ಸಾರಾಂಶ
ಹಿರಿಯೂರು: ನಗರದ ಸ್ವಚ್ಛತೆಗೆ ಪೌರ ಕಾರ್ಮಿಕರ ಕೊಡುಗೆ ಅಪಾರವಾಗಿದ್ದು, ಇಂತಹ ಕ್ರೀಡಾಕೂಟಗಳು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ಕ್ರೀಡಾಕೂಟ ಉದ್ಘಾಟಿಸಿ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸಲು ಬದ್ಧವಾಗಿದೆ. ದಿನನಿತ್ಯದ ಪೌರಕಾರ್ಮಿಕರ ಸೇವೆ ಭಗವಂತನ ಪಾದಗಳಿಗೆ ಮುಟ್ಟಿದೆ. ನೂರಕ್ಕೆ ನೂರರಷ್ಟು ಸೇವೆ ಮಾಡಿದವರಿಗೆ ಪ್ರತಿಫಲ ಸಿಗುತ್ತದೆ. ಎಲ್ಲಿ ಸೇವೆ ಇದೆಯೋ ಅಲ್ಲಿ ಭಗವಂತ ಇದ್ದಾನೆ. ಪೌರ ಕಾರ್ಮಿಕರು ಜೀವನ ನಿರ್ವಹಣೆಯ ಜೊತೆಗೆ ಸಾರ್ವಜನಿಕರ ಸೇವೆ ಮಾಡುವ ಭಾಗ್ಯ ಹೊಂದಿದ್ದಾರೆ. ಇಂತಹ ಅದೃಷ್ಟ ಎಲ್ಲರಿಗೂ ಸಿಗುವುದಿಲ್ಲ. ನಗರದ ಅಭಿವೃದ್ಧಿಗೆ ಮತ್ತು ಸ್ವಚ್ಛತೆಗೆ ನಿಮ್ಮ ಸಹಕಾರ ಪ್ರೋತ್ಸಾಹ ಸದಾ ಹೀಗೆಯೇ ಇರಲಿ. ನಗರಗಳ ತ್ಯಾಜ್ಯವನ್ನು ಸ್ವಚ್ಛಗೊಳಿಸಿ ಶುಚಿಯಾಗಿಡುತ್ತಿರುವ ಪೌರ ಕಾರ್ಮಿಕರ ಬದುಕನ್ನು ಹಸನು ಮಾಡಬೇಕಿರುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಇದೇ ವೇಳೆ ಪೌರಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಓಟದ ಸ್ಪರ್ಧೆ, ಗುಂಡು ಎಸೆತ ಸೇರಿದಂತೆ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಪೌರಾಯುಕ್ತ ಎ.ವಾಸಿಂ, ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಡಿ.ಸಣ್ಣಪ್ಪ, ಸದಸ್ಯರಾದ ಬಿ.ಎನ್.ಪ್ರಕಾಶ್, ಶಿವರಂಜನಿ, ಶಿವಕುಮಾರ್ ಸೇರಿದಂತೆ ಪೌರಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.