ವಚನಗಳು ಭವಿಷ್ಯದ ಬದುಕಿಗೆ ದಾರಿದೀಪ

| Published : Aug 05 2025, 11:45 PM IST

ಸಾರಾಂಶ

ವಿಶ್ವದಲ್ಲಿ ವಚನ ಸಾಹಿತ್ಯವೇ ಅತ್ಯಂತ ಮೌಲ್ಯಯುತ ಸಾಹಿತ್ಯವಾಗಿದೆ, ಈ ವಚನ ಸಾಹಿತ್ಯವು ಸರ್ವಕಾಲಕ್ಕೂ ಸರ್ವರಿಗೂ ಬದುಕಿನ ಹೆಗ್ಗುರುತುಗಳ ವಿಚಾರವಾಗಿದೆ. ಹೆಣ್ಣು ಮಾಯೆ, ಮಣ್ಣು ಮಾಯೆ, ಹೊನ್ನು ಮಾಯೆ ಅಲ್ಲ ಪ್ರಸ್ತುತ ಸಮಾಜದ ನಾಗರೀಕರಲ್ಲಿ ಮನಸ್ಸು ಮಾಯೆ ಆಗಿದೆ. ಸತ್ಯವನ್ನು ಮರೆ ಮಾಚಿ ಸುಳ್ಳುಗಳನ್ನು ಬಣ್ಣಿಸುವಂತ ವ್ಯವಸ್ಥೆಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬೇಡಿ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಇಂದಿನ ಯುವ ಪೀಳಿಗೆಗೆ ವಚನ ಸಾಹಿತ್ಯದಲ್ಲಿನ ಮೌಲ್ಯಗಳು ಅವರ ಭವಿಷ್ಯದ ಬದುಕಿಗೆ ದಾರಿದೀಪವಾಗಲಿವೆ ಎಂದು ಸರ್ಕಾರಿ ಬಾಲಕರ ಪದವಿಪೂರ್ವ ಬಾಲಕರ ಕಾಲೇಜಿನ ಕನ್ನಡ ಉಪನ್ಯಾಸಕ ವೆಂಕಟರಮಣಪ್ಪ ತಿಳಿಸಿದರು.

ನಗರದ ವಿಕ್ರಮ್ ಪದವಿ ಕಾಲೇಜಿನ ಸಹಯೋಗದಲ್ಲಿ ಕಸಾಪ, ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಕಾಲೇಜಿನ ಆವರಣದಲ್ಲಿ ನಡೆದ ಇಂದಿನ ಸಮಾಜಕ್ಕೆ ವಚನ ಸಾಹಿತ್ಯದಲ್ಲಿನ ಮೌಲ್ಯಗಳ ಪ್ರಸ್ತುತತೆ ಉಪನ್ಯಾಸದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಮೌಲ್ಯಯುತ ವಚನ ಸಾಹಿತ್ಯ

ವಿಶ್ವದಲ್ಲಿ ವಚನ ಸಾಹಿತ್ಯವೇ ಅತ್ಯಂತ ಮೌಲ್ಯಯುತ ಸಾಹಿತ್ಯವಾಗಿದೆ, ಈ ವಚನ ಸಾಹಿತ್ಯವು ಸರ್ವಕಾಲಕ್ಕೂ ಸರ್ವರಿಗೂ ಬದುಕಿನ ಹೆಗ್ಗುರುತುಗಳ ವಿಚಾರವಾಗಿದೆ. ಹೆಣ್ಣು ಮಾಯೆ, ಮಣ್ಣು ಮಾಯೆ, ಹೊನ್ನು ಮಾಯೆ ಅಲ್ಲ ಪ್ರಸ್ತುತ ಸಮಾಜದ ನಾಗರೀಕರಲ್ಲಿ ಮನಸ್ಸು ಮಾಯೆ ಆಗಿದೆ. ಸತ್ಯವನ್ನು ಮರೆ ಮಾಚಿ ಸುಳ್ಳುಗಳನ್ನು ಬಣ್ಣಿಸುವಂತ ವ್ಯವಸ್ಥೆಗಳಿಗೆ ವಿದ್ಯಾರ್ಥಿಗಳು ಕಿವಿಗೊಡಬೇಡಿ. ನಿಮ್ಮ ಜೊತೆ ನಿಮ್ಮ ಪೋಷಕರೂ ಇದ್ದಾರೆ ಎಂಬುದನ್ನು ಸದಾ ಸ್ಮಿರಿಸಿಕೊಂಡು ಸಾಧನೆಯತ್ತ ಸಾಗಬೇಕು ಎಂದರು.

ಗಾಯನ ಮೂಲಕ ವಚನ ವಿವರಣೆ

ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆದ ಜಿ.ಮುನಿರೆಡ್ಡಿ ಮಾತನಾಡಿ ವಚನಗಳನ್ನು ಹಾಡಿ ಅವುಗಳ ಮಹತ್ವವನ್ನು ವಿದ್ಯಾರ್ಥಿಗಳು ತಿಳಿಸಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮತ್ತು ಆ ಮೂಲಕ ತಮ್ಮ ಮುಂದಿನ ಭವಿಷ್ಯವನ್ನು ಸುಂದರವಾಗಿಸಿಕೊಳ್ಳಬಹುದೆಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಮು. ಚಲಪತಿಗೌಡ, ಪ್ರಾಂಶುಪಾಲ ಕೆ.ವಿ ಚಲಪತಿ, ಸಾಹಿತಿ ಕಾಗತಿ ವಿ. ವೆಂಕಟರತ್ನಂ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ವಿ.ಎನ್.ಶ್ರೀನಿವಾಸ್ ಮಾಜಿ ಅಧ್ಯಕ್ಷ ಮುನಿಕೃಷ್ಣಪ್ಪ, ವಿಕ್ರಂ ಕಾಲೇಜು ಉಪನ್ಯಾಸಕ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.