ರಾಣಿಬೆನ್ನೂರು: ಸುಮಾರು ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿರುವ ಕನ್ನಡ ಭಾಷೆ ತನ್ನದೇ ಆದ ವಿಶಿಷ್ಟ ಪರಂಪರೆ, ಸಾಹಿತ್ಯ ಸಂಪತ್ತು ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದೆ. ಇಂತಹ ಸ್ವಚ್ಛ, ಸುಂದರ ಹಾಗೂ ಶ್ರೀಮಂತ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನವನ್ನು ಇಂದಿನ ಮಕ್ಕಳು ಮಾಡಬೇಕು ಎಂದು ತಹಸೀಲ್ದಾರ್‌ ಆರ್.ಎಚ್. ಭಾಗವಾನ್ ಹೇಳಿದರು.

ನಗರದ ಚರ್ಚ್ ರಸ್ತೆ ಶಿಕ್ಷಕರ ಸಂಘದಲ್ಲಿ ಭಾನುವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲೂಕು ಆಡಳಿತ, ನಗರಸಭೆ, ತಾಪಂ, ಶಿಕ್ಷಣ ಇಲಾಖೆ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅನೇಕ ಸಾಧು-ಸಂತರು, ದಾರ್ಶನಿಕರು, ಕವಿಗಳು, ಶರಣರು ಸೇರಿದಂತೆ ನಾಡಿನ ಮಹಾಪುರುಷರು ಕನ್ನಡ ಭಾಷೆಯನ್ನು ಅಪ್ಪಿಕೊಂಡು, ತಮ್ಮ ಅಮೂಲ್ಯ ಸಾಹಿತ್ಯ ಹಾಗೂ ವಚನಗಳ ಮೂಲಕ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಅವರ ಕೊಡುಗೆಯ ಫಲವಾಗಿ ಕನ್ನಡ ಭಾಷೆ ಇಂದಿಗೂ ತನ್ನ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಮಾತನಾಡಿ, ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ, ಅದು ನಮ್ಮ ಸಂಸ್ಕೃತಿ, ಸಂಸ್ಕಾರ, ಇತಿಹಾಸ ಮತ್ತು ಬದುಕಿನ ಪ್ರತಿಬಿಂಬವಾಗಿದೆ. ನಾಡು, ನುಡಿ, ನೆಲ, ಜಲದ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಹೊಂದುವುದರ ಜೊತೆಗೆ ಅವುಗಳ ಸಂರಕ್ಷಣೆಯ ಗುರುತರ ಜವಾಬ್ದಾರಿಯನ್ನು ಹೊರಬೇಕು. ಕನ್ನಡಿಗರೆಲ್ಲರೂ ಭಾಷೆಯ ಬಗ್ಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಶಾಲೆಗಳು, ಕನ್ನಡ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ ಶಿಗ್ಲಿ ಅಧ್ಯಕ್ಷತೆ ವಹಿಸಿದ್ದರು.

ಪೌರಾಯುಕ್ತ ಫಕ್ಕೀರಪ್ಪ ಇಂಗಳಗಿ, ತಾಪಂ ಇಒ ಡಾ. ವೆಂಕಟೇಶ ಸಣ್ಣಬಿದರಿ, ಬಿಸಿಎಂ ಇಲಾಖೆಯ ನಿವೃತ್ತ ಜಿಲ್ಲಾಧಿಕಾರಿ ವಿ.ಎಸ್. ಹಿರೇಮಠ, ಸ್ವಾಭಿಮಾನ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ರೈತಮುಖಂಡ ರವೀಂದ್ರಗೌಡ ಪಾಟೀಲ, ಗಣೇಶ ಗೋಣಿಬಸಮ್ಮನವರ, ಶಿವಕುಮಾರ ಗೊರವರ, ಮಂಜಾನಾಯ್ಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.