ಜಿಲ್ಲೆಗೂ ತಟ್ಟಿದ ಸಾರಿಗೆ ನೌಕರರ ಮುಷ್ಕರದ ಬಿಸಿ

| Published : Aug 05 2025, 11:45 PM IST

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಸಾರಿಗೆ ನೌಕರರು ಇಂದು ಮುಷ್ಕರಕ್ಕೆ ಕರೆ ಕೊಟ್ಟಿದ್ದರಿಂದ ಬೆಳಗಿನ ಜಾವ 6 ಗಂಟೆಯಿಂದಲೇ ಬಸ್‌ ಸೇವೆಗಳು ಸ್ಥಗಿತಗೊಂಡು ಜನ ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಮುಗಿಬಿದ್ದಿರುವ ಸಾರಿಗೆ ನೌಕರರು ಇಂದು ಮುಷ್ಕರಕ್ಕೆ ಕರೆ ಕೊಟ್ಟಿದ್ದರಿಂದ ಬೆಳಗಿನ ಜಾವ 6 ಗಂಟೆಯಿಂದಲೇ ಬಸ್‌ ಸೇವೆಗಳು ಸ್ಥಗಿತಗೊಂಡು ಜನ ಪರದಾಡುವಂತಾಗಿದೆ.

ರಾಜ್ಯದಾದ್ಯಂತ ಸರ್ಕಾರಿ ಬಸ್ ಸಂಚಾರ ಬಂದ್ ಆಗಿದ್ದು, ಜಿಲ್ಲೆಯಲ್ಲಿ ಹಾಗೂ ನಗರದಲ್ಲಿ ಪ್ರಯಾಣಿಕರಿಗೆ ಬೆಳಗ್ಗೆಯಿಂದಲೇ ಮುಷ್ಕರದ ಬಿಸಿ ತಟ್ಟಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಇಂದು ಹೊರಗೆ ಬರಲೇ ಇಲ್ಲ. ಕೇಂದ್ರ ಬಸ್ ನಿಲ್ದಾಣ, ಆಳಂದ ರಸ್ತೆ, ಹುಮನಾಬಾದ್‌ ಬೇಸ್‌, ರಾಮ ಮಂದಿರ ಸರ್ಕಲ್‌, ಹೈಕೋರ್ಟ್‌ ಕ್ರಾಸ್‌ ಇಲ್ಲೆಲ್ಲಾ ಬಸ್‌ಗಾಗಿ ಕಾಯ್ದು ಜನ ಬೇಸತ್ತರು. ಬಸ್‌ ಬಾರದೆ ಇದ್ದಾಗ ದುಬಾರಿ ಬೆಲೆ ತೆತ್ತು ಕ್ರೂಸರ್‌, ಖಾಸಗಿ ವಾಹನ ಹತ್ತಿ ತಮ್ಮೂರುಗಳಿಗೆ ತೆರಳಿದ ನೋಟಗಳು ಕಂಡವು.

ಕಲಬುರಗಿ ನಗರ ಹಾಗೂ ಜಿಲ್ಲೆಯಲ್ಲಿ ಬಸ್‌ಗಳ ಓಡಾಟ ಸಂಪೂರ್ಣ ಸ್ಥಗಿತವಾಗಿತ್ತು. ಖುದ್ದು ಅಧಿಕಾರಿಗಳು ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರಿಗೆ ಬಸ್ ಒದಗಿಸಲು ಕಸರತ್ತು ಮಾಡುತ್ತಿದ್ದರೂ, ಮುಷ್ಕರದ ಹಿನ್ನೆಲೆಯಲ್ಲಿ ಸಿಬ್ಬಂದಿ ಯಾರೂ ಬಸ್‌ ಹೊರಗಡೆ ತೆಗೆಯಲು ಮುಂದಾಗುತ್ತಿಲ್ಲ.

ಕೆಲವರು ಬಸ್‌ ಹೊರಗಡೆ ತಂದಾಗ ಅಲ್ಲೇ ಇದ್ದ ಜಂಟಿ ಹೋರಾಟ ಸಮಿತಿಯವರು ಅವರಿಗೆ ತಿಳಿಸಿ ಹೇಳಿ ಬಸ್‌ ಮತ್ತೆ ಡೀಪೋ ಸೇರುವಂತೆ ಮಾಡುತ್ತಿದ್ದಾರೆ. ರಾತ್ರಿ ಪಾಳಿಯ ನೌಕರರಷ್ಟೇ ಕೆಲಸ ಮುಂದುವರಿಸಿ ಬೆಳಗ್ಗೆ ಕಲಬುರಗಿಗೆ ಬರುತ್ತಲೇ ಅವರಿದ್ದ ಬಸ್‌ ನಗರದ ಹೊರಗಡೆಯೇ ನಿಲ್ಲಿಸಿ ಅವರಿಂದ ನಗದು ಹಣ ಭರಿಸಿಕೊಂಡು ಮತ್ತೆ ಬಸ್‌ ಗಳು ನೇರವಾಗಿ ಡೀಪೋ ಸೇರುವಂತೆ ಸಿಬ್ಬಂದಿ ಸಂಘಟನೆಗಳ ಪದಾಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ.

ಕಲಬುರಗಿ ಕೇಂದ್ರ ಬಸ್‌ ನಿಲ್ದಾಣ, ಸೂಪರ್‌ ಮಾರ್ಕೆಟ್‌, ನಗರ ಸಾರಿಗೆ ನಿಲ್ದಾಣ ಸೇರಿದಂತೆ ನಗರದ ಹಲವೆಡೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ಇಡಲಾಗಿದೆ. ಬಸ್ ಪಾಸ್ ಪಡೆದ ಪ್ರಯಾಣಿಕರು ಬಸ್ ವ್ಯವಸ್ಥೆ ಇಲ್ಲದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ನಗರ ಸಂಚಾರ ಬಸ್‌ ಸೇವೆಗಳೂ ಇಲ್ಲವಾಗಿವೆ. ಸೂಪರ್ ಮಾರ್ಕೆಟ್‌ನಲ್ಲಿ ನಿತ್ಯ 199 ಟ್ರಿಪ್‌ ಓಡಾಡುತ್ತಿದ್ದ ಉಪ ನಗರ ಸಾರಿಗೆ ಸಂಚಾರ ಸಂಪೂರ್ಣ ನಿಂತು ಹೋಗಿದೆ ಎಂದು ಅಲ್ಲಿನ ಸಾರಿಗೆ ನಿಯಂತ್ರಕರಾದ ಚೆನ್ನಪ್ಪ ಸ್ಥಳಕ್ಕೆ ಭೇಟಿ ನೀಡಿದ್ದ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಹಳ್ಳಿ ಜನ ಬಸ್ ಇಲ್ಲದ ಕಾರಣ ಖಾಸಗಿ ವಾಹನ ಹತ್ತುವ, ದುಬಾರಿ ಹಣ ತೆರುವ ಅನಿವಾರ್ಯತೆಗೆ ಎದುರಿಸುತ್ತಿದ್ದಾರೆ.

ಪರ ಊರುಗಳಿಂದ ಬಂದು ಕಂಗೆಟ್ಟ ಜನ

ಪರ ಊರುಗಳಿಂದ ಬಂದವರಂತೂ ಬಸ್‌ ಇಲ್ಲದೆ ಕಂಗೆಟ್ಟಿದ್ದಾರೆ. ನಗರದ ಕೇಂದ್ರ ಬಸ್ ನಿಲ್ದಾಣ, ಶಹಾ ಬಝಾರ್ ನಾಕಾ, ಸೂಪರ್ ಮಾರ್ಕೆಟ್, ಗಂಜ್ ಪ್ರದೇಶ ಸೇರಿದಂತೆ ಇತರ ಕಡೆಗಳಲ್ಲಿ ಬಸ್‌ಗಳು ರಸ್ತೆಗೆ ಇಳಿಯದೆ ಇರುವುದರಿಂದ ಪ್ರಯಾಣಿಕರು ಖಾಸಗಿ ಬಸ್ ಹಾಗೂ ಹಾಗೂ ನಗರ ಸಂಚಾರಕ್ಕೆ ಆಟೋಗಳನ್ನು ಅವಲಂಬಿಸಿರುವುದು ಎಲ್ಲೆಡೆ ಕಂಡು ಬಂತು.

ಬೆಂಗಳೂರು, ಹೈದರಾಬಾದ್, ಬಳ್ಳಾರಿ, ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಗಳಿಂದ ಬಸ್ ಹಾಗೂ ರೈಲುಗಳ ಮೂಲಕ ಬೆಳಗ್ಗೆ ನಗರಕ್ಕೆ ಬಂದಿಳಿದ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲು ಹರಸಾಹಸಪಡುವಂತಾಗಿದೆ.

ಕೇಂದ್ರ ಬಸ್ ನಿಲ್ದಾಣಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಭೇಟಿ ನೀಡಿ ಮುಷ್ಕರ ಹಾಗೂ ಪ್ರಯಾಣಿಕರ ಸಂಚಾರದ ಕುರಿತು ಮಾಹಿತಿ ಪಡೆದರು.

ಈ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಂಸ್ಥೆಯ ಕಲಬುರಗಿ ವಿಭಾಗ-2ರ ಅಧಿಕಾರಿ ಎಸ್.ಜಿ.ಗಂಗಾಧರ, ಮುಷ್ಕರನಿರತ ಸಿಬ್ಬಂದಿಗೆ ಕೆಲಸಕ್ಕೆ ಬರುವಂತೆ ಮನವಿ ಮಾಡಿದ್ದೆವು. ನಮ್ಮ ಕಲಬುರಗಿ ವಿಭಾಗದಲ್ಲಿ ಒಟ್ಟು ಐದು ಡಿಪೋಗಳಿದ್ದು, ನಿತ್ಯ ಬೆಳಗ್ಗೆ ಎಂಟು ಗಂಟೆಯವರೆಗೆ 250ಕ್ಕೂ ಹೆಚ್ಚು ಬಸ್ ಗಳು ರಸ್ತೆಗೆ ಇಳಿಯುತ್ತಿದ್ದವು. ಆದರೆ, ಮುಷ್ಕರದ ಬಿಸಿಯಲ್ಲಿ ಮಂಗಳವಾರ ಕೇವಲ 20ರಿಂದ 25 ಬಸ್ ಗಳು ಮಾತ್ರವೇ ರಸ್ತೆಗಿಳಿದಿವೆ ಎಂದು ಹೇಳಿದ್ದಾರೆ.

ದುಬಾರಿ ಹಣ ವಸೂಲಿ ಆರೋಪ

ಬಸ್ ಸೇವೆ ಸ್ಥಗಿತಗೊಂಡಿದ್ದರಿಂದ ಬಸ್ ನಿಲ್ದಾಣಗಳಲ್ಲಿಯೇ ಖಾಸಗಿ ವಾಹನಗಳಿಗೆ ಸಂಚಾರಕ್ಕೆ ಅನುಮತಿಸಿದ್ದರಿಂದ ಕ್ರೂಸರ್‌, ಟೆಂಪೋ ಸೇರಿದಂತೆ ಅನೇಕ ನಮೂನೆ ವಾಹನಗಳು ನಿಲ್ದಾಣಕ್ಕೆ ಲಗ್ಗೆ ಇಟ್ಟಿವೆ. ಆದರೆ, ಈ ವಾಹನಗಳು ಬಸ್‌ನ ಟಿಕೆಟ್‌ಗಿಂತ ಹೆಚ್ಚಿನ ಹಣ ನಿಗದಿಪಡಿಸಿ ಸೇವೆ ನೀಡುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯ ಜನತೆ ಜೇಬಿಗೆ ಕತ್ತರಿ ಬೀಳುತ್ತಿದೆ. ಮುಷ್ಕರದ ಬಿಸಿ ತಮ್ಮ ಜೇಬಿಗೂ ತಟ್ಟಿದೆ ಎಂದು ಜನ ಗೋಳಾಡುವಂತಾಗಿದೆ. ಅಧಿಕಾರಿಗಳು ಕೆಲವರು ದುಬಾರಿ ಹಣ ವಸೂಲಿಗೆ ಬ್ರೇಕ್‌ ಹಾಕಲು ಯತ್ನಿಸುತ್ತಿದ್ದರೂ ಕೂಡಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿ ಬಂದಿದ್ದರಿಂದ ನಿಯಂತ್ರಣಕ್ಕೆ ಬರದಂತಾಗಿದೆ.