ಸಾರಾಂಶ
ಕನ್ನಡಪ್ರಭ ವಾರ್ತೆ ಕೊಡೇಕಲ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹನೀಯರ ಇತಿಹಾಸವೇ ರೋಚಕವಾಗಿದ್ದು, ಇಂದಿನ ಯುವ ಪೀಳಿಗೆಗೆ ಪ್ರೇರಣೆದಾಯಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಹೇಳಿದರು.
ಕ್ವಿಟ್ ಇಂಡಿಯಾ ಚಳವಳಿಯ ವರ್ಷಾಚರಣೆ ನೆನಪಿಗಾಗಿ, ಕೊಡೇಕಲ್ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆಯವರನ್ನು ಶುಕ್ರವಾರ ಕೊಡೇಕಲ್ ನಿವಾಸದಲ್ಲಿ ಜಿಲ್ಲಾಡಳಿತದಿಂದ ಸನ್ಮಾನಿಸಿ ಅವರು ಮಾತನಾಡಿದರು.ದೇಶದ ಸ್ವಾತಂತ್ರ್ಯಕ್ಕಾಗಿ ಜರುಗಿದ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹಲವರು ತಮ್ಮ ಪ್ರಾಣ ಕಳೆದುಕೊಂಡು ಹುತಾತ್ಮರಾಗಿದ್ದಾರೆ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದಂತಹ ಇಂತಹ ಹೋರಾಟಗಾರರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ಮಾದರಿಯಾಗಿ ಸ್ವಿಕರಿಸಬೇಕು ಎಂದರು.
ಜಿಲ್ಲೆಯಲ್ಲಿ ಒಟ್ಟು ನಾಲ್ವರು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಈಗ ಕೇವಲ ಸಂಗಪ್ಪ ಮಂಟೆ ಅವರು ಮಾತ್ರ ನಮ್ಮ ನಡುವೆ ಇದ್ದಾರೆ. ಅವರ ಹೋರಾಟದ ನೆನಪಿಗಾಗಿ ತಾಲೂಕಿನ ಹಿರಿಯರು ಸ್ವಾತಂತ್ರ್ಯ ಹೋರಾಟಗಾರರಾದ ಸಂಗಪ್ಪ ಮಂಟೆಯರವರನ್ನು ಸನ್ಮಾನಿಸಲು ಸರ್ಕಾರ ತೀರ್ಮಾನಿಸಿದ್ದು, ಈ ಹಿನ್ನೆಲೆ ನಾವು ಹಿರಿಯರಿಗೆ ಸನ್ಮಾನಿಸುವ ಮೂಲಕ ತಲುಪಿಸಿದ್ದು ಜಿಲ್ಲಾಡಳಿತ ಯಾವತ್ತು ಹೋರಾಟಗಾರರ ಹಿತ ಕಾಯಲು ಬದ್ಧವಾಗಿರುತ್ತದೆ. ಹಿರಿಯರನ್ನು ಗೌರವಿಸುವ ದೊರೆತಿರುವುದು ನಮ್ಮ ಭಾಗ್ಯ ಎಂದರು. ನಂತರ ಅವರು ಮಂಟೆ ಅವರ ಕೈಮಗ್ಗ ಮತ್ತು ನೇಕಾರಿಕೆ ಕುರಿತಂತೆ ಚರ್ಚೆ ನಡೆಸಿದರು.*ಮಂಟೆ ಕುಟುಂಬಸ್ಥರಿಂದ ಜಿಲ್ಲಾಧಿಕಾರಿಗೆ ಸನ್ಮಾನ: ಕ್ವಿಟ್ ಇಂಡಿಯಾ ಚಳುವಳಿಯ ವರ್ಷಾಚರಣೆಯ ನೆನಪಿಗಾಗಿ ಕೊಡೇಕಲ್ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಸಂಗಪ್ಪ ಮಂಟೆಯವರ ಮನೆಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಸುಶೀಲಾ ಅವರಿಗೆ ಮಂಟೆ ಕುಟುಂಬದ ಮಹಿಳೆಯರಿಂದ ಶ್ರಾವಣ ಮಾಸ ಶುಕ್ರವಾರ ಆಗಮಿಸಿದ್ದರಿಂದ ಅರಿಶಿಣ ಕುಂಕುಮ ನೀಡಿ ಕೈಮಗ್ಗದಿಂದ ನೇಯ್ದ ಇಲಕಲ್ ರೇಷ್ಮೆ ಸೀರೆಯನ್ನು ನೀಡಿದಾಗ ನಯವಾಗಿ ಸೀರೆ ಬೇಡ ಎಂದ ಡಿಸಿ ಅವರಿಗೆ ಸಂಗಪ್ಪ ಮಂಟೆ ಅವರು ನೀವು ನಮ್ಮ ಮನೆಗೆ ಬಂದ ಮಗಳಿದ್ದಂತೆ ನೀವು ಅದನ್ನು ಸ್ವೀಕರಿಸಬೇಕು ಎಂದಾಗ ಜಿಲ್ಲಾಧಿಕಾರಿ ಅವರು ಆತ್ಮೀಯವಾಗಿ ಸ್ವೀಕರಿಸಿದರು.
ಈ ವೇಳೆ ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ, ಉಪ ತಹಸೀಲ್ದಾರ್ ಕಲ್ಲಪ್ಪ ಜಂಜಿಗಡ್ಡಿ, ಕಂದಾಯ ನಿರೀಕ್ಷಕ ಶಾಂತಗೌಡ, ಕೊಡೇಕಲ್ ಪಿಡಿಒ ಸಂಗಣ್ಣ ನಾಗಬೇನಾಳ, ಗ್ರಾಮಾಡಳಿತಾಧಿಕಾರಿ ವಿಜಯಲಕ್ಷ್ಮಿ, ಶೇಖಪ್ಪ ಹಾವೇರಿ, ರಮೇಶ ಬಿರಾದಾರ್, ನಿಂಗು ಬಿರಾದಾರ್ ಸೇರಿದಂತೆ ಇತರರಿದ್ದರು.