ಕೆರೆ, ದೇಗುಲಗಳ ನಿರ್ಮಾಣ ಪುಣ್ಯದ ಕೆಲಸ: ಹನುಮಂತಪ್ಪ

| Published : Feb 13 2025, 12:48 AM IST

ಸಾರಾಂಶ

ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಮತ್ತು ಜಾನುವಾರುಗಳು ನೆಮ್ಮದಿ, ಸಮೃದ್ಧಿಯಿಂದ ಇರಬೇಕಾದರೆ ಆ ಗ್ರಾಮಗಳಲ್ಲಿರುವ ಕೆರೆ-ಕಟ್ಟೆಗಳು ಸುಸ್ತಿತಿಯಲ್ಲಿರಬೇಕು. ಕೆರೆಗಳು ತುಂಬಿಕೊಂಡಾಗ ಆಂತರ್ಜಲಮಟ್ಟ ವೃದ್ಧಿಸಿ ಕೊಳವೆಬಾವಿಗಳಲ್ಲಿ ನೀರಿನ ಜಲ ಸಮೃದ್ಧವಾಗಿ ದೊರೆಯಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಹನುಮಂತಪ್ಪ ಹೇಳಿದ್ದಾರೆ.

- ಕೆಂಗಾಪುರದಲ್ಲಿ ಅಭಿವೃದ್ಧಿ ಕಂಡ ಕೆರೆ । 10 ದಿನದೊಳಗೆ ಗ್ರಾಮಸ್ಥರಿಗೆ ಹಸ್ತಾಂತರ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಗ್ರಾಮಾಂತರ ಪ್ರದೇಶಗಳಲ್ಲಿನ ಜನರು ಮತ್ತು ಜಾನುವಾರುಗಳು ನೆಮ್ಮದಿ, ಸಮೃದ್ಧಿಯಿಂದ ಇರಬೇಕಾದರೆ ಆ ಗ್ರಾಮಗಳಲ್ಲಿರುವ ಕೆರೆ-ಕಟ್ಟೆಗಳು ಸುಸ್ತಿತಿಯಲ್ಲಿರಬೇಕು. ಕೆರೆಗಳು ತುಂಬಿಕೊಂಡಾಗ ಆಂತರ್ಜಲಮಟ್ಟ ವೃದ್ಧಿಸಿ ಕೊಳವೆಬಾವಿಗಳಲ್ಲಿ ನೀರಿನ ಜಲ ಸಮೃದ್ಧವಾಗಿ ದೊರೆಯಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೃಷಿ ಅಧಿಕಾರಿ ಹನುಮಂತಪ್ಪ ಹೇಳಿದರು.

ತಾಲೂಕಿನ ಕೆಂಗಾಪುರದಲ್ಲಿ ಅಸ್ಥಿತ್ವ ಕಳೆದುಕೊಂಡಿದ್ದ ಕೆರೆಯನ್ನು ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ ಪುನಶ್ಚೇತನ ಕಾಮಗಾರಿ ಕುರಿತು ಅವುರ ಮಾಧ್ಯಮದವರಿಗೆ ಮಾಹಿತಿ ನೀಡಿದರು. ಮುಂದಿನ 10 ದಿನಗಳಲ್ಲಿ ತಾಲೂಕಿನ ಕೆಂಗಾಪುರ ಗ್ರಾಮದಲ್ಲಿ ಅಭಿವೃದ್ಧಿಪಡಿಸಲಾದ ಕೆರೆಯನ್ನು ಗ್ರಾಮದ ಜನರಿಗೆ ಹಸ್ತಾಂತರ ಮಾಡಲಾಗುವುದು. ಸಂಸ್ಥೆ ಜನಸೇವೆ ಗ್ರಾಮದ ಜನರ ಪ್ರಶಂಸೆ ಗಳಿಸಿದೆ ಎಂದರು.

ಚನ್ನಗಿರಿ ವಲಯದ ಯೋಜನಾ ಕಚೇರಿ ವ್ಯಾಪ್ತಿಯಲ್ಲಿನ ಕೆಂಗಾಪುರ ಗ್ರಾಮದ ಕೆರೆ 200 ವರ್ಷಗಳಷ್ಟು ಹಳೆಯ ಇತಿಹಾಸ ಹೊಂದಿದೆ. 1.26 ಎಕರೆ ವಿಸ್ತೀರ್ಣದ ಕೆರೆಯ ಪರಿಸರದಲ್ಲಿ ಕಳೆ ಗಿಡ, ಪೊದೆಗಳು ಬೆಳೆದಿವೆ. ಅಪಾರ ಹೂಳು ತುಂಬಿಕೊಂಡು ಮಳೆಗಾಲದಲ್ಲಿ ನೀರಿನ ಸಂಗ್ರಹವೇ ಆಗುತ್ತಿರಲಿಲ್ಲ. ಇದನ್ನು ಗಮನಿಸಿದ ಸಂಸ್ಥೆಯು ಗ್ರಾಮಸ್ಥರನ್ನು ಸಂಪರ್ಕಿಸಿ ಜನರ ಸಹಕಾರದಿಂದ 12 ದಿನಗಳ ಕಾಲ ಹಿಟಾಚಿ ಯಂತ್ರ ಬಳಸಿ, ಕೆರೆಯ ಹೂಳೆತ್ತಿಸಲಾಗುತ್ತಿದೆ ಎಂದರು.

ಕೆರೆಯಲ್ಲಿನ ಊಳನ್ನು ಗ್ರಾಮದ ರೈತರು ಟ್ರ್ಯಾಕ್ಟರ್‌ಗಳ ಮೂಲಕ ತಮ್ಮ ಹೊಲ, ಗದ್ದೆ, ತೋಟಗಳಿಗೆ ಹಾಕಿಕೊಂಡಿದ್ದಾರೆ, ಕೆರೆಯ ದುರಸ್ತಿಗಾಗಿ ಯೋಜನೆಯ ವತಿಯಿಂದ ₹2.28.818 ಖರ್ಚು ಮಾಡಲಾಗಿದೆ ಎಂದು ಯೋಜನೆಯ ಕೃಷಿ ಅಧಿಕಾರಿ ತಿಳಿಸಿದರು.

ಕೆರೆ ಪುನಶ್ಚೇತನದಿಂದ ಗ್ರಾಮದ 350 ಕುಟುಂಬಗಳು ಪ್ರಯೋಜನ ಪಡೆದುಕೊಳ್ಳಲಿವೆ. ಈ ಕೆರೆಯ ಅಚ್ಚುಕಟ್ಟು ಪ್ರದೇಶ 580 ಎಕರೆ ಭೂ ಪ್ರದೇಶ ಮತ್ತು 2100 ಜಾನುವಾರುಗಳಿಗೆ ಅನುಕೂಲವಾಗಲಿದೆ. ಸುತ್ತಲಿನ ಗ್ರಾಮಗಳಾದ ಕಣಿವೆಬಿಳಚಿ, ಹಿರೇಕುರುಬರಹಳ್ಳಿ, ಹರನಹಳ್ಳಿ ಗ್ರಾಮಗಳಿಗೂ ಕೆರೆಯಿಂದ ಅನುಕೂಲವಾಗಲಿದೆ. ಈ ಕೆರೆಗೆ ನೀರಿನ ಸಂಪನ್ಮೂಲವಾಗಿ ಗ್ರಾಮದ ಬಳಿ ಹಾದುಹೋಗಿರುವ ಭದ್ರಾ ಚಾನೆಲ್‌ ಮತ್ತು ಮಳೆಗಾಲದಲ್ಲಿ ಬೀಳುವ ಮಳೆನೀರು ಕೆರೆಗೆ ಸಂಗ್ರಹ ಆಗುವಂತೆ ಮಾಡಲಾಗಿದೆ ಎಂದರು.

ಯೋಜನಾಧಿಕಾರಿ ಅಜಿತ್ ಕುಮಾರ್ ಮಾತನಾಡಿ, ಗ್ರಾಮಗಳಲ್ಲಿ ಕೆರೆಗಳನ್ನು ನಿರ್ಮಿಸುವುದು, ದೇವಾಲಯಗಳ ನಿರ್ಮಾಣದ ಕೆಲಸಸದಷ್ಟೇ ಪುಣ್ಯದ ಕೆಲಸವಾಗಿದೆ. ಗ್ರಾಮಗಳಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದ ಕೆರೆಗಳನ್ನು ನಮ್ಮೂರು ನಮ್ಮ ಕೆರೆ ಎಂಬ ಯೋಜನೆಯಡಿ ಪುನಶ್ಚೇತನ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತು ಡಾ.ಹೇಮಾವತಿ ಹೆಗ್ಗಡೆ ಅವರ ಆಶಯವಾಗಿದೆ. ಅವರ ರೈತಪರ ಉದ್ದೇಶದಂತೆ ಯೋಜನೆ ವತಿಯಿಂದ ಹಣ ವೆಚ್ಚ ಮಾಡಿ ಕೆರೆಗಳ ಪುನಶ್ಚೇತನ ಮಾಡಲಾಗುತ್ತಿದೆ. ಚನ್ನಗಿರಿ ತಾಲೂಕಿನಲ್ಲಿ 12 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

- - - -12ಕೆಸಿಎನ್‌ಜಿ3, 4.ಜೆಪಿಜಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಕೆಂಗಾಪುರ ಕೆರೆ ಹೂಳೆತ್ತಿರುವುದು.