ಸಂಘಟನೆ ಚನ್ನಾಗಿದ್ದರೆ ನಮ್ಮ ಮನೆ ಬಾಗಿಲಿಗೆ ಎಲ್ಲರೂ ಬರುತ್ತಾರೆ. ಒಗ್ಗಟ್ಟು ಒಡೆದು ಹೋದರೆ ನಾವು ಬೇರೆಯವರ ಮನೆ ಬಾಗಿಲಿಗೆ ಹೋಗಬೇಕಾಗುತ್ತದೆ. ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿದ್ದು, ಸಂಘಟನೆಯನ್ನು ಬಲಗೊಳಿಸಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ: ಸಂಘಟನೆ ಚನ್ನಾಗಿದ್ದರೆ ನಮ್ಮ ಮನೆ ಬಾಗಿಲಿಗೆ ಎಲ್ಲರೂ ಬರುತ್ತಾರೆ. ಒಗ್ಗಟ್ಟು ಒಡೆದು ಹೋದರೆ ನಾವು ಬೇರೆಯವರ ಮನೆ ಬಾಗಿಲಿಗೆ ಹೋಗಬೇಕಾಗುತ್ತದೆ. ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟ್ಟಾಗಿದ್ದು, ಸಂಘಟನೆಯನ್ನು ಬಲಗೊಳಿಸಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ಈಡಿಗರ ಭವನದಲ್ಲಿ ಧೀರ ದೀವರ ಬಳಗ ಹಾಗೂ ಹಳೇಪೈಕ ದೀವರ ಸಂಸ್ಕೃತಿ ಸಂವಾದ ಬಳಗದಿಂದ ಭಾನುವಾರ ಆಯೋಜಿಸಿದ್ದ ದೀವರ ಸಾಂಸ್ಕೃತಿಕ ವೈಭವ-2025 ದೀವರ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಸಮುದಾಯದ ಮೂಲ, ಕಲೆ, ಸಂಸ್ಕೃತಿ, ಆಚರಣೆಗಳಿಂದ ಆ ಸಮುದಾಯದ ಅನನ್ಯತೆ ಉಳಿಯಲು ಸಾಧ್ಯ. ಅದೇ ರೀತಿಯಲ್ಲಿ ದೀವರ ಸಂಸ್ಕೃತಿ ಹಾಗೂ ಸಾಂಸ್ಕೃತಿಕತೆ ಅತ್ಯಂತ ವೈಭವಯುತವಾಗಿದೆ. ಹಸೆ ಚಿತ್ತಾರ, ಭೂಮಣ್ಣಿ ಬುಟ್ಟಿ, ಇತರೆ ಆರಾಧನೆಗಳು ಇವೆ. ಇವು ಮಾತ್ರವಲ್ಲದೆ ಇನ್ನೂ ಅನೇಕ ವಿಧದ ಸಾಂಸ್ಕೃತಿಕತೆ ಇದ್ದು, ಅವನ್ನು ಉಳಿಸುವ ಹಾಗೂ ಅವುಗಳಲ್ಲಿನ ಒಳ್ಳೆಯ ಅಂಶಗಳ ಅಧ್ಯಯನ ಕೂಡ ನಡೆಸಬೇಕಿದೆ. ಹೀಗಾಗಿ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುತ್ತದೆ. ಜನಾರ್ದನ ಪೂಜಾರಿ, ಕಾಗೋಡು ತಿಮ್ಮಪ್ಪ, ಬಂಗಾರಪ್ಪನವರು ಹೀಗೆ ಎಲ್ಲರ ಶ್ರಮ ಸಮಾಜ ಕಟ್ಟುವಲ್ಲಿದೆ ಎಂದರು.

50 ಸಾವಿರ ಕೋಟಿ ರು. ಹಣ ನನ್ನ ಇಲಾಖೆಗೆ ಬಂದಿದೆ. ಅತಿ ದೊಡ್ಡ ಇಲಾಖೆ ಹಾಗೂ ಹೆಚ್ಚು ನೌಕರರು ಇದ್ದಾರೆ. ಸಿಎಂ ನಂಬಿಕೆ ಇಟ್ಟು ದೊಡ್ಡ ಇಲಾಖೆ ನೀಡಿದ್ದಾರೆ. ಅವರ ನಂಬಿಕೆ ಉಳಿಸಿಕೊಂಡು ಹೋಗಲಾಗುತ್ತದೆ. ನಮ್ಮ ಸಂಸ್ಕೃತಿ ಮಾತ್ರವಲ್ಲದೆ ಬೇರೆ ಸಮಾಜದ ಸಂಸ್ಕೃತಿ ಉಳಿಸುವ ಕೆಲಸ ನನ್ನ ಇಲಾಖೆಯಿಂದ ಮಾಡಲಾಗುತ್ತದೆ ಎಂದರು.

ಶಾಸಕ ಗೋಪಾಲ ಕೃಷ್ಣ ಬೇಳೂರು ಮಾತನಾಡಿ, ಕಳೆದ ಮೂರು ವರ್ಷಗಳಿಂದ ಈಡಿಗ ಸಮುದಾಯಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಈ ಬಾರಿಯ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಸಾರಗನಜಡ್ಡು ಕಾರ್ತಿಕೇಯ ಪೀಠದ ಶ್ರೀ ಯೋಗೇಂದ್ರ ಅವಧೂತರು, ಈ ಸಮುದಾಯಕ್ಕೆ ಕಳಸ ಮತ್ತು ಕಿರೀಟ ಬಂಗಾರಪ್ಪ ಮತ್ತು ಕಾಗೋಡು ತಿಮ್ಮಪ್ಪ. ಅವರ ಮಾರ್ಗದರ್ಶನದಲ್ಲಿ ಸಮಾಜ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದರು.

ಅಂಜಿಕೆಗಳನ್ನು ಬಿಟ್ಟು ಎಲ್ಲರು ಒಂದಾಗಿ ನಮ್ಮ ಸಂಸ್ಕೃತಿ ಕಲೆ ಉಳಿಸಲು ಮುಂದಾಗಬೇಕಿದೆ. ಹಿಂದಿನವರು ಬಣ್ಣಕ್ಕಾಗಿ ಕೋಡ್ ನಂಬರ್ ಹುಡುಕುತ್ತಿರಲಿಲ್ಲ. ಬದಲಾಗಿ ಕೆಮ್ಮಣ್ಣು ಗುಂಡಿ, ಜೇಡಿಕುಣಿ ಹುಡುಕಿ ಬಣ್ಣ ತಯಾರಿಸಿಕೊಂಡು ಚಿತ್ತಾರಗಳನ್ನು ಬರೆಯುತ್ತಿದ್ದರು. ಅಂತಹ ಜ್ಞಾನ ಉಳಿಸಬೇಕಿದೆ ಎಂದರು.

ಧೀರ ದೀವರು ಬಳಗದ ಸಂಚಾಲಕ ಸುರೇಶ್ ಕೆ.ಬಾಳೆಗುಂಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕುವೆಂಪು ವಿವಿ ಹಣಕಾಸು ಅಧಿಕಾರಿ ಪ್ರೊ.ರಮೇಶ್, ವಾಣಿಜ್ಯ ತೆರಿಗೆ ಉಪ ಆಯುಕ್ತ ಹೊಳೆಯಪ್ಪ.ಎಚ್, ದೀವರ ಸಾಂಸ್ಕೃತಿಕ ವೇದಿಕೆ ಸಂಚಾಲಕ ನಾಗರಾಜ್ ನೇರಿಗೆ ಇದ್ದರು.ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕಲಾ ತಂಡಗಳಿಂದ ಹಾಡು, ನೃತ್ಯ ಪ್ರದರ್ಶನ ನಡೆಸಲಾಯಿತು.