ಚರ್ಚೆಗೆ ಗ್ರಾಸವಾದ ಹೊರಗುತ್ತಿಗೆ ನೌಕರರ ವೇತನ ವಿಳಂಬ ವಿಚಾರ

| Published : Oct 29 2025, 01:45 AM IST

ಸಾರಾಂಶ

ನಗರದ ಪ್ರಮುಖ ವೃತ್ತಗಳಿಗೆ ಮಹಾನ್ ನಾಯಕರುಗಳ ಹೆಸರಿಡಲು ಸರ್ವಾನುಮತ ಒಪ್ಪಿಗೆ ಇವೆಲ್ಲ ಮಂಗಳವಾರ ನಡೆದ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅಧ್ಯಕ್ಷತೆಯಲ್ಲಿ ಜರುಗಿದ ನಗರಸಭೆ ಸಾಮಾನ್ಯ ಸಭೆಯಲ್ಲಿ ಕಂಡು ಬಂದಿತು.

ರಾಣಿಬೆನ್ನೂರು: ವಿಪಕ್ಷ ಮಂಡಿಸಿದ ಉಪ ಸೂಚನೆ ಅಂಗೀಕಾರ, ಒಳಚರಂಡಿ ದುರಸ್ತಿ ಹಾಗೂ ಹೊರ ಗುತ್ತಿಗೆ ನೌಕರರ ವೇತನ ವಿಳಂಬ ವಿಚಾರದಲ್ಲಿ ಪಕ್ಷಭೇದ ಮರೆತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸದಸ್ಯರು, ನಗರಸಭೆ ಕ್ರೀಡಾಂಗಣವನ್ನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಲು ಸದಸ್ಯರ ವಿರೋಧ, ನಗರದ ಪ್ರಮುಖ ವೃತ್ತಗಳಿಗೆ ಮಹಾನ್ ನಾಯಕರುಗಳ ಹೆಸರಿಡಲು ಸರ್ವಾನುಮತ ಒಪ್ಪಿಗೆ ಇವೆಲ್ಲ ಮಂಗಳವಾರ ನಡೆದ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಅಧ್ಯಕ್ಷತೆಯಲ್ಲಿ ಜರುಗಿದ ನಗರಸಭೆ ಸಾಮಾನ್ಯ ಸಭೆಯಲ್ಲಿ ಕಂಡು ಬಂದಿತು. ನಗರಸಭೆ ಮಳಿಗೆಗಳ ಬಾಡಿಗೆ ಹಣದಲ್ಲಿ ನಗರದ ವಿವಿಧ ಭಾಗಗಳಲ್ಲಿ ಉದ್ಯಾನಗಳ ಅಭಿವೃದ್ಧಿ ಮಾಡುವ ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಪ್ರಕಾಶ ಬುರಡಿಕಟ್ಟಿ ಹಾಗೂ ನಿಂಗರಾಜ ಕೋಡಿಹಳ್ಳಿ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಕ್ರಮ ಜರುಗಿಸುಂತೆ ಆಗ್ರಹಿಸಿದರು. ಆದರೆ ಇದಕ್ಕೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಹಾಗೂ ಆಯುಕ್ತ ಎಫ್.ಐ.ಇಂಗಳಗಿ ಸಮ್ಮತಿ ನೀಡಲಿಲ್ಲ. ಹೀಗಾಗಿ ಈ ವಿಷಯವನ್ನು ಮತಕ್ಕೆ ಹಾಕುವಂತೆ ಪಟ್ಟು ಹಿಡಿದರು. ಈ ವಿಷಯವಾಗಿ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಒಂದು ಹಂತದಲ್ಲಿ ಸಭೆಯಲ್ಲಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದು ತಿಳಿಯದಂತಾಯಿತು. ನಂತರ ಉಪ ಸೂಚನೆಯನ್ನು ಮತಕ್ಕೆ ಹಾಕಲಾಯಿತು. ಆಗ ಒಟ್ಟು 35 ಸದಸ್ಯರ ಪೈಕಿ ಉಪ ಸೂಚನೆ ಪರವಾಗಿ ಉಪಾಧ್ಯಕ್ಷ ನಾಗರಾಜ ಪವಾರ ಸೇರಿದಂತೆ ಬಿಜೆಪಿಯ 22, ಕಾಂಗ್ರೆಸ್ ಪಕ್ಷದ ಒಬ್ಬ ಸದಸ್ಯೆ ಮತ ಚಲಾಯಿಸಿದರು. ಇದರ ವಿರುದ್ಧವಾಗಿ ಕಾಂಗ್ರೆಸ್ ಪಕ್ಷದ 08, ಕೆಪಿಜೆಪಿಯ (ಕರ್ನಾಟಕ ಪ್ರಜಾಕೀಯ ಜನತಾ ಪಕ್ಷ) 03 ಒಟ್ಟು 11 ಸದಸ್ಯರು ಮತ ಚಲಾಯಿಸಿದರು. ಬಿಜೆಪಿಯ ಒಬ್ಬ ಸದಸ್ಯ ತಟಸ್ಥವಾಗಿ ಉಳಿದರು. ಉಪಸೂಚನೆ ಅಂಗೀಕರಿಸಲಾಗಿದ್ದು ಸೂಚನೆ ಕಿತ್ತು ಹಾಕಲಾಗಿದೆ ಎಂದು ಅಧ್ಯಕ್ಷರು ಸಭೆಗೆ ತಿಳಿಸಿದರು.ಈ ತಿಂಗಳ ಕೊನೆಗೆ ನಮ್ಮ ಅವಧಿ ಮುಕ್ತಾಯಗೊಳ್ಳಲಿದ್ದು ಯಾವ ಪುರುಷಾರ್ಥಕ್ಕೆ ನಮ್ಮನ್ನು ಅಧ್ಯಯನ ಪ್ರವಾಸಕ್ಕಾಗಿ ಇಂದೋರ್‌ಗೆ ಕಳುಹಿಸುತ್ತಿದ್ದೀರಿ? ಮೊದಲಿಗೆ ಕಳುಹಿಸಿದ್ದರೆ ಪ್ರಯೋಜನವಾಗುತ್ತಿತ್ತು ಎಂದು ಬಿಜೆಪಿ ಸದಸ್ಯ ಪ್ರಕಾಶ ಬುರಡಿಕಟ್ಟಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪರಿಸರ ವಿಭಾಗದ ಸಕಾನಿ ಎಂಜಿನಿಯರ್ ಮಹೇಶ ಕೋಡಬಾಳ, ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಇತ್ತೀಚಿಗೆ ಸರ್ಕಾರದಿಂದ ಸುತ್ತೋಲೆ ಬಂದಿರುವ ಕಾರಣ ಸದಸ್ಯರನ್ನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ ಎಂದರು. ಬಿಜೆಪಿ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ಕಳೆದ ತಿಂಗಳು ನಗರದಲ್ಲಿ ಸಮಗ್ರವಾಗಿ ಒಳ ಚರಂಡಿ ದುರಸ್ತಿಗೆ ಪ್ರತ್ಯೇಕ ಹಣ ನೀಡಲು ಯೋಜನೆ ರೂಪಿಸಲಾಗಿದೆ. ಆದರೂ ಕೂಡ ಒಳ ಚರಂಡಿ ದುರಸ್ತಿಗೆ ಪ್ರತಿ ತಿಂಗಳು ಖರ್ಚು ತೋರಿಸಿದ್ದಿರಿ ಎಂದರು. ಇದಕ್ಕೆ ಎಲ್ಲ ಸದಸ್ಯರು ಪಕ್ಷಭೇದ ಮರೆತು ದನಿಗೂಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಹೊರಗುತ್ತಿಗೆ ವೇತನದಡಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಮೂರ‍್ನಾಲ್ಕು ತಿಂಗಳುಗಳಿಂದ ಗುತ್ತಿಗೆ ಪಡೆದಿರುವವರು ವೇತನ ಪಾವತಿಸಿಲ್ಲ. ಆದ್ದರಿಂದ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದು ಪೌರಕಾರ್ಮಿಕರಿಗೆ ನೇರ ಪಾವತಿಗೆ ವ್ಯವಸ್ಥೆ ಮಾಡಬೇಕು ಎಂದು ಬಿಜೆಪಿಯ ಪ್ರಕಾಶ ಬುರಡಿಕಟ್ಟಿ ಆಗ್ರಹಿಸಿದರು. ಇದಕ್ಕೆ ಪೂರಕವಾಗಿ ಬಿಜೆಪಿಯ ನಿಂಗರಾಜ ಕೋಡಿಹಳ್ಳಿ, ಕಾಂಗ್ರೆಸ್ ಪಕ್ಷದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ ಬಸೇನಾಯ್ಕ ಮಾತನಾಡಿದರು. ಕಚೇರಿ ಕಂಪ್ಯೂಟರ್ ಬದಲಾವಣೆ ಮಾಡಲಾಗಿದ್ದು, ಹಳೆಯ ಕಂಪ್ಯೂಟರ್ ಏನು ಮಾಡಲಾಗಿದೆ. ಅವುಗಳನ್ನು ಟೆಂಡರ್ ಕರೆದು ಹರಾಜು ಮಾಡುವಂತೆ ಪ್ರಕಾಶ ಬುರಡಿಕಟ್ಟಿ ಆಗ್ರಹಿಸಿದರು. ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲು ನಗರಸಭಾ ಕ್ರೀಡಾಂಗಣವನ್ನು ಯುವಜನಸೇವೆ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸುವ ವಿಚಾರಕ್ಕೆ ಬಿಜೆಪಿ ಪಕ್ಷದ ನಿಂಗರಾಜ ಕೋಡಿಹಳ್ಳಿ ಮತ್ತು ಪ್ರಕಾಶ ಬುರಡಿಕಟ್ಟಿ, ಕೆಪಿಜೆಪಿಯ ಹಬಿಬುಲ್ಲಾ ಕಂಬಳಿ ಆಕ್ಷೇಪ ವ್ಯಕ್ತಪಡಿಸಿದರು. ಬೇಕಾದರೆ ಸರ್ಕಾರದ ಅನುದಾನವನ್ನು ನಗರಸಭೆ ಬಿಡುಗಡೆ ಮಾಡಿ ನಗರಸಭೆ ವತಿಯಿಂದಲೇ ಕ್ರೀಡಾಂಗಣ ಅಭಿವೃದ್ಧಿ ಪಡಿಸೋಣ ಎಂದರು. ನಗರದ ಪ್ರಮುಖ ವೃತ್ತಗಳಿಗೆ ಮಹಾನ್ ನಾಯಕರುಗಳ ಹೆಸರಿಡಲು ಸಭೆಯಲ್ಲಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಯಿತು. ಆಯುಕ್ತ ಎಫ್.ಐ.ಇಂಗಳಗಿ, ಉಪಾಧ್ಯಕ್ಷ ನಾಗರಾಜ ಪವಾರ ವೇದಿಕೆಯಲ್ಲಿದ್ದರು. ಬಿಜೆಪಿ ಸದಸ್ಯರ ಮನವಿ: ಬಿಜೆಪಿ ಕಚೇರಿ ವಿಚಾರವಾಗಿ ಅ.18ರಂದು ನಿಗದಿಯಾಗಿದ್ದ ನಗರಸಭೆ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿದ್ದ ಬಿಜೆಪಿ ಸದಸ್ಯರು ಸಭೆಯ ಪ್ರಾರಂಭದಲ್ಲಿಯೇ ಎಲ್ಲರೂ ಒಂದಾಗಿ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಬಳಿಗೆ ತೆರಳಿ ಬಿಜೆಪಿ ಕಚೇರಿ ವಿಷಯವನ್ನು ಚರ್ಚೆಗೆ ಪರಿಗಣಿಸುವಂತೆ ಮನವಿ ಸಲ್ಲಿಸಿದರು. ಸಭೆ ಮುಕ್ತಾಯ ಹಂತದಲ್ಲಿ ಬಿಜೆಪಿ ಸದಸ್ಯ ಪ್ರಕಾಶ ಬುರಡಿಟ್ಟಿ ಬಿಜೆಪಿ ಕಚೇರಿಯನ್ನು ಭೂ ಬಾಡಿಗೆ ಆಧಾರದಲ್ಲಿ ನೀಡುವಂತೆ ವಿಷಯ ಮಂಡಿಸಿದರೆ ಮತ್ತೊಬ್ಬ ಸದಸ್ಯೆ ರೂಪಾ ಚಿನ್ನಿಕಟ್ಟಿ ಅದಕ್ಕೆ ಅನುಮೋದನೆ ನೀಡಿದರು.