ಸಾರಾಂಶ
ಶಿರಸಿ: ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮೇಲೆ ಶಿರಸಿಯ ಕಾಂಗ್ರೆಸ್ ಮುಖಂಡರು ದಾಖಲಿಸಿದ್ದ ಪ್ರಕರಣದ ತನಿಖೆಗೆ, ಶುಕ್ರವಾರ ಧಾರವಾಡದ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಶಿರಸಿಯಲ್ಲಿ ಇತ್ತಿಚೆಗೆ ಪತ್ರಿಕಾಗೋಷ್ಠಿಯಲ್ಲಿ ಅನಂತಮೂರ್ತಿ ಹೆಗಡೆ ಅವರು, ಆಸ್ಪತ್ರೆಯ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ₹18.5 ಕೋಟಿ ಹಣ ಬಂದಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದರು. ಇದು ಸುಳ್ಳಾಗಿದೆ. ಹಾಗಾಗಿ ಅತಿ ಹೆಚ್ಚು ಸುಳ್ಳು ಹೇಳುವ ಶಾಸಕ ಪ್ರಶಸ್ತಿಯನ್ನು ಭೀಮಣ್ಣರಿಗೆ ನೀಡಬಹುದು ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದರು. ಕಾಂಗ್ರೆಸಿಗರು ಈ ಹೇಳಿಕೆ ಖಂಡಿಸಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯ ಜಾಮೀನು ರಹಿತ (ನಾನ್ ಬೇಲೆಬಲ್) ವಾರಂಟ್ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ನಾಯಕ ಅನಂತಮೂರ್ತಿ ಹೆಗಡೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದ ವಾದವನ್ನು ಆಲಿಸಿ, ಕೂಲಂಕಷವಾಗಿ ಪರಿಶೀಲನೆ ನಡೆಸಿದ ನ್ಯಾಯಾಧೀಶರು, ಈ ಪ್ರಕರಣದ ತನಿಖೆಗೆ ಮಧ್ಯಂತರ ತಡೆ ನೀಡಿದ್ದಾರೆ.ಅನಂತಮೂರ್ತಿ ಹೆಗಡೆ ಪರವಾಗಿ ವಕೀಲ ಸೌರಭ ಹೆಗಡೆ ವಾದ ಮಂಡಿಸಿದ್ದರು.ಸತ್ಯಕ್ಕೆ ಸಂದ ಜಯ: ಇದು ಸತ್ಯಕ್ಕೆ, ನ್ಯಾಯಕ್ಕೆ ಸಂದ ಗೆಲುವಾಗಿದೆ. ಅಧಿಕಾರ ದುರುಪಯೋಗ, ದ್ವೇಷ ರಾಜಕಾರಣದಿಂದ ಸತ್ಯ, ನ್ಯಾಯವನ್ನು ಕೊಂಡುಕೊಳ್ಳಲಾಗುವುದಿಲ್ಲ. ನಾನು ಕ್ಷೇತ್ರದ ಬಡ ಜನರ ಆಸ್ಪತ್ರೆಗಾಗಿ ಹೋರಾಟ ಮಾಡುತ್ತಿದ್ದು, ಶಾಸಕರ ಬಳಿ ಸತ್ಯ ಹೇಳಿ ಎಂದು ಕೇಳಿದ್ದಕ್ಕೆ ಪ್ರಕರಣ ದಾಖಲಿಸಿರುವುದು ಹಾಸ್ಯಾಸ್ಪದ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ತಿಳಿಸಿದರು.ಶಾಸಕ ಜನಪ್ರಿಯತೆ ಸಹಿಸದೇ ಅವಹೇಳನ: ಕೆ.ಜಿ. ನಾಗರಾಜ
ಸಿದ್ದಾಪುರ: ಶಾಸಕ ಭೀಮಣ್ಣ ನಾಯ್ಕ ಅವರ ಜನಪ್ರಿಯತೆಗೆ ಹೆದರಿ, ಯಾವುದೇ ಕಪ್ಪುಚುಕ್ಕೆ ಇಲ್ಲದ ಅವರ ಬಗ್ಗೆ ಅನಂತಮೂರ್ತಿ ಹೆಗಡೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನಾರ್ಹ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕೆ.ಜಿ. ನಾಗರಾಜ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಮಾಜಿಕ ಜೀವನದಲ್ಲಿದ್ದವರು ಹೇಳಿಕೆಗಳನ್ನು ಕೊಡುವಾಗ ಸುಸಂಸ್ಕೃತವಾಗಿ, ಭಾಷೆಯ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡಬೇಕು ಎಂದರು.
ಶಾಸಕ ಭೀಮಣ್ಣ ನಾಯ್ಕ ಅವರು ೨೦೨೩- ೨೪ರಲ್ಲಿ ಕ್ಷೇತ್ರಕ್ಕೆ ಸುಮಾರು ₹೨೩೦ ಕೋಟಿ ಅಭಿವೃದ್ಧಿಗಾಗಿ ಅನುದಾನ ತಂದಿದ್ದಾರೆ. ಶಿರಸಿ ನಗರಸಭೆ ಕುಡಿಯುವ ನೀರಿಗೆ ₹೬೫ ಕೋಟಿ, ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ₹೨೫ ಕೋಟಿ, ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಿಂದ ₹೫ ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ₹೪ ಕೋಟಿ, ₹೭೫ ಲಕ್ಷ, ಎಪಿಎಂಸಿ ರಸ್ತೆ ಕಾಮಗಾರಿಗೆ ₹೨ ಕೋಟಿ, ₹೫೦ ಲಕ್ಷ, ಲೋಕೋಪಯೋಗಿ ಇಲಾಖೆಯಿಂದ(ರಸ್ತೆಗೆ) ₹೬೦ ಕೋಟಿ, ಲೋಕೋಪಯೋಗಿ ಇಲಾಖೆಯಿಂದ(ಕಾಲುಸಂಕ)ಕ್ಕೆ ₹೧.೭೫ ಕೋಟಿ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಧಿಯಿಂದ ₹೭೫ ಲಕ್ಷ ಅನುದಾನ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಾಗಿ ಅನುದಾನ ತಂದಿದ್ದಾರೆ ಎಂದರು.ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಕಾಂಗ್ರೆಸ್ ಧುರೀಣ ಬಿ.ಆರ್. ನಾಯ್ಕ ಹೆಗ್ಗಾರಕೈ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಂ.ಜಿ. ನಾಯ್ಕ ಹಾದ್ರಿಮನೆ, ಕೆ.ಕೆ. ನಾಯ್ಕ ಸುಂಕತ್ತಿ, ಜಿ.ಎಂ. ಭಟ್ಟ ಕಾಜಿನಮನೆ, ಪಿ.ಡಿ. ಹೆಗಡೆ, ಟಿ.ಎಚ್. ನಾಯ್ಕ, ಅಣ್ಣಪ್ಪ ನಾಯ್ಕ, ಜನಾರ್ದನ ನಾಯ್ಕ ಗೋಳಗೋಡ, ಎಸ್.ಕೆ. ನಾಯ್ಕ ಕಡಕೇರಿ, ಬಾಬು ನಾಯ್ಕ ಕಡಕೇರಿ, ಮಂಜುನಾಥ ನಾಯ್ಕ ತ್ಯಾರ್ಸಿ, ವೀರಭದ್ರ ನಾಯ್ಕ ಮುಂತಾದವರಿದ್ದರು.