ಸಾರಾಂಶ
ಕನ್ನಡಪ್ರಭ ವಾರ್ತೆ ಕೋಟ
ಯುವ ಸಮೂಹ ಕೃಷಿ ಕ್ಷೇತ್ರಕ್ಕೆ ಮುನ್ನುಗ್ಗಿದರೆ ಕೃಷಿ ಅವಲಂಬಿತ ಭಾರತ ಸದೃಢವಾಗಿಸಲು ಸಾಧ್ಯ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಟ್ರಸ್ಟಿ ಕೆ.ಅನಂತಪದ್ಮನಾಭ ಐತಾಳ್ ಹೇಳಿದರು.ಅವರು ಕೋಟ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ- ಸಾಧಕ ರೈತರನ್ನು ಗುರುತಿಸುವ ಸರಣಿಯ ೩೮ನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ದೇಶದಲ್ಲಿ ಕೃಷಿಗಾಗಿ ಸಾಕಷ್ಟು ಪ್ರತಿಭಟನೆಗಳು, ಉಪವಾಸ ಸತ್ಯಾಗ್ರಹಗಳು ನಡೆಯುತ್ತವೆ. ಆದರೆ ಇದ್ಯಾವುದು ಸರ್ಕಾರದ ಕದ ತಟ್ಟುತ್ತಿಲ್ಲ. ಇದಕ್ಕೆ ಪರ್ಯಾಯ ಮಾರ್ಗ ಎಂದರೆ ರೈತನೇ ತಾನು ಬೆಳೆದ ಬೆಳೆಗೆ ದರ ನಿಗದಿಪಡಿಸುವಂತಾಗಬೇಕು. ಆಗ ಮಾತ್ರ ಕೃಷಿ ಕಾಯಕ ಉಳಿಯಲು ಸಾಧ್ಯ ಎಂದರು.ಇದೇ ಸಂದರ್ಭದಲ್ಲಿ ಕೋಟದ ಕಾಸನಗುಂದು ಪರಿಸರದ ಹಿರಿಯ ಕೃಷಿಕ ಸುಧಾಕರ ಶೆಟ್ಟಿ ಅವರನ್ನು ಕೃಷಿ ಪರಿಕರ ನೀಡಿ ಗೌರವಿಸಲಾಯಿತು. ಪರಿಸರ ಜಾಗೃತಿಗಾಗಿ ಅವರ ತೋಟದಲ್ಲಿ ಗಿಡ ನೆಟ್ಟು ಸಂಭ್ರಮಿಸಲಾಯಿತು.ಸಭೆಯ ಅಧ್ಯಕ್ಷತೆಯನ್ನು ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಕೋಟದ ಉದ್ಯಮಿ ಸದಾನಂದ ಪೂಜಾರಿ ಗಿಳಿಯಾರು, ರೋಟರಿ ಕ್ಲಬ್ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಭಾಸ್ಕರ್ ಶೆಟ್ಟಿ ಮಣೂರು, ರೈತ ಧ್ವನಿ ಸಂಘದ ಅಧ್ಯಕ್ಷ ಎಂ.ಜಯರಾಮ ಶೆಟ್ಟಿ, ಕೋಟ ಗ್ರಾಪಂ ಸದಸ್ಯೆ ವನೀತ ಶ್ರೀಧರ ಆಚಾರ್, ಗೆಳೆಯರ ಬಳಗ ಕಾರ್ಕಡ ಸದಸ್ಯ ಶೇಖರ್ ಮುಡೋಳಿ, ಎಸ್.ಸಿ.ಐ. ಕೋಟ ಲಿಜನ್ ಅಧ್ಯಕ್ಷ ಕೇಶವ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು.
ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರು. ಮಹಿಳಾ ಮಂಡಲದ ಸಂಚಾಲಕಿ ಸುಜಾತ ಎಂ.ಬಾಯರಿ ಸನ್ಮಾನ ಪತ್ರವಾಚಿಸಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಶಶಿಧರ ತಿಂಗಳಾಯ ವಂದಿಸಿದರು.