ಪರಶಿವಮೂರ್ತಿ ದೋಟಿಹಾಳ
ಕುಷ್ಟಗಿ: ಭಾವೈಕ್ಯದ ಜಾತ್ರೆಗೆ ಸಾಕ್ಷಿಯಾದ ಶ್ರೀ ಅವಧೂತ ಶುಕಮುನಿ ಸ್ವಾಮಿಗಳ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಪಲ್ಲಕ್ಕಿ ಉತ್ಸವ, ಸಪ್ತಭಜನೆ ಹಾಗೂ ಅನ್ನದಾಸೋಹ ಆರಂಭಿಸುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುವುದು.ತಾಲೂಕಿನ ದೋಟಿಹಾಳ ಹಾಗೂ ಕೇಸೂರು ಗ್ರಾಮಗಳಲ್ಲಿ ನಡೆಯುವ ಶ್ರೀ ಅವಧೂತ ಶುಕಮುನಿ ಸ್ವಾಮಿಗಳ ಜಾತ್ರೆ ಈ ಭಾಗದಲ್ಲಿ ದೊಡ್ಡ ಜಾತ್ರೆ ಎಂದು ಹೆಸರುವಾಸಿಯಾಗಿದೆ. ಇಂದಿನಿಂದ ಎಂಟು ದಿನಗಳ ಕಾಲ ಬೆಳಗ್ಗೆ ಹಾಗೂ ಸಾಯಂಕಾಲ ಪಲ್ಲಕ್ಕಿ ಉತ್ಸವ ಸಡಗರ- ಸಂಭ್ರಮದಿಂದ ಜರುಗಲಿದೆ.
ಶ್ರೀ ಅವಧೂತ ಶುಕಮುನಿ ಸ್ವಾಮಿಗಳ ಜಾತ್ರೆ ಸಂಭ್ರಮವನ್ನು ಹೆಚ್ಚಿಸಲು ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ತಹಸೀಲ್ದಾರರು, ಪೊಲೀಸ್ ಇಲಾಖೆ, ದೇವಸ್ಥಾನ ಕಮಿಟಿಯವರು, ದೋಟಿಹಾಳ ಹಾಗೂ ಕೇಸೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಗತ್ಯ ಸಿದ್ಧತೆ ಕೈಗೊಂಡಿದ್ದಾರೆ.ಪಲ್ಲಕ್ಕಿ ಉತ್ಸವಕ್ಕೆ ಚಾಲನೆ: ಫೆ. 17ರ ಶಿವರಾತ್ರಿ ಅಮಾವಾಸ್ಯೆಯಂದು ಶುಖಮುನಿ ಸ್ವಾಮಿಗಳ ಜಾತ್ರೆ ನಡೆಯಲಿದ್ದು, ಫೆ. 10ರಂದು ಬೆಳಗ್ಗೆ ಶುಕಮುನಿ ತಾತನ ಭಾವಚಿತ್ರ ಮೆರವಣಿಗೆ, ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ಸಿಗಲಿದೆ. ಭಾಜಾ ಭಜಂತ್ರಿಗಳು, ವಾದ್ಯಮೇಳಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ. ಸುತ್ತಲಿನ ಇಪ್ಪತ್ತಕ್ಕೂ ಅಧಿಕ ಹಳ್ಳಿಗಳ ಭಕ್ತರು ಭಾಗವಹಿಸುತ್ತಾರೆ.
ಅನ್ನದಾಸೋಹ:
ಪಲ್ಲಕ್ಕಿ ಉತ್ಸವ ಆರಂಭಗೊಂಡ ಮೊದಲ ದಿನದಿಂದ ಅನ್ನ ದಾಸೋಹ ನಡೆಯಲಿದೆ. ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ. ಹೋಳಿಗೆ, ಕರ್ಚಿಕಾಯಿ, ಅನ್ನ ಸಾಂಬಾರು. ಉದುರು ಸಜ್ಜಕ, ಗೋದಿ ಹುಗ್ಗಿ, ಮಿರ್ಚಿ ಭಜ್ಜಿ, ಉಂಡಿ, ಶಿರಾ, ರೊಟ್ಟಿ, ಬದನೆಕಾಯಿ, ಸವತೆಕಾಯಿ ಪಲ್ಯೆ, ಸಂಡಿಗೆ, ಹಪ್ಪಳ, ಜಿಲೇಬಿ ಸಿದ್ಧಪಡಿಸಲಾಗುತ್ತದೆ.
ಸಾಮೂಹಿಕ ಪೂಜೆ: ದೋಟಿಹಾಳ, ಕೇಸೂರು, ಜಾಲಿಹಾಳ, ರ್ಯಾವಣಕಿ, ಹೆಸರೂರು, ಮಾಟೂರು, ಗುಡಿಕಲಕೇರಿ, ನಡುವಲಕೊಪ್ಪ, ಕಡೇಕೊಪ್ಪ ಗ್ರಾಮಗಳಲ್ಲಿ ಮೊದಲೆ ನಿಯೋಜನೆ ಮಾಡಿದ ಸ್ಥಳಗಳಲ್ಲಿ ಶುಕಮುನಿ ತಾತನ ಪಲ್ಲಕ್ಕಿಗೆ ಸಾಮೂಹಿಕ ಪೂಜೆ ಮಾಡುವ ಅವಕಾಶ ನೀಡಲಾಗಿದೆ.ಸಪ್ತಭಜನೆ: ಫೆ. 10ರಂದು ಆರಂಭಗೊಂಡ ಸಪ್ತಭಜನೆ ಕಾರ್ಯಕ್ರಮ ದಿನದ 24 ತಾಸುಗಳ ಕಾಲ ನಡೆಯಲಿದ್ದು, ದೋಟಿಹಾಳ, ಕೇಸೂರು, ಹೆಸರೂರು, ಜಾಲಿಹಾಳ, ಮಾಟೂರು, ರ್ಯಾವಣಕಿ ಹಾಗೂ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಭಾಗವಹಿಸುತ್ತಾರೆ. ಫೆ. 17ರಂದು ಸಪ್ತಭಜನೆ ಸಮಾಪ್ತಿಯಾಗಲಿದ್ದು, ಅಂದು ಸಾಯಂಕಾಲ ಮಹಾರಥೋತ್ಸವ ಜರುಗಲಿದೆ.
ಸ್ವಚ್ಛತೆಗೆ ಕ್ರಮ: ಶುಕಮುನಿ ತಾತನ ಜಾತ್ರೆಯ ಅಂಗವಾಗಿ ಗ್ರಾಮಗಳಲ್ಲಿ ಬೀದಿದೀಪಗಳ ಜೋಡಣೆ, ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದು, ರಥಬೀದಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ದೋಟಿಹಾಳ ಪಿಡಿಒ ನಾಗರತ್ನಾ ಮ್ಯಾಳಿ ಹೇಳಿದರು.ಅಚ್ಚುಕಟ್ಟು ವ್ಯವಸ್ಥೆ: ದೋಟಿಹಾಳ ಗ್ರಾಮದ ಶುಕಮುನಿ ತಾತನ ಜಾತ್ರೆ ಎಂಟು ದಿನಗಳ ಕಾಲ ನಡೆಯುತ್ತಿದ್ದು, ಪಲ್ಲಕ್ಕಿ ಉತ್ಸವದ ಜವಾಬ್ದಾರಿಯನ್ನು ಸಂಘಟಕರಿಗೆ ವಹಿಸಿಕೊಡಲಾಗಿದೆ. ದಾಸೋಹ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗುತ್ತದೆ. ಮಾದರಿ ಜಾತ್ರೆ ಮಾಡಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಸೌಕರ್ಯಗಳನ್ನು ಕಲ್ಪಿಸಲು ಸಂಬಂಧಿಸಿದ ಇಲಾಖೆಗೆ ತಿಳಿಸಲಾಗಿದೆ ಎಂದು ಕುಷ್ಟಗಿ ತಹಸೀಲ್ದಾರರು ಅಶೋಕ ಶಿಗ್ಗಾಂವಿ ಹೇಳಿದರು.
ಡಂಗುರ: ಶುಕಮುನಿ ತಾತನ ಜಾತ್ರೆಯ ಅಂಗವಾಗಿ ಬೀದಿದೀಪಗಳ ಅಳವಡಿಕೆ ಹಾಗೂ ಪಲ್ಲಕ್ಕಿ ಸಾಗುವ ಮಾರ್ಗದಲ್ಲಿ ರಸ್ತೆ ಸ್ವಚ್ಛತೆ ಮಾಡಲಾಗಿದೆ. ಒಂದು ವಾರಗಳ ಕಾಲ ರಸ್ತೆಯಲ್ಲಿ ನೀರು ಚೆಲ್ಲಬಾರದು ಹಾಗೂ ಮನೆಯ ಮುಂದೆ ಬಟ್ಟೆ ತೊಳೆಯಬಾರದು ಎಂದು ಡಂಗೂರ ಸಾರಲಾಗಿದೆ ಎಂದು ಕೇಸೂರು ಪಿಡಿಒ ಕೆ. ವಾಗೀಶ ಹೇಳಿದರು.