ಕನ್ನಡಪ್ರಭ ವಾರ್ತೆ ಅಥಣಿವಿದ್ಯಾರ್ಥಿಗಳು ಮತ್ತು ಯುವ ಜನಾಂಗ ಮಾದಕ ವಸ್ತುಗಳಿಂದ ದೂರವಿದ್ದು, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿ ಇಟ್ಟುಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗಿ ಹೆತ್ತವರ ಕಣ್ಣಲ್ಲಿ ನೀರು ತರಿಸಬೇಡಿ ಎಂದು ಶಾಸಕ ಲಕ್ಷ್ಮಣ ಸವದಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಅಥಣಿ ಪೊಲೀಸ್ ಠಾಣಾಧಿಕಾರಿಗಳು, ಸ್ಥಳೀಯ ಜೆ.ಎ.ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೇಡ ಬ್ರೋ- ಮಾದಕ ದ್ರವ್ಯಗಳಿಂದ ದೂರವಿರಿ, ಆರೋಗ್ಯಕರ ಜೀವನವನ್ನು ಆರಿಸಿ ಎಂಬ ಸಂದೇಶ ಸಾರುವ ಮಾದಕ ವಸ್ತುಗಳ ಮಾರಾಟ ಹಾಗೂ ಕಳ್ಳ ಸಾಗಾಣಿಕೆಗೆ ವಿರೋಧಿ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರೋಗ್ಯವಂತ ಸಮಾಜ ಮತ್ತು ರಾಷ್ಟ್ರ ಕಟ್ಟುವಲ್ಲಿ ಯುವಕರ ಪಾತ್ರ ಮಹತ್ತರವಾಗಿದೆ. ನಮ್ಮ ದೇಶದ ಆಸ್ತಿಯಾಗಿರುವ ಯುವಶಕ್ತಿ ಸದೃಢವಾಗಿರಬೇಕು. ಮಾದಕ ವಸ್ತುಗಳಿಂದ ದೂರವಿದ್ದು, ಕುಟುಂಬದ, ಸಮಾಜದ ಹಿತ ಕಾಪಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕೂಡ ಜನಜಾಗೃತೆ ಮೂಡಿಸಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹಾಗೂ ಗೃಹಿ ಇಲಾಖೆಯ ಮೂಲಕ ಮಾದಕ ವಸ್ತುಗಳ ವಿರುದ್ಧ ಆಂದೋಲನ ಮೂಡಿಸುತ್ತಿರುವದು ಸ್ತುತ್ಯಾರ್ಹವಾಗಿದೆ ಎಂದರು.ಗುಣಮಟ್ಟದ ಶಿಕ್ಷಣ:

ಗ್ರಾಮೀಣ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿ ಉತ್ತಮ ಶಿಕ್ಷಣ ದೊರೆಯುವಂತಾಗಲು ತಾಲೂಕಿನಲ್ಲಿ ಕೆಪಿಎಸ್ಸಿ(KPSC) ಪಬ್ಲಿಕ್ ಶಾಲೆಗಳನ್ನು ಆರಂಭಿಸಲಾಗುತ್ತಿದೆ. ತಾಲೂಕಿನಲ್ಲಿ ಒಟ್ಟು 12 ಶಾಲೆಗಳನ್ನು ಸ್ಥಾಪಿಸಲಾಗುತ್ತಿದ್ದು, ಪ್ರತಿ ಶಾಲೆಗೆ ಹತ್ತು ಕೋಟಿಯಂತೆ ಒಟ್ಟು ₹ 120 ಕೋಟಿ ಸಿಎಸ್‌ಆರ್ ಫಂಡ್ ಒದಗಿಸಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಶಾಲೆಗಳು ಕಾರ್ಯಾರಂಭ ಮಾಡಲಿವೆ ಎಂದು ಪ್ರಕಟಿಸಿದರು.ಡಿವೈಎಸ್ಪಿ ಪ್ರಶಾಂತ ಮುನ್ನೊಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಬೇಡ ಬ್ರೋ, ಮಾದಕ ದ್ರವ್ಯಗಳಿಂದ ದೂರವಿರಿ ಕಾರ್ಯಕ್ರಮದ ಔಚಿತ್ಯ ವಿವರಣೆ ನೀಡಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯಗಳಿಂದ ದೂರವಿರುವಂತೆ ಕರೆ ನೀಡಿದರು.ಜೆಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ ಮಾತನಾಡಿದರು. ಉಪಕಾರ್ಯಾಧ್ಯಕ್ಷ ಸಂದೀಪ ಸಂಗೊರಾಮ, ಸಿಪಿಐ ಸಂತೋಷ ಹಳ್ಳೂರ, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಪ್ರಾಚಾರ್ಯ ಎಂ.ಪಿ.ಮೇತ್ರಿ, ಪುರಸಭೆ ಸದಸ್ಯ ರಾಜಶೇಖರ ಗುಡ್ಡೂಡಗಿ, ಉಪನ್ಯಾಸಕರು, ಪೊಲೀಸ್ ಅಧಿಕಾರಿಗಳು, ಸ್ಥಳೀಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಈ ವೇಳೆ ವಿದ್ಯಾರ್ಥಿಗಳು ಡಾ.ಪ್ರಿಯಂವಧಾ ಹುಲಗಬಾಳಿ ರೂಪಿಸಿದ ಮಾದಕ ದ್ರವ್ಯದಿಂದ ದೂರವಿರುವಂತೆ ರೂಪಕದ ಮೂಲಕ ಜಾಗೃತಿ ಮೂಡಿಸಿದರು. ಮಾದಕ ದ್ರವ್ಯಗಳಿಂದ ದೂರವಿರುವ ಕುರಿತು ರಂಗೋಲಿ ಹಾಗೂ ಚಿತ್ರ ಬಿಡಿಸಿದ ಬಹುಮಾನ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು.-----

ಕೋಟ್‌

ಯುವಕರು ತಂದೆ-ತಾಯಿಗಳ ಕನಸುಗಳಿಗೆ ಮತ್ತು ಭಾವನೆಗಳಿಗೆ ತಣ್ಣೀರು ಎರಚಬೇಡಿ. ವ್ಯಸನಗಳಿಗೆ ಬಲಿಯಾಗದೆ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ದೇಶದ ಆಸ್ತಿಯಾಗಿ ಬೆಳೆಯಿರಿ.ಲಕ್ಷ್ಮಣ ಸವದಿ, ಶಾಸಕರು, ಅಥಣಿ