ಪ.ಮಲ್ಲೇಶ್‌ ನಿಧನದಿಂದ ಹೋರಾಟದ ಶೂನ್ಯತೆ ಆವರಿಸಿದೆ: ಸಿಎಂ ಸಿದ್ದರಾಮಯ್ಯ

| Published : Nov 22 2025, 01:15 AM IST

ಪ.ಮಲ್ಲೇಶ್‌ ನಿಧನದಿಂದ ಹೋರಾಟದ ಶೂನ್ಯತೆ ಆವರಿಸಿದೆ: ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನಲ್ಲಿ ಯಾವುದೇ ಅನ್ಯಾಯವಾದರೂ ಪ್ರತಿಭಟಿಸುವ ಕೆಲಸ ಮಾಡುತ್ತಿದ್ದ ಮಲ್ಲೇಶ್‌ ನಮ್ಮನ್ನು ಅಗಲಿದ್ದಾರೆ. ಆದರೆ, ಅವರ ಹೋರಾಟದ ಹಾದಿ ಜೀವಂತವಾಗಿದೆ. ಅಹಿಂದ ವರ್ಗವನ್ನು ಮುನ್ನಲೆಗೆ ತರುವ ಉದ್ದೇಶದಿಂದ ಅನ್ಯಾಯದ ವಿರುದ್ಧ ಹೋರಾಡಿದರು. ನಮ್ಮಲ್ಲೂ ವೈಚಾರಿಕ ಮನೋಭಾವನೆ ಬಿತ್ತಿದರು. ಆದರೆ, ರಾಜಕೀಯಕ್ಕೆ ಬಂದ ಬಳಿಕ ಪೂರ್ಣವಾಗಿ ಅದನ್ನು ಅನುಸರಿಸಲು ಸಾಧ್ಯವಾಗಲಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಪ. ಮಲ್ಲೇಶ್‌ ಇದ್ದಾಗ ಮೈಸೂರಿನಲ್ಲಿ ಹೋರಾಟಗಳು ನಡೆಯುತ್ತಿದ್ದವು. ಅವರ ನಿಧನದಿಂದ ಹೋರಾಟದ ಶೂನ್ಯತೆ ಆವರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಗಾಂಧಿ ವಿಚಾರ ಪರಿಷತ್ತು ಹಾಗೂ ಮೈಸೂರು ವಿವಿ ವಿದ್ಯಾರ್ಥಿಗಳು, ಸಂಶೋಧಕರು ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ್ದ ಪ. ಮಲ್ಲೇಶ್ ನೆನಪಿನ ವಿಚಾರ ಸಂಕಿರಣದಲ್ಲಿ ‘ಗಾಂಧಿ ಪ್ರಣೀತ ಧರ್ಮದರ್ಶಿತ್ವ’ ಮತ್ತು ‘ಬುದ್ಧ ನಾಗಾರ್ಜುನರ ಶೂನ್ಯಯಾನ’ ಪುಸ್ತಕಗಳ ಇಂಗ್ಲಿಷ್ ಅನುವಾದಿತ ಕೃತಿಗಳನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ಮೈಸೂರಿನಲ್ಲಿ ಯಾವುದೇ ಅನ್ಯಾಯವಾದರೂ ಪ್ರತಿಭಟಿಸುವ ಕೆಲಸ ಮಾಡುತ್ತಿದ್ದ ಮಲ್ಲೇಶ್‌ ನಮ್ಮನ್ನು ಅಗಲಿದ್ದಾರೆ. ಆದರೆ, ಅವರ ಹೋರಾಟದ ಹಾದಿ ಜೀವಂತವಾಗಿದೆ. ಅಹಿಂದ ವರ್ಗವನ್ನು ಮುನ್ನಲೆಗೆ ತರುವ ಉದ್ದೇಶದಿಂದ ಅನ್ಯಾಯದ ವಿರುದ್ಧ ಹೋರಾಡಿದರು. ನಮ್ಮಲ್ಲೂ ವೈಚಾರಿಕ ಮನೋಭಾವನೆ ಬಿತ್ತಿದರು. ಆದರೆ, ರಾಜಕೀಯಕ್ಕೆ ಬಂದ ಬಳಿಕ ಪೂರ್ಣವಾಗಿ ಅದನ್ನು ಅನುಸರಿಸಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಪ. ಮಲ್ಲೇಶ್ ನನ್ನ ಮಾರ್ಗದರ್ಶಕರು, 1983- 85 ಚುನಾವಣೆಯ ಸಮಯದಲ್ಲಿ ನನ್ನ ಲೆಕ್ಕಚಾರಗಳನ್ನು ಪ. ಮಲ್ಲೇಶ್‌ ನೋಡಿಕೊಳ್ಳುತ್ತಿದ್ದರು. ಚುನಾವಣೆ ಬಳಿಕ ಉಳಿದ 1.75 ಲಕ್ಷವನ್ನು ವಾಪಸ್‌ ನೀಡಿದ್ದರು. ಅವರು ಕೊಡದಿದ್ದರೂ ನಾನು ಕೇಳುತ್ತಿರಲಿಲ್ಲ, ಇದು ಅವರ ಪ್ರಾಮಾಣಿಕತೆ ತೋರಿಸುತ್ತದೆ ಎಂದು ಅವರು ಸ್ಮರಿಸಿದರು.

1986 ರಲ್ಲಿ ಸಚಿವ ಸ್ಥಾನದಿಂದ ತೆಗೆದು ಹಾಕಿದ್ದಾಗ, ಕೆಎಸ್‌ಆರ್‌ ಟಿಸಿ ಬಸ್‌ ನಲ್ಲಿ ಬೆಂಗಳೂರು– ಮೈಸೂರು ಓಡಾಡುತ್ತಿದ್ದೆ. ಆಗ 75 ಸಾವಿರ ಸಂಗ್ರಹಿಸಿ ಅಂಬಾಸಿಡರ್‌ ಕಾರು ತೆಗೆಸಿಕೊಟ್ಟಿದ್ದರು. ಅದನ್ನು 1994 ರಲ್ಲಿ ಹಣಕಾಸು ಸಚಿವನಾಗುವವರೆಗೆ ಇಟ್ಟುಕೊಂಡಿದ್ದೆ. ವ್ಯಕ್ತಿಯೊಬ್ಬರ ಬಗ್ಗೆ ನಂಬಿಕೆ ಬಂದರೆ ಎಂದಿಗೂ ಬಿಟ್ಟುಕೊಡುತ್ತಿರಲಿಲ್ಲ, ಅವರು ನನ್ನ ದೊಡ್ಡ ಮಾರ್ಗದರ್ಶಕರು ಎಂದು ಅವರು ಹೇಳಿದರು.

ಪ. ಮಲ್ಲೇಶ್ ಅವರು ಜಾತ್ಯತೀತ ನಿಲುವು ಹೊಂದಿದ್ದರು. ಆದರೆ, ಅವರ ಆಶಯದಂತೆ ಅಸಮಾನತೆ ತೊಲಗಳಿಲ್ಲ. ವರ್ಗ ವ್ಯವಸ್ಥೆ, ಜಾತಿ ವ್ಯವಸ್ಥೆ ಮಾತಿನಿಂದ ಹೋಗುವುದಿಲ್ಲ. ನಮ್ಮ ಮನಸ್ಸಿನಲ್ಲಿ ಇನ್ನೂ ಗುಲಾಮಗಿರಿ ಉಳಿದುಕೊಂಡಿದೆ. ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಶೇ.12 ಸಾಕ್ಷರತೆ ಇತ್ತು, ಈಗ ಶೇ.78ಕ್ಕೆ ಏರಿಕೆಯಾಗಿದೆ. ಆದರೆ, ಸಾಮಾಜಿಕ ಪರಿಸ್ಥಿತಿ ಅಂದಿನಂತೆ ಇದೆ ಎಂದು ಅವರು ವಿಷಾದಿಸಿದರು.

ಶಿಕ್ಷಣದ ಮೂಲಕ ಅಸಮಾನತೆಯ ಸಂಕೊಲೆಯಿಂದ ಹೊರ ಬರುತ್ತೇವೆ ಎಂಬ ಭಾವನೆ ನಮ್ಮಲ್ಲಿದೆ. ಆದರೆ, ವಿದ್ಯಾವಂತರೇ ಜಾತೀಯತೆ ಮಾಡುತ್ತಿದ್ದಾರೆ. ಚಲನ ರಹಿತ ಸಮಾಜವಿರುವುದರಿಂದ ಜಾತಿ ವ್ಯವಸ್ಥೆ ಇನ್ನೂ ಇದೆ. ಬುದ್ಧ, ಬಸವ, ಅಂಬೇಡ್ಕರ್‌ ಮುಂತಾದ ದಾರ್ಶನಿಕರು ಹಾಗೂ ತೇಜಸ್ವಿ, ಪ. ಮಲ್ಲೇಶ್‌ ಅವರಂತ ಹೋರಾಟಗಾಗರರು ಚಲನೆ ನೀಡಿ ಅದನ್ನು ಹೋಗಲಾಡಿಸಲು ಪ್ರಯತ್ನಿಸಿದ್ದು, ಮುಂದೆ ಯುವ ಸಮೂಹ ಅವರ ಆದರ್ಶನ ಮುಂದುವರೆಸಬೇಕು ಎಂದು ಅವರು ಕರೆ ನೀಡಿದರು.

ಪುಸ್ತಕಗಳ ಕುರಿತು ಸಾಹಿತಿಗಳಾದ ನಟರಾಜ್‌ ಹುಳಿಯಾರ್, ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿದರು. ಶಾಸಕ ಬಿ.ಆರ್‌. ಪಾಟೀಲ್‌, ಮಾಹಿತಿ ಆಯುಕ್ತ ಹರೀಶ್‌ ಕುಮಾರ್‌, ಸಾಮಾಜಿಕ ಕಾರ್ಯಕರ್ತ ಅಹಿಂದ ಜವರಪ್ಪ, ಚಿಂತಕರಾದ ಕಾಳಚನ್ನೇಗೌಡ, ಕೆ.ಆರ್‌. ಗೋಪಾಲಕೃಷ್ಣ, ಸವಿತಾ ಪ. ಮಲ್ಲೇಶ್, ವಕೀಲ ಎಂ. ಶಿವಪ್ರಸಾದ್‌ ಮೊದಲಾದವರು ಇದ್ದರು.ಪ. ಮಲ್ಲೇಶ್ ಅವರು ಕೆ.ಆರ್. ವೃತ್ತದಲ್ಲಿ ಪ್ರತಿಭಟಿಸಲು ಬಿಡುತ್ತಿಲ್ಲ, ನಗರದಲ್ಲಿ ಹಲವು ಕಡೆ ಹೋರಾಟಕ್ಕೆ ತೊಂದರೆ ನೀಡುತ್ತಿದ್ದಾರೆ. ಅಲ್ಲಿ ಅವಕಾಶ ಕೊಡಿಸು ಎಂದಿದ್ದರು. ನ್ಯಾಯಾಲಯದ ಆದೇಶವಿದ್ದ ಕಾರಣ ಅದು ಸಾಧ್ಯವಾಗಲಿಲ್ಲ. ಅವರಲ್ಲಿ ಅಗಾಧವಾದ ಬರವಣಿಗೆ ಶಕ್ತಿ ಇತ್ತು, ಹೋರಾಟಕ್ಕೆ ಸಮಯ ನೀಡಿದ್ದರಿಂದ ಜಾಸ್ತಿ ಬರೆಯಲು ಸಾಧ್ಯವಾಗಲಿಲ್ಲ.

- ಸಿದ್ದರಾಮಯ್ಯ, ಮುಖ್ಯಮಂತ್ರಿ