ಟಿಇಟಿ ಕಡ್ಡಾಯ: ಪ್ರಧಾನಿಗೆ ದಾವಣಗೆರೆ ಶಿಕ್ಷಕರ ಪತ್ರ

| Published : Sep 21 2025, 02:00 AM IST

ಟಿಇಟಿ ಕಡ್ಡಾಯ: ಪ್ರಧಾನಿಗೆ ದಾವಣಗೆರೆ ಶಿಕ್ಷಕರ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಾಥಮಿಕ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್ ಸೆ.1ರಂದು ನೀಡಿದ ತೀರ್ಪಿನಿಂದ ಲಕ್ಷಾಂತರ ಶಿಕ್ಷಕರು ಆತಂಕಗೊಂಡಿದ್ದು, ಈ ಬಗ್ಗೆ ಮಧ್ಯಪ್ರವೇಶಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಾವಣಗೆರೆ ಘಟಕದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಪ್ರಾಥಮಿಕ ಶಿಕ್ಷಕರಿಗೆ ಟಿಇಟಿ ಕಡ್ಡಾಯಗೊಳಿಸಿ ಸುಪ್ರೀಂ ಕೋರ್ಟ್ ಸೆ.1ರಂದು ನೀಡಿದ ತೀರ್ಪಿನಿಂದ ಲಕ್ಷಾಂತರ ಶಿಕ್ಷಕರು ಆತಂಕಗೊಂಡಿದ್ದು, ಈ ಬಗ್ಗೆ ಮಧ್ಯಪ್ರವೇಶಿಸುವಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಾವಣಗೆರೆ ಘಟಕದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದೆ.

ಈ ಮನವಿಯಲ್ಲಿ, ಈ ತೀರ್ಪಿನಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಶಿಕ್ಷಕರ ಆತ್ಮಸ್ಥೈರ್ಯ ಕುಗ್ಗಿಸುತ್ತದೆ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಿಳಿಸಲಾಗಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ಪ್ರಮುಖ ಅಂಶಗಳೆಂದರೆ ಸೇವೆಯಲ್ಲಿರುವ ಎಲ್ಲಾ ಶಿಕ್ಷಕರು ತಮ್ಮ ಸೇವೆಯನ್ನು ಮುಂದುವರೆಸಲು ಮತ್ತು ಬಡ್ತಿ ಪಡೆಯಲು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಪಾಸಾಗುವುದು ಕಡ್ಡಾಯ. ಐದು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದ ಶಿಕ್ಷಕರು, ನಿವೃತ್ತಿಗೆ ಹತ್ತಿರದಲ್ಲಿದ್ದರೂ ಸಹ, ಟಿಇಟಿಯಲ್ಲಿ ಅರ್ಹತೆ ಪಡೆಯಬೇಕು. ಹಾಗೆ ವಿಫಲರಾದರೆ ಅವರು ಸೇವೆಯಿಂದ ಹೊರ ಹೋಗಬೇಕಾಗುತ್ತದೆ. ಐದು ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಶಿಕ್ಷಕರು, ಆರ್‌ಟಿಇ ಕಾಯಿದೆಯ ಜಾರಿಗೆ ಮುನ್ನ ನೇಮಕಗೊಂಡಿದ್ದರೂ, ಎರಡು ವರ್ಷಗಳೊಳಗೆ ಟಿಇಟಿ ಅರ್ಹತೆ ಪಡೆಯಬೇಕು. ವಿಫಲರಾದರೆ ಕಡ್ಡಾಯ ನಿವೃತ್ತಿ. ಬಡ್ತಿ ಬಯಸುವ ಶಿಕ್ಷಕರು ಟಿಇಟಿಯಲ್ಲಿ ಅರ್ಹತೆ ಪಡೆಯದಿದ್ದರೆ ಬಡ್ತಿಗೆ ಅರ್ಹರಾಗಿರುವುದಿಲ್ಲ ಎಂಬ ಅಂಶಗಳು ಶಿಕ್ಷಕರಲ್ಲಿ ಆತಂಕ ಮೂಡಿಸಿದೆ ಎಂದು ಸಂಘದ ಅಧ್ಯಕ್ಷ ರಾಮಪ್ಪ ಡಿ ತಿಳಿಸಿದ್ದಾರೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯಿದೆ (ಆರ್‌ಟಿಇ ) ಜಾರಿಯಾದಾಗ, ಶಿಕ್ಷಕರಿಗೆ ಅರ್ಹತೆ ನೀಡಲು ಟಿಇಟಿಯನ್ನು ಪರಿಚಯಿಸಲಾಗಿತ್ತು. ಆದರೆ, ಈಗ ಅದನ್ನು ಅರ್ಹ ಶಿಕ್ಷಕರ ಶೈಕ್ಷಣಿಕ ಅರ್ಹತೆಗೆ ಸಮೀಕರಿಸಲಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ದಶಕಗಳಿಂದ ಸೇವೆ ಸಲ್ಲಿಸುತ್ತಿರುವ, ಈಗಾಗಲೇ ಪೂರ್ವ-ಸೇವಾ ಶೈಕ್ಷಣಿಕ ಅರ್ಹತೆ ಮತ್ತು ಪಿಎಚ್‌ಡಿ ಸೇರಿದಂತೆ ಉನ್ನತ ಶಿಕ್ಷಣ ಹೊಂದಿರುವ ಶಿಕ್ಷಕರಿಗೆ ಟಿಇಟಿ ಪರೀಕ್ಷೆ ಏಕೆ ಕಡ್ಡಾಯ? ಇದು ಅನುಭವಿ ಶಿಕ್ಷಕರಿಗೆ ಮಾಡುವ ದೊಡ್ಡ ಅನ್ಯಾಯ. ಅನುಭವಿ ಶಿಕ್ಷಕರಿಂದ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಹಾಗಾದರೆ, ಈ ಶಿಕ್ಷಕರಿಗೆ ಟಿಇಟಿ ಇಲ್ಲದ ಕಾರಣ ಆ ವಿದ್ಯಾರ್ಥಿಗಳ ಪದವಿಗಳು ಅನರ್ಹವಾಗುತ್ತವೆಯೇ ಎಂದು ಮನವಿಯಲ್ಲಿ ಪ್ರಶ್ನಿಸಲಾಗಿದೆ. ಈ ತೀರ್ಪಿನಿಂದ ಲಕ್ಷಾಂತರ ಶಿಕ್ಷಕರು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ದಾವಣಗೆರೆ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಇತರರು ಇದ್ದರು.