ಕನ್ನಡಪ್ರಭ ವಾರ್ತೆ ಬೆಂಗಳೂರು

ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಉತ್ಪತ್ತಿಯಾಗುವ ಕಚ್ಚಾ ಜೈವಿಕ ಅನಿಲವನ್ನು ಹೆಚ್ಚಿನ ಮೌಲ್ಯದ ಕಂಪ್ರೆಸ್ಡ್ ಬಯೋ-ಗ್ಯಾಸ್ (ಸಿಬಿಜಿ) ಆಗಿ ಮೇಲ್ದರ್ಜೆಗೇರಿಸುವ ಮೂಲಕ, ಮಂಡಳಿಯು ಮುಂದಿನ 20 ವರ್ಷಗಳಲ್ಲಿ ಅಂದಾಜು ₹120 ಕೋಟಿಗೂ ಹೆಚ್ಚುವರಿ ಆದಾಯವನ್ನು ಗಳಿಸಲಿದೆ ಎಂದು ಜಲಮಂಡಳಿ ತಿಳಿಸಿದೆ.

ಸುಸ್ಥಿರ ನಗರ ಜಲ ನಿರ್ವಹಣೆ ಮತ್ತು ಸರ್ಕ್ಯುಲರ್ ಎಕಾನಮಿ ಕಡೆ ಸಾಗುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾರ್ಗದರ್ಶನದಲ್ಲಿ ಕೊಳಚೆ ನೀರಿನ ತ್ಯಾಜ್ಯವನ್ನು ಆದಾಯದ ಬೃಹತ್ ಮೂಲವಾಗಿ ಪರಿವರ್ತಿಸಲು ಜಲಮಂಡಳಿ ಯೋಜನೆ ರೂಪಿಸಿದೆ. ಅದರ ಭಾಗವಾಗಿ ಐದು ಪ್ರಮುಖ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಲ್ಲಿ ಉತ್ಪತ್ತಿಯಾಗುವ 550 ಎಂಎಲ್‌ಡಿ ತ್ಯಾಜ್ಯ ನೀರಿನಿಂದ ಗ್ಯಾಸ್ ಉತ್ಪಾದಿಸಲಾಗುತ್ತದೆ. ಇದು ದೇಶದಲ್ಲೇ ಅತಿದೊಡ್ಡ ಯೋಜನೆ ಆಗಿರುವುದರಿಂದ ಐತಿಹಾಸಿಕ ಮೈಲಿಗಲ್ಲಾಗಲಿದೆ ಎಂದು ಜಲಮಂಡಳಿ ಹೇಳಿದೆ.

ಹಾಲಿ ಎಸ್‌ಟಿಪಿಗಳಲ್ಲಿ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಸ್ಥಳೀಯ ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ. ಮತ್ತೊಂದು ಘಟಕದಲ್ಲಿ ಮಾತ್ರ ಸುಟ್ಟು ಹಾಕಲಾಗುತ್ತಿದೆ. ಈ ಯೋಜನೆಯು ಕಚ್ಚಾ ಜೈವಿಕ ಅನಿಲವನ್ನು ನಗರ ಅನಿಲ ವಿತರಣಾ ಜಾಲಕ್ಕೆ ಪೂರೈಸಲು ಅಥವಾ ಶುದ್ಧ ಸಾರಿಗೆ ಇಂಧನವಾಗಿ ಬಳಸಲು ಉದ್ದೇಶಿಸಲಾಗಿದೆ. ನಗರದಲ್ಲಿರುವ ಎಲ್‌ಟಿಪಿಗಳಲ್ಲಿ ಬಯೋ-ಡೈಜೆಸ್ಟರ್‌ಗಳಲ್ಲಿ ಈ ಅತ್ಯಾಧುನಿಕ ಯೋಜನೆಯನ್ನು ವಿಸ್ತರಿಸಲು ಯೋಚನೆ ಇದೆ ಎಂದು ತಿಳಿಸಿದೆ.

ಖಾಸಗಿ ಸಹಭಾಗಿತ್ವ


ಈ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ₹85 ಕೋಟಿ ಬಂಡವಾಳ ವೆಚ್ಚದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಎಸ್‌ಟಿಪಿ ಆವರಣದಲ್ಲಿ ಸುಮಾರು 13,000 ಚದರ ಮೀಟರ್ ಜಾಗವನ್ನು ಒದಗಿಸಲಾಗುತ್ತದೆ. ಇದರಿಂದ ಇಂಧನ ಭದ್ರತೆಗೆ ದೊಡ್ಡ ಉತ್ತೇಜನ ಸಿಗಲಿದೆ.

ಮಂಡಳಿಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಜೊತೆಗೆ ಇಂಧನ ಭದ್ರತೆಯನ್ನು ಬಲಪಡಿಸುವ ಈ ಯೋಜನೆ ದೇಶಕ್ಕೆ ಮಾದರಿಯಾಗಿದೆ.

- ಡಾ.ರಾಮ್ ಪ್ರಸಾತ್ ಮನೋಹರ್, ಅಧ್ಯಕ್ಷ, ಬಿಡಬ್ಲ್ಯುಎಸ್‌ಎಸ್‌ಬಿ