ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ. ಮಕ್ಕಳ ದೃಷ್ಟಿಕೋನದಿಂದ ಸಮಸ್ಯೆಗಳನ್ನು ಗುರುತಿಸಿ, ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅವರ ಅಗತ್ಯತೆಗಳನ್ನು ಸೇರಿಸಲು ಸಹಾಯ ಮಾಡುತ್ತದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮಕ್ಕಳ ಗ್ರಾಮ ಸಭೆಯು ಮಕ್ಕಳಿಗೆ ಶಿಕ್ಷಣ, ಆರೋಗ್ಯ, ರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು, ಸಮಸ್ಯೆಗಳನ್ನು ಪ್ರಸ್ತಾಪಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಒಂದು ವೇದಿಕೆಯಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್.ಎಸ್. ಕೋಸಂಬೆ ತಿಳಿಸಿದರು.ತಾಲೂಕಿನ ಮಂಚನಬಲೆ ಗ್ರಾಮದ ಬಿಜಿಎಸ್ ವಿದ್ಯಾನಿಕೇತನದಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿ, ಮಕ್ಕಳ ಜೀವನಮಟ್ಟ ಸುಧಾರಿಸಿದಾಗ ಮಾತ್ರ ದೇಶದ ನಿಜವಾದ ಅಭಿವೃದ್ಧಿ ಸಾಧ್ಯವೆಂದರು.
ಮಕ್ಕಳ ಸಮಸ್ಯೆ ಗುರ್ತಿಸಲು ಸಹಕಾರಿಗ್ರಾಮ ಸಭೆಯು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ. ಮಕ್ಕಳ ಗ್ರಾಮ ಸಭೆಯಲ್ಲಿ ಮಕ್ಕಳು ತಮ್ಮ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ. ಮಕ್ಕಳ ದೃಷ್ಟಿಕೋನದಿಂದ ಸಮಸ್ಯೆಗಳನ್ನು ಗುರುತಿಸಿ, ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಅವರ ಅಗತ್ಯತೆಗಳನ್ನು ಸೇರಿಸಲು ಸಹಾಯ ಮಾಡುತ್ತದೆ ಎಂದರು.
ಮಕ್ಕಳ ಗ್ರಾಮ ಸಭೆಯು ಮಕ್ಕಳನ್ನು ಕೇವಲ ಫಲಾನುಭವಿಗಳಾಗಿ ನೋಡದೆ, ಸಮುದಾಯದ ಸಕ್ರಿಯ ಪಾಲುದಾರರನ್ನಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜನಸಂಖ್ಯೆಯ ಶೇ.40ರಷ್ಟು ಮಕ್ಕಳಿದ್ದಾರೆ. ಅವರಿಗೆ ಗೌರವ, ಸಂತೋಷ ಹಾಗೂ ಘನತೆಯಿಂದ ಬದುಕುವ ಹಕ್ಕು ಇದೆ ಮಕ್ಕಳ ಸಮಸ್ಯೆ ಪರಿಹಾರಕ್ಕಾಗಿ ಇಂತಹ ಸಭೆಗಳು ಪ್ರಮುಖವಾಗಿದ್ದು,ತಮ್ಮ ಅಗತ್ಯಗಳು ಹಾಗೂ ಎದುರಿಸುತ್ತಿರುವ ಅಡಚಣೆಗಳನ್ನು ಅಧಿಕಾರಿಗಳಿಗೆ ತಿಳಿಸುವುದು ಮಕ್ಕಳ ಹಕ್ಕಿನ ಭಾಗವೇ ಎಂದು ತಿಳಿಸಿದರು.ಬಾಲ್ಯ ವಿವಾಹ ತಡೆಗೆ ಸಹಕರಿಸಿ
ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಶಿಧರ್ ಎಸ್.ಕೋಸಂಬೆ ಬಾಲ್ಯ ವಿವಾಹ ತಡೆಗಟ್ಟುವ ಹೊಣೆ ಕೇವಲ ಇಲಾಖೆಗಳಿಗಷ್ಟೇ ಅಲ್ಲ, ಸಾರ್ವಜನಿಕರ ಪಾತ್ರವೂ ಮುಖ್ಯ. ಬಾಲ್ಯ ವಿವಾಹವನ್ನು ಬೇರು ಸಮೇತ ನಿರ್ಮೂಲ ಮಾಡಬೇಕಿದೆ ಎಂದು ಅವರು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಶಶಿಧರ್ ಎಸ್ ಕೋಸಂಬೆ, ಮಕ್ಕಳ ಹಕ್ಕುಗಳ ಸಂರಕ್ಷಣಾ ಫೌಂಡೇಶನ್ ಅಧ್ಯಕ್ಷ ಗಂಗರಾಜ.ಬಿ ಹಾಗು ಇತರೆ ಗಣ್ಯರಿಗೆ ಸನ್ಮಾನಿಸಲಾಯಿತು.
ಈಸಂಧರ್ಭದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ರಮೇಶ್,ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೌತಾಜ್,ಮಂಚನಬೆಲೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೈ.ರಾಮಕೃಷ್ಣ, ಮಕ್ಕಳ ಹಕ್ಕುಗಳ ಸಂರಕ್ಷಣಾ ಫೌಂಡೇಶನ್ ಅಧ್ಯಕ್ಷ ಗಂಗರಾಜ.ಬಿ, ಕಾರ್ಯದರ್ಶಿ ಮುನಿರಾಜು, ಖಜಾಂಚಿ ರಮೇಶ್ ಮತ್ತಿತರರು ಇದ್ದರು.