ಸಾರ್ವಜನಿಕ ಆಡಳಿತದಲ್ಲಿ ವಕೀಲರ ಪಾತ್ರ ಹಿರಿದು: ಉಪ ಲೋಕಾಯುಕ್ತರಾದ ಬಿ.ವೀರಪ್ಪ

| Published : Feb 13 2025, 12:48 AM IST

ಸಾರ್ವಜನಿಕ ಆಡಳಿತದಲ್ಲಿ ವಕೀಲರ ಪಾತ್ರ ಹಿರಿದು: ಉಪ ಲೋಕಾಯುಕ್ತರಾದ ಬಿ.ವೀರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಆಡಳಿತದಲ್ಲಿ ವಕೀಲರ ಪಾತ್ರ ಹಿರಿದಾಗಿದೆ. ಕಾನೂನು ಸೇವೆಗಳು ಹಳ್ಳಿ ವರೆಗೆ ತಲುಪಬೇಕು. ಆಗ ಮಾತ್ರ ಹಳ್ಳಿಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಉಪ ಲೋಕಾಯುಕ್ತರಾದ ಬಿ. ವೀರಪ್ಪ ಹೇಳಿದರು.

ಹಾವೇರಿ: ಸಾರ್ವಜನಿಕ ಆಡಳಿತದಲ್ಲಿ ವಕೀಲರ ಪಾತ್ರ ಹಿರಿದಾಗಿದೆ. ಕಾನೂನು ಸೇವೆಗಳು ಹಳ್ಳಿ ವರೆಗೆ ತಲುಪಬೇಕು. ಆಗ ಮಾತ್ರ ಹಳ್ಳಿಗಳು ಅಭಿವೃದ್ಧಿಹೊಂದಲು ಸಾಧ್ಯವಾಗುತ್ತದೆ ಎಂದು ಉಪ ಲೋಕಾಯುಕ್ತರಾದ ಬಿ. ವೀರಪ್ಪ ಹೇಳಿದರು.

ನಗರದ ಜಿಲ್ಲಾ ವಕೀಲರ ಸಂಘದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಆಡಳಿತ ಮತ್ತು ಲೋಕಾಯುಕ್ತ ಕಾಯ್ದೆ ಅಡಿಯಲ್ಲಿ ವಕೀಲರ ಪಾತ್ರದ ಕುರಿತು ಉಪನ್ಯಾಸ ನೀಡಿದರು.ಸಾಮಾಜಿಕ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು. ಫೋಕ್ಸೋ ಕಾಯ್ದೆಗಳ ಕುರಿತು ಅರಿವು ತರಬೇಕು. ಇವೆಲ್ಲವೂ ವಕೀಲರ ಕರ್ತವ್ಯಗಳಾಗಿವೆ ಎಂದರು.

ಸಮಾಜವನ್ನು ಕೆಟ್ಟದಾಗಿ ಬಿಂಬಿಸಬಾರದು. ಹೊರತಾಗಿ ಸಮಾಜವನ್ನು ಉತ್ತುಂಗದತ್ತ ತೆಗೆದುಕೊಂಡು ಹೋಗಲು ಶ್ರಮಿಸಬೇಕು. ಆಗ ಮಾತ್ರ ವಕೀಲ ವೃತ್ತಿಗೆ ಗೌರವ ತಂದಹಾಗೆ ಆಗುತ್ತದೆ. ಹಿರಿಯ ವಕೀಲರು ನಿಮ್ಮ ಬಳಿ ಕಿರಿಯ ವಕೀಲರಿಗೆ ಉತ್ತಮವಾಗಿ ಮಾರ್ಗದರ್ಶನ ಮಾಡಬೇಕು. ಕಿರಿಯ ವಕೀಲರು ಸತತವಾಗಿ 5 ವರ್ಷಗಳ ಕಾಲ ಕಾಯಾ, ವಾಚಾ, ಮನಸಾ ಕಷ್ಟಪಟ್ಟು ಕಾರ್ಯನಿರ್ವಹಿಸಿದರೆ ನಿಮ್ಮ ಜೀವನ ಉತ್ತುಂಗಕ್ಕೆ ಹೋಗುತ್ತದೆ. ಈ ನಿಟ್ಟಿನಲ್ಲಿ ನೀವೆಲ್ಲ ಕಾರ್ಯಪ್ರವೃತ್ತರಾಗಬೇಕು ಎಂದರು.

ನಾವು ಮೊದಲು ನಮ್ಮ ವೃತ್ತಿಯನ್ನು ಪ್ರೀತಿಸುವುದನ್ನು ಕಲಿಯಬೇಕು. ಆಗ ನಮ್ಮ ವೃತ್ತಿಯು ನಮ್ಮನ್ನು ಕಾಪಾಡುತ್ತದೆ. ನಮ್ಮ ಕಕ್ಷಿದಾರರಿಗೆ ಎಂದಿಗೂ ಸುಳ್ಳು ಹೇಳಬಾರದು, ಮೋಸ ಮಾಡಬಾರದು. ನಿಷ್ಠಾವಂತರಾಗಿ ಸಮಾಜಕ್ಕೆ ಏನಾದರು ಒಳಿತು ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸ್ವತಂತ್ರ ಪೂರ್ವದಲ್ಲಿ ಭಾರತದಲ್ಲಿ ಶೇ. 18ರಷ್ಟು ಸಾಕ್ಷರರಿದ್ದರು. ಇಂದು ಅದು ಪ್ರತಿಶತ ಶೇ. 80ಕ್ಕೆ ಹೆಚ್ಚಳವಾಗಿದೆ. ಆದರೂ ನಮ್ಮ ದೇಶದಲ್ಲಿ ಪ್ರತಿಶತ ಶೇ. 90ರಷ್ಟು ಜನರಿಗೆ ಕಾನೂನು ಅರಿವಿಲ್ಲ. ಇದು ದುರಂತ. ಅಂತಹ ಜನರು ಬುದ್ಧಿವಂತರಿದ್ದಾರೆ. ಆದರೆ, ಅವರೇ ಮೋಸಹೋಗುತ್ತಿದ್ದಾರೆ. ಇದು ಹೀಗಾಗಬಾರದು, ಪ್ರತಿಯೊಬ್ಬ ನಾಗರೀಿಕನಿಗೂ ಕಾನೂನು ಅರಿವು ತುಂಬಾನೇ ಮುಖ್ಯ ಎಂದರು

ದೇಶದಲ್ಲಿಯೇ ಕರ್ನಾಟಕ ಲೋಕಾಯುಕ್ತ ಹುದ್ದೆ ತುಂಬಾ ಪ್ರಬಲವಾಗಿದೆ. ಸಮಾಜದಲ್ಲಿ ನಡೆಯುವ ದುರಾಡಳಿತವನ್ನು ತಡೆದು ಸಾರ್ವಜನಿಕರ ಅವಶ್ಯಕತೆಯನ್ನು ಪೂರೈಸುವುದಾಗಿದೆ. ಈ ಹುದ್ದೆಯಿಂದ ಸಮಾಜವನ್ನು ಉತ್ತುಂಗಕ್ಕೂ ತೆಗೆದುಕೊಂಡು ಹೋಗಬಹುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ, ನ್ಯಾಯಾಧೀಶರು, ವಕೀಲ ಸಂಘದ ಅಧ್ಯಕ್ಷ ಎಸ್ ಜತ್ತಿ ಹಾಗೂ ಇತರರು ಉಪಸ್ಥಿತರಿದ್ದರು.ಕಂದಾಯ ಅಧಿಕಾರಿ ಬ್ಯಾಂಕ್ ವಹಿವಾಟು ಮಾಹಿತಿಗೆ ಸೂಚನೆ

ಹಾವೇರಿ: ಇಲ್ಲಿಯ ನಗರಸಭೆ ಕಂದಾಯ ಅಧಿಕಾರಿ ದುಗ್ಗೇಶ ಅವರು ಹಲವರಿಗೆ ಫೋನ್‌ಪೇ ಮೂಲಕ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿದ್ದು, ಸಂಬಂಧಿಸಿದ ನೌಕರರ ಮೂರು ವರ್ಷದ ಬ್ಯಾಂಕ್ ಖಾತೆ ದಾಖಲೆ ಪಡೆದು ಮಾಹಿತಿಯೊಂದಿಗೆ ವರದಿ ಸಲ್ಲಿಸುವಂತೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಸೂಚಿಸಿದರು.ನಗರಸಭೆಗೆ ಬುಧವಾರ ಅವರು ಭೇಟಿ ನೀಡಿ ವಿವಿಧ ಕಡತಗಳನ್ನು ಪರಿಶೀಲಿಸಿದರು. ನಗರಸಭೆಯಿಂದ ಬಾಕಿ ಉಳಿದ ಖಾತಾಗಳೆಷ್ಟು ಹಾಗೂ ಸರ್ವೇ ಇಲ್ಲದೆ, ಕೃಷಿ ಭೂಮಿಯನ್ನು ಎನ್‌ಎ ಇಲ್ಲದ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಹೇಗೆ ಅನುಮತಿ ನೀಡಿದ್ದೀರಿ, ಎಷ್ಟು ಕಾನೂನುಬಾಹಿರ ಕಟ್ಟಡಗಳಿಗೆ ಅನುಮತಿ ನೀಡಿದ್ದೀರಿ, ಎರಡು ಅಂತಸ್ತು ಮನೆ ನಿರ್ಮಾಣ ಮಾಡಲು ಎಷ್ಟು ಡೈವಷನ್ ಪ್ರಕರಣಗಳಿವೆ, ಈ ವರೆಗೆ ಎಷ್ಟು ಟ್ರೇಡ್ ಲೈಸನ್ಸ್ ಕೊಟ್ಟಿದ್ದೀರಿ ಹಾಗೂ ಎಷ್ಟು ಕಾನೂನು ಬಾಹಿರ ವ್ಯಾಪಾರಗಳು ನಡೆಯುತ್ತಿವೆ ಎಂಬುದರ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದರು. ಸಂಬಂಧಿಸಿದವರಿಗೆ ನೋಟಿಸ್ ನೀಡಿ ವರದಿ ಪಡೆದು ಸಲ್ಲಿಸುವಂತೆ ನಗರಸಭೆ ಪೌರಾಯುಕ್ತ ಚನ್ನಪ್ಪ ಅವರಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.