ಹೂವಿನಹಡಗಲಿ: ಕನ್ನಡ ರಾಜ್ಯೋತ್ಸವ ಹಬ್ಬ ಮನೆ ಮನಗಳಲ್ಲಿ ನಿರಂತರವಾಗಲಿ, ಕನ್ನಡ ಭಾಷೆ ಪ್ರತಿಯೊಬ್ಬರ ನಾಲಿಗೆ ಮೇಲೆ ನಲಿದಾಡಲಿ, ಕನ್ನಡ ಬರಿ ಭಾಷೆ ಅಷ್ಟೇ ಅಲ್ಲ, ಅದು ನಮ್ಮ ಸಂಸ್ಕೃತಿ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಇಲ್ಲಿನ ಜಿಪಿಜಿ ಕಾಲೇಜು ಆವರಣದಲ್ಲಿ ತಾಲೂಕಾಡಳಿತ ಆಯೋಜಿಸಿದ್ದ 71ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಕನ್ನಡ ನಾಡನ್ನು ಒಗ್ಗೂಡಿಸಲು ಸಾಕಷ್ಟು ಮಹನೀಯರು ಹೋರಾಟ ಮಾಡಿದ್ದಾರೆ. 2 ಸಾವಿರ ವರ್ಷದ ಇತಿಹಾಸ ಹೊಂದಿರುವ ಕನ್ನಡ ಶ್ರೀಮಂತ ಭಾಷೆಯಾಗಿದೆ ಎಂದರು.ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಪ್ರತಿಭಾ ಮಾತನಾಡಿ, ಕವಿಗಳು, ದಾಸರು, ಶರಣ, ಸಂತರು ಕನ್ನಡ ಭಾಷೆ ಕಟ್ಟಿ ಬೆಳೆಸಿದ್ದಾರೆ. ಕನ್ನಡ ಭಾಷೆಯ ಪುಸ್ತಕ ಓದುವುದರಿಂದ ನಮ್ಮ ಜ್ಞಾನ ಹೆಚ್ಚಿಸುವ ಜತೆಗೆ ಸಮಾಜದಲ್ಲಿ ನಾವು ಹೇಗೆ ಬದುಕಬೇಕೆಂಬುದನ್ನು ದಾರಿ ತೋರುತ್ತದೆ, ಮನ ಪರಿವರ್ತನೆ ಮಾಡುವ ಜತೆಗೆ ಸಮಾಜದಲ್ಲಿ ಸಹ ಜೀವನದ ಪಾಠ ಕಲಿಸುತ್ತದೆ. ಕನ್ನಡ ಏಕೀಕರಣಕ್ಕಾಗಿ ಸಾಕಷ್ಟು ಮಹನೀಯರು ಹೋರಾಟ ಮಾಡಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ, ಅವರ ಆದರ್ಶ ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಕಸಾಪ ಮಾಜಿ ಅಧ್ಯಕ್ಷ ಡಾ. ಕೆ.ರುದ್ರಪ್ಪ ಇವರು ಡಾ.ಪಿ.ಎಂ. ಅನಿಲ್ಕುಮಾರ ಕನ್ನಡದ ಕುಸುಮಗಳು ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿ, ಒಂದು ಸರ್ವೇ ಪ್ರಕಾರ ಪುಸ್ತಕ ಓದುಗರ ಸಂಖ್ಯೆ ಶೇ.28 ರಷ್ಟು ಮಾತ್ರ ಇದ್ದಾರೆ ಎಂಬ ಆತಂಕಕಾರಿ ಮಾಹಿತಿಯ ನಡುವೆ ಅನಿಲ್ಕುಮಾರ ಕನ್ನಡ ಕುಸುಮಗಳು ಪುಸ್ತಕ ಉತ್ತಮ ಮಾಹಿತಿ ಹೊಂದಿದೆ, ಕನ್ನಡ ನಾಡು ನುಡಿಗಾಗಿ ತಮ್ಮ ಜೀವನನ್ನೇ ಮುಡಿಪಾಗಿಟ್ಟ, ಮಾಗಳದ ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಕೊಡುಗೆ ಬಹು ದೊಡ್ಡದಿದೆ. ಇಂತಹ ನೆಲದಲ್ಲಿ ಇಲ್ಲಿನ ಕಸಾಪ, ತಾಲೂಕ ಮಟ್ಟದ ಸಾಹಿತ್ಯ ಸಮ್ಮೇಳನ ಮಾಡಲು ಸಜ್ಜಾಗುತ್ತಿರುವುದು ಉತ್ತಮ ಬೆಳವಣಿಗೆ ಈ ಮೂಲಕ ಕನ್ನಡ ಭಾಷೆ ಮತ್ತು ಕಲಾವಿದರನ್ನು ಪೋಷಣೆ ಮಾಡಲು ಸಮ್ಮೇಳನ ಅಗತ್ಯವಿದೆ ಎಂದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ತಾಪಂ ಇಒ ಪರಮೇಶ್ವರ ಮಾತನಾಡಿದರು.
ಇದೇ ವೇಳೆ ದೂಪದ ಬೆಟ್ಟಪ್ಪ, ಎಚ್.ಎಂ. ಗುರುಬಸವರಾಜಯ್ಯ, ಪಿ. ಕರಿವೀರನಗೌಡ, ಕೆ.ವಾಗೀಶ, ಡಾ. ಎಲ್.ಪಿ.ಕಠಾರಿ ನಾಯ್ಕ, ಹಣ್ಣಿ ಚನ್ನಪ್ಪ, ಮಾಯಪ್ಪ ಹರಿಜನ, ಬಳ್ಳಾರಿ ರಾಮಣ್ಣ, ಗಂಗಮ್ಮ ಬಾರಿಕರ, ಬಸವರಾಜ ಹಡಗಲಿ ಸೇರಿದಂತೆ 10 ಜನ ಸಾಧಕರನ್ನು ಸನ್ಮಾನಿಸಲಾಯಿತು. ಜತೆಗೆ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಾಲೂಕು ಕಸಾಪದಿಂದ ಕನ್ನಡ ಕುವರ-ಕುವರಿ ಪ್ರಶಸ್ತಿ ನೀಡಲಾಯಿತು.
ಬಿಇಒ ಮಂಗಳ ಕೆ, ಮೋಹನರಡ್ಡಿ, ಸಿಪಿಐ ಮಲ್ಲಪ್ಪ ಹೂಗಾರ, ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ, ಸರಿಗಮಪ ಖ್ಯಾತಿಯ ರಮೇಶ ಲಮಾಣಿ, ನೌಕರರ ಸಂಘದ ಅಧ್ಯಕ್ಷ ಎ. ಕೊಟ್ರಗೌಡ, ಕಸಾಪ ಅಧ್ಯಕ್ಷ ವೀರೇಂದ್ರ ಪಾಟೀಲ್, ಕೆ. ಮುದುಕಪ್ಪ, ಕೋರಿ ಹಾಲೇಶ, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.