ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯಾರ್ಥಿಗಳೇ ದೇವರು ಶಾಲೆಗಳೇ ದೇವಾಲಯಗಳು ಎಂದು ಅಚಲವಾಗಿ ನಂಬಿ ಉತ್ತರ ಕರ್ನಾಟಕದ ಹಾಗೂ ಮಂಬೈ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಬರ ನೀಗಿಸಿದ ಶ್ರೇಷ್ಠ ಸಂತ ಸಂಗನಬಸವ ಸ್ವಾಮೀಜಿಗಳು. ಶಿಕ್ಷಣ ದಾಸೋಹಿ, ಪ್ರಖರ ರಾಷ್ಟ್ರಪ್ರೇಮಿಯಾಗಿದ್ದ ಬಂಥನಾಳ ಸಂಗನಬಸವ ಶಿವಯೋಗಿಗಳು ಪ್ರಾತಃಸ್ಮರಣೀಯರು ಎಂದು ಸಂಸ್ಥೆಯ ಶ್ರೀ ವೇದ ಅಕಾಡೆಮಿ ಅಧ್ಯಕ್ಷ ಡಾ.ಶಿವಾನಂದ ಕೆಲೂರ ಹೇಳಿದರು.ನಗರದ ಇಟ್ಟಂಗಿಹಾಳ ರಸ್ತೆಯಲ್ಲಿರುವ ಶ್ರೀ ವೇದ ಅಕಾಡೆಮಿಯಲ್ಲಿ ಆಚರಿಸಲಾದ ಬಂಥನಾಳ ಸಂಗನಬಸವ ಶಿವಯೋಗಿಗಳು 126ನೇ ಜಯಂತಿಯಲ್ಲಿ ಮಾತನಾಡಿದ ಅವರು, ಬಂಥನಾಳ ಶ್ರೀಗಳು ಈ ನಾಡಿನಲ್ಲಿ ಹುಟ್ಟದೇ ಹೋಗಿದ್ದರೆ ಇಂದು ಅದೇ ಅನಕ್ಷರತೆಯ ಕೂಪದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಜೀವನ ಅಳಿದು ಹೋಗುತ್ತಿತ್ತು ಎಂದು ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸ ನೀಡಿದ ಚುಟುಕು ಸಾಹಿತ್ಯ ಪರಿಷತ್ ಜಗದೀಶ ಸಾಲಳ್ಳಿ ಮಾತನಾಡಿ, ಬಂಥನಾಳ ಶ್ರೀಗಳು ಚಿಕ್ಕ ವಯಸ್ಸಿನಲ್ಲಿಯೇ ಅತ್ಯಂತ ಚುರುಕು ಬುದ್ಧಿಯುಳ್ಳವರಾಗಿದ್ದರು. ಹತ್ತಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಪೋಷಿಸಿದ ಶ್ರೀಗಳು ವ್ಯಸನಮುಕ್ತ ಸಮಾಜ ನಿರ್ಮಾಣ, ಮೂಢನಂಬಿಕೆ ತೊಡೆದು ಹಾಕುವ ನಿಟ್ಟಿನಲ್ಲಿ ಶ್ರಮಿಸಿದ ಶ್ರೀಗಳ ಆಶಯಗಳನ್ನು ಮುಂದಿನ ತಲೆಮಾರುಗಳಿಗೆ ತೆಗೆದುಕೊಂಡು ಹೋಗುವ ಗುರುತರವಾದ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.ವೇದ ಸಂಸ್ಥೆಯ ಉಪಾಧ್ಯಕ್ಷ ದಯಾನಂದ ಕೆಲೂರ ಮಾತನಾಡಿ, ತಮ್ಮ ಜೋಳಿಗೆಯ ಮೂಲಕವೇ ಶಿಕ್ಷಣ ಪ್ರಸಾರದಂತಹ ಬಹುದೊಡ್ಡ ಕಾರ್ಯವನ್ನು ಮಾಡಿದರು. ಬಂಥನಾಳ ಶ್ರೀಗಳು ಎಂದೆಂದೂ ಅಮರ ಎಂದರು. ಸಂಗನಬಸವ ಶಿವಯೋಗಿಗಳ ಕುರಿತು ವಚನ ಗಾಯನಕ್ಕೆ ನೃತ್ಯ ಸಂಯೋಜಿಸಿ ಮಕ್ಕಳು ನೃತ್ಯ ಮಾಡಿದರು. 2026ನೇ ಸಾಲಿನಲ್ಲಿ 10ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯದರ್ಶಿ ನಂದಬಸಪ್ಪ ಯರನಾಳ, ತುಳಜಾರಾಮ ಸುಕ್ತೆ, ರಶ್ಮಿ ಕವಟಗಿಮಠ, ಮಧು ಕಲ್ಮಠ, ರಾವುತಪ್ಪ ಉನ್ನಿಭಾವಿ, ರಾಕೇಶ ದೇವೂರ, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.