ರವಿ ಮೇಗಳಮನಿ
ಹಿರೇಕೆರೂರು: ತಾಲೂಕಿನ ಅಬಲೂರು ಗ್ರಾಮದ ಪ್ರವಾಸಿ ಮಂದಿರ ಅನಾಥವಾಗಿ ಪಾಳು ಬಿದ್ದಿದ್ದು, ಹೊರಗೆ ಚಂದ ಒಳಗೆ ಹುಳುಕ ಅನ್ನುವ ಪರಿಸ್ಥಿತಿ ಇದೆ. ಬರಿ ಸುಣ್ಣ-ಬಣ್ಣಕ್ಕೆ ಸೀಮಿತವಾದ ಪ್ರವಾಸಿ ಮಂದಿರ ಉಪಯೋಗಕ್ಕೆ ಬಾರದಂತಾಗಿದೆ.ಅಬಲೂರು ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯಿಂದ ಈ ಕಟ್ಟಡವನ್ನು ಎರಡೂವರೆ ದಶಕಗಳ ಹಿಂದೆ ನಿರ್ಮಾಣ ಮಾಡಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಪ್ರವಾಸಿ ಮಂದಿರದ ಬಳಕೆ ಕಡಿಮೆ ಇದ್ದರೂ ಅಬಲೂರು ಗ್ರಾಮವು ತನ್ನದೇ ಆದ ಇತಿಹಾಸ ಹೊಂದಿದೆ. ಪ್ರಮುಖವಾಗಿ ಸರ್ವಜ್ಞನ ಜನ್ಮಸ್ಥಳವಾಗಿದೆ. ಬರುವ ಯಾತ್ರಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರವಾಸಿ ಮಂದಿರ ನಿರ್ಮಿಸಲಾಗಿದೆ. ಶಿಕ್ಷಣ ಇಲಾಖೆಗೆ ಸೇರಿದ ಜಮೀನಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಪ್ರವಾಸಿ ಮಂದಿರ ಕಟ್ಟಡ ನಿರ್ಮಿಸಿ, 1999 ಏ. 6ರಂದು ಉದ್ಘಾಟಿಸಲಾಗಿದೆ.ಪ್ರಾರಂಭದಲ್ಲಿ ಎಲ್ಲ ವ್ಯವಸ್ಥಿತವಾಗಿತ್ತು. ಪೀಠೋಪಕರಣಗಳು ಸೇರಿದಂತೆ ಸಕಲ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು. ಕಾವಲುಗಾರರನ್ನು ನೇಮಿಸಿ ಸ್ವಚ್ಛತೆ ಕಾಪಾಡಲಾಗಿತ್ತು. ದಿನ ಕಳೆದಂತೆ ಸೂಕ್ತ ನಿರ್ವಹಣೆಯಿಲ್ಲದೆ ಅಲ್ಲಿದ್ದ ಪೀಠೋಪಕರಣಗಳು ಹಾಳಾಗಿವೆ. ನೀರು, ವಿದ್ಯುತ್ ವ್ಯವಸ್ಥೆ ಇಲ್ಲದೇ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಅಪಾರ ವೆಚ್ಚದ ಪೀಠೋಪಕರಣಗಳು ಹಾಳಾಗಿ, ತುಂಡು ತುಂಡಾಗಿ ಬಿದ್ದಿರುವುದು ನೋಡಿದರೆ ಬೇಸರವಾಗುತ್ತದೆ. ಅಧಿಕಾರಿಗಳ ನಿಷ್ಕಾಳಜಿ ಎಷ್ಟರ ಮಟ್ಟಿಗೆ ಇದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಮಧ್ಯೆ ಕಟ್ಟಡಕ್ಕೆ ಬಣ್ಣ ಲೇಪನ ಮಾಡಿ ಕೈ ತೊಳೆದುಕೊಳ್ಳಲಾಗಿದೆ. ಕಿಟಕಿ ಗಾಜುಗಳು ಹಾಳಾಗಿವೆ, ಸ್ನಾನ ಗೃಹ, ಶೌಚಗೃಹಗಳು ಸಂಪೂರ್ಣ ಹಾಳಾಗಿವೆ. ನೀರಿನ ಪೈಪ್‌ಗಳು ಹಾಳಾಗಿ ನೀರು ಸರಬರಾಜು ಇಲ್ಲದಂತಾಗಿದೆ. ವಿದ್ಯುತ್ ಸಂಪರ್ಕವಿಲ್ಲ. ಕಟ್ಟಡದ ತುಂಬೆಲ್ಲ ಕಸ ಹರಡಿದ್ದು ಕಂಡರೆ ಯಾರೂ ಈ ವ್ಯವಸ್ಥೆ ಬಗ್ಗೆ ಹಿಡಿಶಾಪ ಹಾಕದೇ ಇರಲಾರರು. ಕಟ್ಟಡಕ್ಕೆ ಬೀಗ ಹಾಕುವ ಗೋಜಿಗೂ ಹೋಗದೇ ಇರುವುದು ವಿಪರ್ಯಾಸವೇ ಸರಿ.
ಅಪಾರ ಹಣ ವೆಚ್ಚದಲ್ಲಿ ನಿರ್ಮಿಸಿದ ಈ ಕಟ್ಟಡ ಪಾಳು ಬೀಳುವಂತೆ ಮಾಡಿರುವುದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ಅಧಿಕಾರಗಳು ಎಚ್ಚೆತ್ತುಕೊಂಡು, ಕಟ್ಟಡಕ್ಕೆ ಸೂಕ್ತ ನಿರ್ವಹಣೆ ಮಾಡಿ, ಉಪಯೋಗಕ್ಕೆ ಬರುವಂತೆ ಮಾಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.ಕಟ್ಟಡ ನಿರ್ವಹಣೆಗೆ ಕ್ರಮ: ಪ್ರವಾಸಿ ಮಂದಿರ ಗ್ರಾಮೀಣ ಪ್ರದೇಶದಲ್ಲಿರುವುದರಿಂದ ಬಳಕೆ ಕಡಿಮೆಯಾಗಿದೆ ಎಂದು ತಿಳಿದುಬಂದಿದೆ. ನಾನು ಹೊಸದಾಗಿ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಈ ಕಟ್ಟಡದ ನಿರ್ವಹಣೆ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗುವುದು. ಆನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹಿರೇಕೆರೂರು ಲೋಕೋಪಯೋಗಿ ಇಲಾಖೆ ಎಇಇ ಡಿ.ಬಿ. ಬಸವರಾಜ ಹೇಳಿದರು.
ಅಬಲೂರು ಗ್ರಾಮದ ಪ್ರವಾಸಿ ಮಂದಿರ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿ ಉಪಯೋಗಕ್ಕೆ ಬಾರದ ಸ್ಥಿತಿಗೆ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ನೀಡಿ, ಸಾರ್ವಜನಿಕರಿಗೆ ಉಪಯೋಗಕ್ಕೆ ಲಭ್ಯವಾಗುವಂತೆ ಮಾಡಬೇಕು. ಮುಂದಾದರೂ ಸೂಕ್ತ ನಿರ್ವಹಣೆಗೆ ಒತ್ತು ನೀಡಬೇಕು ಎಂದು ಅಬಲೂರು ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಮಳವಳ್ಳಿ ಹೇಳಿದರು.