ಕನ್ನಡಪ್ರಭ ವಾರ್ತೆ ಯಾದಗಿರಿ

ಕರ್ನಾಟಕ ರಾಜ್ಯ ಶಾಂತಿ, ಸೌಹಾರ್ದ ಹಾಗೂ ನೆಮ್ಮದಿಯಿಂದ ಬೆಳಗಬೇಕು. ಈ ನಾಡಿನ ನೆಲ, ಜಲ, ಭಾಷೆ ಹಾಗೂ ಸಂಸ್ಕೃತಿಯ ಅಸ್ತಿತ್ವ ಉಳಿಸಿ ಬೆಳೆಸಬೇಕೆಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿ ಹಾಗೂ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕರೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ 71ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ಕವಾಯತು ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ನಮ್ಮ ನಾಡಿನ ನೆಲ, ಜಲ, ಸಂಸ್ಕೃತಿ ಹಾಗೂ ಕನ್ನಡ ಭಾಷೆಯ ಉಳಿವಿಗಾಗಿ ಶ್ರಮಿಸಿ, ಸಾಂಸ್ಕೃತಿಕ ಕೊಡುಗೆ ನೀಡಿದ ಮಹಾನ್ ಚೇತನರಿಗೆ ನಮಿಸುವುದಾಗಿ ತಿಳಿಸಿದ ಅವರು, ಕರ್ನಾಟಕದ ಏಕೀಕರಣ, ನೆಲ, ಜಲ, ಭಾಷೆ ಸಂರಕ್ಷಣೆಗೆ ಕೊಡುಗೆ ನೀಡಿರುವವರನ್ನು ಸ್ಮರಿಸುವದಾಗಿ ತಿಳಿಸಿದರು.

ಕನ್ನಡ ಪ್ರದೇಶಗಳನ್ನು ಒಗ್ಗೂಡಿಸಿ ಏಕೀಕೃತ ಕರ್ನಾಟಕ ರಚನೆಯ ಹೋರಾಟದ ಫಲವಾಗಿ 1956 ರ ನ.1ರಂದು ಏಕೀಕೃತ ಮೈಸೂರು ರಾಜ್ಯ ರಚನೆ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಹಿಂದುಳಿದ ವರ್ಗಗಳ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ್ ಅರಸು ಅವರು 1973ರ ನ.1 ರಂದು ಈ ರಾಜ್ಯಕ್ಕೆ ಕರ್ನಾಟಕವೆಂದು ಮರುನಾಮಕರಣ ಮಾಡಿದ್ದು, ಅಂದಿನಿಂದ ರಾಜ್ಯ ಹಲವು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು.

ಸಚಿವರು ನೂತನ ಗ್ರಾಮಾನುಭವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಸ್ಯಾಮ್ಸನ್‌ ಮಾಳಿಕೇರಿ, ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ, ಎಸ್‌ಪಿ ಪೃಥ್ವಿಕ್ ಶಂಕರ್, ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಗಮನ ಸೆಳೆದವು. ಅತ್ತ್ಯುತ್ತಮ ಗಣೇಶ ಸ್ಥಾಪಿಸಿದ್ದ ಮಂಡಳಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.