ಸಾರಾಂಶ
ಮರಿಯಮ್ಮನಹಳ್ಳಿ: ನಾಟಕ ಕ್ಷೇತ್ರದ ಸಾಧಕರಿಗೆ ನೀಡುವ ಕರ್ನಾಟಕ ನಾಟಕ ಅಕಾಡೆಮಿಯ 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಮರಿಯಮ್ಮನಹಳ್ಳಿಯ ಹಿರಿಯ ರಂಗನಿರ್ದೇಶಕ ಬಿ.ಎಂ.ಎಸ್. ಪ್ರಭು ಅವರಿಗೆ ಲಭಿಸಿದೆ.
ಮರಿಯಮ್ಮನಹಳ್ಳಿಯ ಪ್ರಭು ರಂಗಕಲೆಯನ್ನೇ ತಮ್ಮ ಉಸಿರಾಗಿಸಿಕೊಂಡವರು. ಮರಿಯಮ್ಮನಹಳ್ಳಿಯಲ್ಲಿ ಮೊದಲಿಗರಾಗಿ ನೀನಾಸಂ ಪದವಿ ಮುಗಿಸಿದ ವ್ಯಕ್ತಿ ಇವರು. ರಂಗಶಿಕ್ಷಣ ಪಡೆದು ರಂಗ ಜಂಗಮರೆಂದೇ ಪ್ರಸಿದ್ಧರಾಗಿ ರಂಗಭೂಮಿಯಲ್ಲಿ ಉತ್ತಮ ನಟ, ನಿರ್ದೇಶಕ, ರಂಗತಜ್ಞರಾಗಿ ದುಡಿದಿದ್ದಾರೆ.ಬಿ.ಎಂ.ಎಸ್. ರೇವಣಸಿದ್ದಯ್ಯ ಮತ್ತು ಬಿ.ಎಂ.ಎಸ್. ರುದ್ರಮ್ಮ ಅವರ ಆರನೇ ಪುತ್ರರಾಗಿ 6-1-1965ರ ಜನೇವರಿ 6ರಂದು ಜನಿಸಿದರು. ಪ್ರಭುಗೆ ಕಲೆಯು ವಂಶ ಪಾರಂಪರ್ಯವಾಗಿ ಬಂದ ಬಳುವಳಿ. ಇವರ ತಂದೆ ಸಹ ಕಲಾವಿದರಾಗಿದ್ದರು.
ಪ್ರಭುಗೆ ರಂಗಭೂಮಿಯತ್ತ ಬಾಲ್ಯದಿಂದಲೇ ಸೆಳೆತವಿತ್ತು. ಶಾಲಾ-ಕಾಲೇಜು ದಿನಗಳಲ್ಲಿ ನಾಟಕ ಪ್ರದರ್ಶನದಲ್ಲಿ ತೊಡಗಿಕೊಳ್ಳುತ್ತಿದ್ದರು. ತಮ್ಮ 12ನೇ ವಯಸ್ಸಿನಲ್ಲೇ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಅವರು, ನಂತರ ಲಲಿತ ಕಲಾರಂಗದಲ್ಲಿ ತಮ್ಮ 19ನೇ ವಯಸ್ಸಿನಲ್ಲಿ ರೊಟ್ಟಿಋಣ ನಾಟಕದಲ್ಲಿ ದುಗ್ಗಪ್ಪ ಎಂಬ ಸ್ವಾತಂತ್ರ್ಯ ಯೋಧನ ಪಾತ್ರ ನಿರ್ವಹಿಸಿದ್ದರು. ದಿನದಿನಕ್ಕೂ ಅತ್ಯಂತ ಉತ್ತಮ ನಾಟಕಗಳನ್ನು ಪ್ರದರ್ಶಿಸುತ್ತಾ ಹೆಸರು ಗಳಿಸುತ್ತಾ ಸಾಗಿದರು.1990-91ರಲ್ಲಿ ನೀನಾಸಂನಲ್ಲಿ ಡ್ರಾಮಾ ಇನ್ ಡಿಪ್ಲೋಮಾವನ್ನು ಖ್ಯಾತ ಚಿತ್ರನಟ ಅಚ್ಯುತ, ಹಿರಿಯ ರಂಗ ನಿರ್ದೇಶಕ ನಟರಾಜ ಹೊನ್ನಳ್ಳಿ ಅವರೊಂದಿಗೆ ನಾಟಕ ಡಿಪ್ಲೋಮಾ ಪದವಿಯನ್ನು ಪೂರೈಸಿದರು. 59 ವರ್ಷಗಳಾದರೂ ಇಂದಿಗೂ ರಂಗ ಚಟುವಟಿಕಗಳಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದಾರೆ.
ಸುಮಾರು 48 ನಾಟಕಗಳನ್ನು ನಿರ್ದೇಶಿಸಿದ್ದಾರೆ. ಲಲಿತ ಕಲಾರಂಗ ತಂಡದ ಮೂಲಕ ಕೇಂದ್ರ ಸಂಗೀತ ಮತ್ತು ನಾಟಕ ವಿಭಾಗದಲ್ಲಿ ಎ ಗ್ರೇಡ್ ತಂಡದ ಮುಖ್ಯಸ್ಥರಾಗಿ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ನಾಟಕಗಳ ಮೂಲಕ ರಾಜ್ಯಾದ್ಯಂತ ತಿರುಗಾಟದಲ್ಲಿ ತೊಡಗಿಕೊಂಡು ಜನಜಾಗೃತಿ ಮೂಡಿಸಿದ್ದಾರೆ. ಇದು ಅಲ್ಲದೇ ಕೆಲ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ.ಭಾರ್ಗವ ಪ್ರಶಸ್ತಿ, ಬಸವ ಪ್ರಶಸ್ತಿ, ಸಿಜಿಕೆ ಪ್ರಶಸ್ತಿ ಸೇರಿ ವಿವಿಧ ಸಂಘ-ಸಂಸ್ಥೆಗಳಿಂದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಈಗ ಕರ್ನಾಟಕ ನಾಟಕ ಅಕಾಡೆಮಿ 2022-23ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿದೆ.
59ನೇ ವಯಸ್ಸಿನಲ್ಲಿಯೂ ನಾಟಕ ರಚನೆ, ನಿರ್ದೇಶನ, ಹಂಪಿ ಉತ್ಸವದಲ್ಲಿ ಧ್ವನಿ ಬೆಳಕು ಕಾರ್ಯಕ್ರಮದಲ್ಲಿ ಕಲಾವಿದರಾಗಿ ಮತ್ತು ನಿರಂತರವಾಗಿ ರಂಗಭೂಮಿಯಲ್ಲಿ ಕಳೆದ 40 ವರ್ಷಗಳಿಂದ ಸದಾ ಕ್ರಿಯಾಶೀಲರಾಗಿ ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪಾದರಸದಂತೆ ಈಗಲೂ ರಂಗದಲ್ಲಿ ತೊಡಗಿಸಿಕೊಳ್ಳುತ್ತಾರೆ.ನಾಟಕ ಅಕಾಡೆಮಿ ಪ್ರಶಸ್ತಿ ಬಂದಿರುವುದು ಸಂತೋಷದ ಸಂಗತಿ. ನನ್ನ ಸ್ನೇಹಿತ ಅಚ್ಯುತರೊಂದಿಗೆ ಈ ಪ್ರಶಸ್ತಿ ಲಭಿಸಿರುವುದು ನನಗೆ ಖುಷಿ ತಂದಿದೆ. ರಂಗಭೂಮಿಯಲ್ಲಿ ಸೇವೆ ಸಲ್ಲಿಸುವ ಜವಾಬ್ದಾರಿ ಮತಷ್ಚು ಹೆಚ್ಚಾಗಿದೆ. ರಂಗ ಚಟುವಟಿಕೆಗಳು ಹೆಚ್ಚಾಗಲು ಸರ್ಕಾರದಿಂದ ಇನ್ನೂ ಹೆಚ್ಚು ಪ್ರೋತ್ಸಾಹ ಸಿಗಬೇಕು ಎನ್ನುತ್ತಾರೆ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಿ.ಎಂ.ಎಸ್. ಪ್ರಭು.