ಮನೆಯ ನಿರ್ಮಾಣದ ಸಮಯದಲ್ಲಿ ದೊರೆತ ಬಂಗಾರವನ್ನು ಸರ್ಕಾರಕ್ಕೆ ಕೊಟ್ಟ ಕುರುಬ ಸಮಾಜದ ಬಾಲಕ ಮತ್ತು ಅವರ ತಾಯಿಯ ಕಾರ್ಯವನ್ನು ಮೆಚ್ಚಿ ಜಿಲ್ಲಾ ಹಾಲುಮತ ಸಮಾಜದ ಪದಾಧಿಕಾರಿಗಳು ಬಾಲಕ ಪ್ರಜ್ವಲನನ್ನು ಕಂಬಳಿ ಹೊದಿಸಿ ಸನ್ಮಾನಿಸಿದರು.

ಗದಗ: ತಾಲೂಕಿನ ಲಕ್ಕುಂಡಿಯ ಗ್ರಾಮ ಚಾವಡಿಯ ಹತ್ತಿರ ಮನೆ ನಿರ್ಮಾಣ ಮಾಡಲು ತಳಪಾಯ ಹಾಕುವಾಗ ದೊರೆತ 470 ಗ್ರಾಂ ಬಂಗಾರವನ್ನು ಸರ್ಕಾರಕ್ಕೆ ನೀಡಿದ ಬಾಲಕ ಮತ್ತು ತಾಯಿಯ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾಡಳಿತ ಅವರನ್ನು ಸನ್ಮಾನಿಸಿತು.ಶನಿವಾರ ದೊರೆತ ಬಂಗಾರವನ್ನು ಪಂಚನಾಮೆ ಮಾಡಿದ ನಂತರ ಬಾಲಕ ಪ್ರಜ್ವಲ ಮತ್ತು ತಾಯಿ ಗಂಗವ್ವ ರಿತ್ತಿ ಅವರನ್ನು ಸನ್ಮಾನಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ ಹಾಗೂ ಎಸ್‌ಪಿ ರೋಹನ್ ಜಗದೀಶ ಅವರು, ಪ್ರಾಚೀನ ಕಾಲದ ಚಿನ್ನಾಭರಣಗಳು ತಮ್ಮ ಮನೆಯ ಅಡಿಪಾಯದಲ್ಲಿ ಸಿಕ್ಕಿದ್ದನ್ನು ಸರ್ಕಾರಕ್ಕೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇಂತಹ ಬಾಲಕ ಪ್ರತಿ ಮನೆಯಲ್ಲಿ ಇರಬೇಕು. ಈ ಬಾಲಕ ಯುವಕರಿಗೆ ಮಾದರಿಯಾಗಿದ್ದು, ಆತ ನೀಡಿದ ಬಂಗಾರದ ವಸ್ತುಗಳನ್ನು ಸರ್ಕಾರದ ಖಜಾನೆಗೆ ಒಪ್ಪಿಸಲಾಗುವುದು ಎಂದರು.ಲಕ್ಕುಂಡಿ ಪ್ರಾದೇಶಿಕ ಅಭಿವೃದ್ಧಿ ರಾಜ್ಯ ಮಟ್ಟದ ಸದಸ್ಯ ಸಿದ್ದಲಿಂಗೇಶ್ವರ ಪಾಟೀಲ ಮಾತನಾಡಿ, ಗಂಗವ್ವ ರಿತ್ತಿ ಅವರ ಕುಟುಂಬವು ಬಡ ಕುಟುಂಬ ಆಗಿದ್ದು, ತಮ್ಮ ಮನೆ ನಿರ್ಮಾಣದ ಸಂದರ್ಭದಲ್ಲಿ ದೊರೆತ ಚಿನ್ನಾಭರಣಗಳನ್ನು ಪ್ರಾಮಾಣಿಕವಾಗಿ ಸರ್ಕಾರಕ್ಕೆ ತಲುಪಿಸಿದ್ದಾರೆ. ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲವರೊಂದಿಗೆ ಚರ್ಚಿಸಿ ಸೂಕ್ತ ಬಹುಮಾನವನ್ನು ಕೊಡಿಸಲಾಗುವುದು ಎಂದರು.

ಉಪವಿಭಾಗಾಧಿಕಾರಿ ಎಂ. ಗಂಗಪ್ಪ, ಸಿಪಿಐ ಸಿದ್ರಾಮೇಶ ಗಡೇದ, ತಹಸೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಗ್ರಾಪಂ ಸದಸ್ಯರಾದ ಪೀರಸಾಬ ನದಾಫ, ವಿರೂಪಾಕ್ಷಿ ಬೆಟಗೇರಿ, ರಜೀಯಾಬೇಗಂ ತಹಸೀಲ್ದಾರ್ ಪಿಡಿಒ ಅಮೀರನಾಯಕ, ಎಂ.ಎ. ಗಾಜಿ ಇದ್ದರು.ಹಾಲುಮತದಿಂದ ಸನ್ಮಾನ:ತನ್ನ ಮನೆಯ ನಿರ್ಮಾಣದ ಸಮಯದಲ್ಲಿ ದೊರೆತ ಬಂಗಾರವನ್ನು ಸರ್ಕಾರಕ್ಕೆ ಕೊಟ್ಟ ಕುರುಬ ಸಮಾಜದ ಬಾಲಕ ಮತ್ತು ಅವರ ತಾಯಿಯ ಕಾರ್ಯವನ್ನು ಮೆಚ್ಚಿ ಜಿಲ್ಲಾ ಹಾಲುಮತ ಸಮಾಜದ ಪದಾಧಿಕಾರಿಗಳು ಬಾಲಕ ಪ್ರಜ್ವಲನನ್ನು ಕಂಬಳಿ ಹೊದಿಸಿ ಸನ್ಮಾನಿಸಿದರು.ಸಮಾಜದ ಮುಖಂಡ ರಮೇಶ ಸಜ್ಜಾಗರ ಮಾತನಾಡಿ, ಬಾಲಕನ ಪ್ರಾಮಾಣಿಕ ಕಾರ್ಯಕ್ಕೆ ರಾಜ್ಯ ಸರ್ಕಾರವು ನಿವೇಶನ ನೀಡಿ ಮನೆ ನಿರ್ಮಾಣ ಮಾಡಿಕೊಡಬೇಕು. ಮೋದಿಜಿ ಸರ್ಕಾರವು ದೆಹಲಿಗೆ ಕರೆಸಿಕೊಂಡು ಸನ್ಮಾನಿಸಿ ಸೂಕ್ತ ಬಹುಮಾನ ನೀಡಬೇಕು ಎಂದು ಆಗ್ರಹಿಸಿದರು.

ಜಯಕುಮಾರ ಉಮಚಗಿ, ಚಂದ್ರು ಕಟಿಗ್ಗಾರ, ಬಸವರಾಜ ಬಿರಾದಾರ, ಈರಪ್ಪ ಕರಿಯಲ್ಲಪ್ಪನವರ, ಶಿವು ಇತರರು ಇದ್ದರು.