ಪುಸ್ತಕ ಓದು ಕೊಡುವ ಸಂಸ್ಕಾರ ಸಮಾಜದ ಬೆಳಕಾಗುತ್ತದೆ. ಆದ್ದರಿಂದ ನಮ್ಮ ಮಕ್ಕಳಿಗೂ ನಾವು ಓದಿನ ಗೀಳು ಹಚ್ಚಿ ಹೆಚ್ಚೆಚ್ಚು ಭಿನ್ನ-ವಿಭಿನ್ನ ಪುಸ್ತಕಗಳನ್ನು ಓದುವಂತೆ ಮಾಡಬೇಕು.
ಧಾರವಾಡ:
ಭಾರತ ಬಹುರತ್ನ ವಸುಂಧರೆ. ನಾವೆಲ್ಲ ಈಗ ದ.ರಾ. ಬೇಂದ್ರೆಯವರ ಹಿಂದೆಯೇ ಹೋಗುವ ಕಾಲ ಸನ್ನಿಹಿತವಾಗಿದೆ. ಆಗಲೇ ಭಾರತ ವಸುಂಧರೆಯ ಬಹುರತ್ನದ ಬೆಳಕು ಕಾಣುತ್ತೇವೆ. ಆ ಬೆಳಕು ಕಂಡಾಗಲೆ ಜ್ಞಾನದಾಹದ ನೀರಡಿಕೆ ಇಂಗುತ್ತದೆ ಎಂದು ಹಿರಿಯ ಸಾಹಿತಿ ಹರ್ಷ ಡಂಬಳ ಹೇಳಿದರು.ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ..ದೇಶಪಾಂಡೆ ಸಭಾ ಭವನದಲ್ಲಿ ಮನೋಹರ ಗ್ರಂಥಮಾಲೆ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ಕೃಷ್ಣ ಕಟ್ಟಿಯವರ ಬೆಳಕ ನೀರಡಿಕೆ- ಬೊಗಸೆಗೆಟಕಿದಷ್ಟು ಬೇಂದ್ರೆ ಕವಿತೆಗಳು ಎಂಬ ಕಾವ್ಯ ವಿಮರ್ಶೆ ಮತ್ತು ಡಾ. ಅನುರಾಧಾ ಕೃಷ್ಣ ಕಟ್ಟಿ ಅವರ ಅನುವಾದಿತ ಕೃತಿ “ಗಾರ್ಗಿ ಇನ್ನೂ ಜೀವಂತವಾಗಿದ್ದಾಳೆ” ಎನ್ನುವ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪುಸ್ತಕ ಓದು ಕೊಡುವ ಸಂಸ್ಕಾರ ಸಮಾಜದ ಬೆಳಕಾಗುತ್ತದೆ. ಆದ್ದರಿಂದ ನಮ್ಮ ಮಕ್ಕಳಿಗೂ ನಾವು ಓದಿನ ಗೀಳು ಹಚ್ಚಿ ಹೆಚ್ಚೆಚ್ಚು ಭಿನ್ನ-ವಿಭಿನ್ನ ಪುಸ್ತಕಗಳನ್ನು ಓದುವಂತೆ ಮಾಡಬೇಕು ಎಂದರು.
ಕೃತಿ ಪರಿಚಯಿಸಿದ ಹಿರಿಯ ಸಾಹಿತಿ ಡಾ. ಅರವಿಂದ ಯಾಳಗಿ, ಬೆಳಕ ನೀರಡಿಕೆ ಪುಸ್ತಕವು ಬದುಕಿನ ಆದರ್ಶ ಲೋಕಾನುಭವದ ಗಟ್ಟಿತನದ ಮೇಲೆ ಬೆಳಕು ಚೆಲ್ಲುತ್ತದೆ. ಅವರು ಕಂಡ ಬದುಕು, ಅವರ ಕಾವ್ಯಗಳ ಸೊಗಸು, ಆಶಯ, ಧೋರಣೆಗಳ ಒಳ ನೋಟ ನೀಡುತ್ತದೆ ಎಂದರು.ಹಿರಿಯ ಸಾಹಿತಿ ಆನಂದ ಝುಂಜರವಾಡ ಮಾತನಾಡಿ, ಅನುವಾದಗಳು ಹೆಚ್ಚಾದಾಗ ಭಾಷೆ ಬಲಗೊಳ್ಳುತ್ತದೆ. ಜ್ಞಾನ ವಿಸ್ತಾರ ಹೆಚ್ಚಿ ಶ್ರೇಷ್ಠತೆ ಹೆಚ್ಚುತ್ತದೆ. ಸಾಮಾಜಿಕ ಸಂಸ್ಕಾರ ಹೆಚ್ಚಾಗುತ್ತದೆ ಎಂದು ಹೇಳಿದರು.
ಹಿರಿಯ ಸಾಹಿತಿ ಡಾ. ವಿನಾಯಕ ನಾಯಕ ಮಾತನಾಡಿ, ಸಾಹಿತ್ಯದ ಆಸ್ವಾದನೆ ಸಂಸ್ಕಾರದ ಹಾದಿಯಾಗಬೇಕು. ಅದು ಬದುಕನ್ನು ಸಾಣೆ ಹಿಡಿಯಬೇಕು. ಬೇಂದ್ರೆ ಕಾವ್ಯದ ವಿಸ್ತೃತ ಅಧ್ಯಯನ, ವಿಸ್ತೃತ ವಿಮರ್ಶೆ ಇನ್ನಷ್ಟು ಆಗಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಕವಿಯತ್ರಿ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಬೇಂದ್ರೆ ಕಾವ್ಯ ವಿಮರ್ಶೆ ಮುಗಿಯದ ಪಯಣ. ಓದಿದಷ್ಟು ಅಮೃತಪಾನ. ಬೇಂದ್ರೆ ತಾವು ಬದುಕಿನಲ್ಲಿ ಹಾಲಾಹಲವನ್ನು ಉಂಡರೂ ಅದನ್ನು ಸವಿಯಾಗಿಸಿ ಕಾವ್ಯದಲ್ಲಿ ಕಟ್ಟಿಕೊಟ್ಟು ನಮಗ ಅಮೃತ ಉಣಿಸಿದ ದಾರ್ಶನಿಕರು ಎಂದರು.ಸಾಹಿತಿ ಕಟ್ಟಿ ದಂಪತಿಗಳ ಎರಡು ವಿಭಿನ್ನ ಪುಸ್ತಕಗಳು ಮನೋಹರ ಗ್ರಂಥಮಾಲೆಯಿಂದ ಪ್ರಕಟಗೊಂಡು ಒಂದೇ ವೇದಿಕೆಯಲ್ಲಿ ಲೋಕಾರ್ಪಣೆಗೊಂಡಿದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು.ಈ ವೇಳೆ ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ, ಡಾ. ಹ.ವೆಂ. ಕಾಖಂಡಕಿ ಸೇರಿದಂತೆ ಸಾಹಿತಿಗಳು ಇದ್ದರು.