ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ವಿಶೇಷ ಆರ್ಥಿಕ ವಲಯದಲ್ಲಿ ಜೆಬಿಎಫ್ ಪಿಎಲ್ ಕಂಪೆನಿ ಸ್ಥಾಪನೆಗೆ ಜಮೀನು ಬಿಟ್ಟುಕೊಟ್ಟು ಪಿಡಿಎಫ್ (ಭೂಮಿ ಕಳೆದುಕೊಂಡ ಕುಟುಂಬಸ್ಥರು) ಆಧಾರದಲ್ಲಿ ಉದ್ಯೋಗ ಪಡೆದಿದ್ದ 115 ಮಂದಿ ಜಿಎಂಪಿಎಲ್ (ಗೈಲ್ ಇಂಡಿಯಾ) ಕಂಪೆನಿಯಲ್ಲಿ ಉದ್ಯೋಗ ಮುಂದುವರಿಸಲು ಇದ್ದ ತೊಡಕನ್ನು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ನಿವಾರಿಸಿದೆ.ಉದ್ಯೋಗದಲ್ಲಿ ಮುಂದುವರಿಯಲು ಜಿಎಂಪಿಎಲ್ ಕಂಪೆನಿ ಇದೀಗ ಒಪ್ಪಿಗೆ ನೀಡುವುದರೊಂದಿಗೆ ಬಹುದಿನಗಳಿಂದ ಬಾಕಿಯಾಗಿದ್ದ ಜೆಬಿಎಫ್ ಪಿಡಿಎಫ್ ಉದ್ಯೋಗಸ್ಥರ ಈ ಗಂಭೀರ ಸಮಸ್ಯೆಯನ್ನು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ಅಧಿಕೃತವಾಗಿ ಪತ್ರ ಬರೆದಿರುವ ಗೈಲ್ ಇಂಡಿಯಾದ ನಿರ್ದೇಶಕ ಹಾಗೂ ಜಿಎಂಪಿಎಲ್ ಅಧ್ಯಕ್ಷ ಆಯುಶ್ ಗುಪ್ತಾ ಅವರು, ಜಿಎಂಪಿಎಲ್‌ಗೆ ಜೆಬಿಎಫ್‌ಪಿಎಲ್ ಪಿಡಿಎಫ್ ಸಮಸ್ಯೆ ಬಗ್ಗೆ ಮನವಿ ಬಂದಿದ್ದು ಅದನ್ನು ಆದ್ಯತೆ ಮೇರೆಗೆ ಬಗೆಹರಿಸಲಾಗುತ್ತಿದ್ದು, ಸೆ.30 ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಪೆಟ್ರೋಲಿಯಂ ಸಚಿವಾಲಯ ತಮ್ಮ ಮನವಿ ಪರಿಗಣಿಸಿ ಈ ಕಠಿಣ ಸಮಸ್ಯೆಗೆ ತುರ್ತಾಗಿ ಸ್ಪಂದಿಸಿರುವುದಕ್ಕೆ ಕ್ಯಾ. ಚೌಟ ಅವರು ಹರ್ಷ ವ್ಯಕ್ತಪಡಿಸಿದ್ದು, ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಸಮಸ್ಯೆಗೆ ತುರ್ತಾಗಿ ಸ್ಪಂದಿಸುವಂತೆ ಕಳೆದ ತಿಂಗಳು ನಾನು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ. ಸಚಿವರು, ನಮ್ಮ ಮನವಿಗೆ ಪೆಟ್ರೋಲಿಯಂ ಸಚಿವಾಲಯ ಕಾರ್ಯದರ್ಶಿ ಪಂಕಜ್ ಜೈನ್, ಗೈಲ್ ಸಿಎಂಡಿ ಸಂದೀಪ್ ಗುಪ್ತಾ ಹಾಗೂ ಜಿಎಂಪಿಎಲ್ ಅಧ್ಯಕ್ಷ ಆಯುಶ್ ಗುಪ್ತಾ ಅವರೊಂದಿಗೆ ಸಭೆ ನಡೆಸಿದ್ದರು ಎಂದು ಕ್ಯಾ. ಚೌಟ ತಿಳಿಸಿದ್ದಾರೆ. ಸಮಸ್ಯೆ ಹಿನ್ನೆಲೆ: ಗೈಲ್ ಇಂಡಿಯಾವು ಜೆಬಿಎಫ್ ಪೆಟ್ರೋಕೆಮಿಕಲ್ಸ್‌ನ ಪಿಟಿಎ ಸ್ಥಾವರವನ್ನು ಸ್ವಾಧೀನಪಡಿಸಿಕೊಂಡಿದ್ದು, ಗೈಲ್ ಮಂಗಳೂರು ಪೆಟ್ರೋಕೆಮಿಕಲ್ಸ್ ಅನ್ನು ಸ್ಥಾಪಿಸಿತ್ತು. ಆದರೆ, ಮೂಲ ಗುತ್ತಿಗೆಯ ಭಾಗವಾಗಿ, ಜೆಬಿಎಫ್ ಪೆಟ್ರೋಕೆಮಿಕಲ್ಸ್‌ನ 115 ಸ್ಥಳಾಂತರಗೊಂಡ ಕುಟುಂಬಗಳಿಗೆ ಪೂರ್ಣಾವಧಿಯ ಉದ್ಯೋಗದ ಭರವಸೆ ನೀಡಿತ್ತು. ಆದರೆ ಜಿಎಂಪಿಎಲ್ ಪ್ರಾಜೆಕ್ಟ್ ಡಿಸ್ಪ್ಲೇಸ್ಡ್ ಫ್ಯಾಮಿಲೀಸ್ (PDFs)ಗೆ ಗುತ್ತಿಗೆ ಆಧಾರಿತ ಉದ್ಯೋಗಗಳನ್ನು ಮಾತ್ರ ನೀಡಲು ಪರಿಗಣಿಸಿತ್ತು. ಇದರಿಂದ ಜೆಬಿಎಫ್‌ನ ಉದ್ಯೋಗಸ್ಥರು ಅತಂತ್ರ ಸ್ಥಿತಿಯಲ್ಲಿದ್ದರು. ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ತಮ್ಮ ಚೊಚ್ಚಲ ಅಧಿವೇಶನದ ವೇಳೆಯೇ ಅಂದರೆ ಕಳೆದ ಜೂನ್ 26ರಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದ್ದರು. ಈ ಪತ್ರದಲ್ಲಿ ಕ್ಯಾ. ಚೌಟ ಅವರು, ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದಾಗ ಜೆಬಿಎಫ್‌ಪಿಎಲ್ ಭೂಮಿ ಕಳೆದುಕೊಂಡವರಿಗೆ ಪೂರ್ಣಾವಧಿ ಉದ್ಯೋಗದ ಭರವಸೆ ನೀಡಿತ್ತು. ಹೀಗಾಗಿ, ಸಚಿವರು ಮಧ್ಯಪ್ರವೇಶಿಸಿ ಪಿಡಿಎಫ್ ಆಧಾರಿತ ಪೂರ್ಣಾವಧಿ ಉದ್ಯೋಗವನ್ನು ಜಿಎಂಪಿಎಲ್‌ನಲ್ಲಿ ಒದಗಿಸುವಂತೆ ಮನವಿ ಮಾಡಿದ್ದರು. ಆ ಮೂಲಕ ಕೇವಲ 40 ದಿನದೊಳಗೆ ಈ ಗಂಭೀರ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಪೆಟ್ರೋಲಿಯಂ ಸಚಿವಾಲಯ ಬಗೆಹರಿಸಿದೆ ಎಂದು ಕ್ಯಾ. ಚೌಟ ಅವರು ಸಂತಸ ವ್ಯಕ್ತಪಡಿಸಿದ್ದಾರೆ.ಸಂತ್ರಸ್ತರ ಮೆಚ್ಚುಗೆ: ನಮಗೆ ಜೀವನ ಕಲ್ಪಿಸಿ ಕೊಟ್ಟ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಬುಧವಾರ ಭೇಟಿ ಮಾದ ಉದ್ಯೋಗ ಸಂತ್ರಸ್ತರು ಸಂತಸ, ಮೆಚ್ಚುಗೆ ವ್ಯಕ್ತಪಡಿಸಿದರು.