಯಿತು. ಇದಕ್ಕೆ ವಿ.ಪಿ.ಟ್ರೇಡರ್ಸ್‌ನವರು ಒಪ್ಪಿಕೊಂಡ ನಂತರ ಸಮಸ್ಯೆ ಬಗೆಹರಿಯಿತು.