ಶೋಷಿತರು, ಬಡವರ ಕಷ್ಟ, ಕಾರ್ಪಣ್ಯ, ಸಾಮಾಜಿಕವಾಗಿ ಎದುರಿಸುತ್ತಿದ್ದ ಹತ್ತಾರು ನೋವುಗಳನ್ನು ಚಿಕ್ಕ ವಯಸ್ಸಿನಿಂದಲೇ ತೀರಾ ಹತ್ತಿರದಿಂದ ನೋಡಿದ್ದ ಸಿದ್ದರಾಮಯ್ಯ ಅವರು ಸಮಾನತೆ, ಸಾಮಾಜಿಕ ನ್ಯಾಯದಿಂದ ಇವರ ಬದುಕು ಉತ್ತಮವಾಗಲು ಸಾಧ್ಯ ಎಂಬ ಬಲವಾದ ನಂಬಿಕೆ ಹೊಂದಿದ್ದರು. ಓದಿದ್ದು ಕಾನೂನು, ಕೆಲ ಕಾಲ ವಕೀಲ ವೃತ್ತಿಯನ್ನು ಮಾಡಿದರಾದರೂ ಮುಂದುವರೆಯದೇ ರಾಜಕಾರಣದ ದಾರಿಯಲ್ಲಿ ಒಂದೊಂದೆ ಹೆಜ್ಜೆ ಇಡುತ್ತಾ ಸಾಗಿದ ಸಿದ್ದರಾಮಯ್ಯ ಅವರು ಮುಂದೆ ದಾಪುಗಾಲು ಹಾಕಿ ಅಧಿಕಾರದ ಮೆಟ್ಟಿಲು ಏರಿ ಕೊನೆಗೆ ಮುಖ್ಯಮಂತ್ರಿಯಾಗಿ ರಾಜ್ಯದ ಆಡಳಿತದಲ್ಲಿ ಅತ್ಯುತ್ತಮ ಹೆಜ್ಜೆ ಗುರುತು ಮೂಡಿಸಿದ್ದು ಈಗ ಇತಿಹಾಸ.
ಹಾಗೇ ನೋಡಿದರೆ ರಾಜಕಾರಣ ಕುಟುಂಬದ ಹಿನ್ನೆಲೆ ಇಲ್ಲದ ಸಾಮಾನ್ಯ ಕುಟುಂಬದಿಂದ ಬಂದ ಸಿದ್ದರಾಮಯ್ಯ ಏಕಾಏಕಿ ರಾಜಕಾರಣಕ್ಕೆ ಕಾಲಿಡಲಿಲ್ಲ. ಯುವಕರಾಗಿದ್ದ ವೇಳೆ ಡಾ. ಅಂಬೇಡ್ಕರ್, ಡಾ. ರಾಮಮನೋಹರ ಲೋಹಿಯಾ ಅವರ ಚಿಂತನೆ ಅಧ್ಯಯನ ಜತೆಗೆ ಪ್ರಖರ ರೈತ ಮುಖಂಡ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಸೇರಿದಂತೆ ಹಲವರ ಒಡನಾಟ ಮೊದಲಿನಿಂದಲೂ ನಂಬಿಕೆ ಇಟ್ಟಿದ್ದ ಸಾಮಾಜಿಕ ನ್ಯಾಯದ ಚಿಂತನೆ ಇನ್ನಷ್ಟು ಗಟ್ಟಿಯಾಗಲು ಸಾಧ್ಯವಾಯಿತು.1978ರಲ್ಲಿ ರಾಜಕಾರಣದಲ್ಲಿ ಅಧಿಕೃತವಾಗಿ ಪ್ರವೇಶ ಮಾಡಿದ ಅವರು ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು. ನಂತರ 1980ರಲ್ಲಿ ಮೊದಲ ಬಾರಿ ಮೈಸೂರು ಲೋಕಸಭೆ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಇಳಿದು ಪರಾಭವಗೊಂಡರು. 1983ರ ವಿಧಾನಸಭೆ ಚುನಾವಣೆಯಲ್ಲಿ ಲೋಕದಳದ ಅಭ್ಯರ್ಥಿಯಾಗಿ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದರು. ಇಂದಿರಾ ಕಾಂಗ್ರೆಸ್‍ನ ಡಿ ಜಯದೇವರಾಜ ಅರಸು ಅವರನ್ನು ಸೋಲಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು.
ಮೊದಲ ಬಾರಿ ವಿಧಾನಸಭೆಗೆ ಪ್ರವೇಶ ಪಡೆದಾಗ ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಜನತಾ ಪಕ್ಷದ ಸರ್ಕಾರ ಇತ್ತು. ಬಹುಮತದ ಕೊರತೆ ಕಾರಣ ಸರ್ಕಾರ ರಚನೆಗೆ ಹೆಗಡೆ ಅವರು ಪಕ್ಷೇತರರು ಹಾಗೂ ಬಿಜೆಪಿ ಸದಸ್ಯ ಬೆಂಬಲ ಪಡೆದಿದ್ದರು. ಸಿದ್ದರಾಮಯ್ಯ ಅವರೂ ಸಹ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಹೀಗಾಗಿ ಅವರಿಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ ನೀಡಲಾಯಿತು.1985 ರಲ್ಲಿ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆದಾಗ ಸಿದ್ದರಾಮಯ್ಯ ಜನತಾಪಕ್ಷದಿಂದ ಸ್ಪರ್ಧಿಸಿ ಎರಡನೇ ಬಾರಿ ಚುನಾಯಿತರಾದರು. ಬಳಿಕ ಪಶು ಸಂಗೋಪನೆ, ರೇಷ್ಮೆ ಸಚಿವರಾದರು. ಎಸ್.ಆರ್ ಬೊಮ್ಮಾಯಿ ಅವರ ಮಂತ್ರಿಮಂಡಲದಲ್ಲಿ ಸಾರಿಗೆ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. 1989ರಲ್ಲಿ ಜನತಾಪಕ್ಷ ಇಬ್ಭಾಗವಾಗಿ ಜನತಾದಳ ಮತ್ತು ಸಮಾಜವಾದಿ ಜನತಾಪಕ್ಷ ಅಸ್ತಿತ್ವಕ್ಕೆ ಬಂತು. ಸಿದ್ದರಾಮಯ್ಯ ಆಗ ಜನತಾದಳದೊಂದಿಗೆ ಗುರುತಿಸಿಕೊಂಡರು. ಆದರೆ ಆ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆ ಚುನಾವಣೆಯಲ್ಲಿ ಪರಾಭವ ಹೊಂದಿದರು. 1991ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡರು.
ಜೆ.ಡಿ.ಎಸ್ ನಿಂದ ಹೊರಬಂದ ಸಿದ್ದರಾಮಯ್ಯ 2006ರಲ್ಲಿ ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿದರು.ಈ ಬೆಳವಣಿಗೆ ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಮತ್ತೊಂದು ತಿರುವು ನೀಡಿತು. ಬಳಿಕ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಮರುಚುನಾವಣೆಯಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.2008ರಲ್ಲಿ ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ಆಯಿತು. ಆಗ ಹೊಸದಾಗಿ ರಚನೆಯಾದ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯನವರು ವಿಧಾನಸಭೆ ಪ್ರವೇಶಿಸಿದರು. ಬಳಿಕ ಅವರು ವಿಧಾನಸಭೆಯ ಪ್ರತಿಪಕ್ಷ ನಾಯಕರಾದರು.
2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದರು. 80 ಸ್ಥಾನಗಳಲ್ಲಿಯಷ್ಟೇ ಕಾಂಗ್ರೆಸ್ ಪಕ್ಷ ಗೆದ್ದಿದ್ದರೂ ಬಿಜೆಪಿಗಿಂತ ಕಡಿಮೆ ಸ್ಥಾನ ನೀಡಿದ್ದರು. ಹೀಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಉದ್ದೇಶದಿಂದ ಪಕ್ಷದ ಹೈಕಮಾಂಡ್ ಒತ್ತಡಕ್ಕೆ ಮಣಿದು ಜೆಡಿಎಸ್ ಜೊತೆಗಿನ ಮೈತ್ರಿಸರ್ಕಾರಕ್ಕೆ ಒಪ್ಪಿಕೊಂಡರು.ಆದರೆ ಬಿಜೆಪಿಯ ಆಪರೇಷನ್ ಕಮಲದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ನ ಹದಿನೇಳು ಶಾಸಕರು ಬಿಜೆಪಿ ಕಡೆಗೆ ಹೋಗಿದ್ದರಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು.
ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಇದರಿಂದ ಸಿದ್ದರಾಮಯ್ಯನವರು ವಿರೋಧಪಕ್ಷದ ನಾಯಕರಾಗಿ ಆಯ್ಕೆಯಾದರು. ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿದರು.2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಬಹುಮತ ದೊರೆಯಿತು. ಗೆಲುವಿಗೆ ಪ್ರಮುಖ ಕಾರಣರಾದ ಸಿದ್ದರಾಮಯ್ಯ ಮತ್ತೊಮ್ಮೆ ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದರು. ಮೂರು ವರ್ಷಗಳ ಕಾಲ ಅಧಿಕಾರ ನಡೆಸಿ ನುಡಿದಂತೆ ನಡೆದು ಗ್ಯಾರಂಟಿಗಳನ್ನು ಜಾರಿ ಮಾಡಿ, ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿ ಜನಾನುರಾಗಿಯಾದರು. 2026 ಮೇ 28ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು.
ಇತಿಹಾಸ ಸೃಷ್ಟಿಸಿದ ಬಳ್ಳಾರಿ ಪಾದಯಾತ್ರೆ:ಬಿಜೆಪಿ ಆಡಳಿತ ಅವಧಿಯಲ್ಲಿ ಬಳ್ಳಾರಿಯ ಗಣಿಧಣಿಗಳ ವಿರುದ್ಧ ರಣಕಹಳೆ ಮೊಳಗಿಸಿ ಬೆಂಗಳೂರಿನಿಂದ ಬಳ್ಳಾರಿಯವರೆಗೆ ಪಾದಯಾತ್ರೆ ನಡೆಸಿ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲವನ್ನೇ ಉಂಟುಮಾಡಿದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಇಡೀ ರಾಜ್ಯ ಸುತ್ತಿ ಕಾಂಗ್ರೆಸ್ ಪರ ಪ್ರಚಾರ ಮಾಡಿ ಪಕ್ಷದ ಭಾರೀ ಗೆಲುವಿಗೆ ಕಾರಣರಾದರು. 2013 ಮೇ 13 ರಂದು ಈ ನಾಡಿನ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದರು.
ಅನ್ಯಭಾಗ್ಯ, ಕ್ಷೀರಭಾಗ್ಯಗಳ ಜನಕ:2013ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುಗಳಿಗೆಯಲ್ಲಿಯೇ ಅನ್ನಭಾಗ್ಯ, ಕ್ಷೀರಭಾಗ್ಯ ಮತ್ತು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಾಲ ಮನ್ನಾ, ಕಾರ್ಯಕ್ರಮಗಳನ್ನು ಘೋಷಿಸಿದರು. ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 60 ಭರವಸೆಗಳನ್ನು ತಮ್ಮ ಮೊದಲ ಬಜೆಟ್‍ನಲ್ಲಿಯೇ ಈಡೇರಿಸಿದರು. ಎರಡನೇ ಬಜೆಟ್‍ನಲ್ಲಿ ಪ್ರಣಾಳಿಕೆಯಲ್ಲಿನ ಇನ್ನೂ 30 ಭರವಸೆಗಳನ್ನು ಈಡೇರಿಸಿದರು. ಉಳಿದ ಭರವಸೆಗಳನ್ನು ತಮ್ಮ ಕೊನೆಯ ನಾಲ್ಕು ಬಜೆಟ್ ಗಳಲ್ಲಿ ಜಾರಿಗೆ ತಂದು ನುಡಿದಂತೆ ನಡೆದವರು ಎಂಬ ಖ್ಯಾತಿ ಪಡೆದವರು.