ಸಾಂಸ್ಕೃತಿಕ ಜಿಲ್ಲೆ, ಸಮಾಜವಾದಿ ನೆಲೆ ಎಂದೆಲ್ಲ ಬಿಂಬಿತವಾದ ಶಿವಮೊಗ್ಗ ಜಿಲ್ಲೆ ಸೇರಿ ಮಲೆನಾಡಿನಲ್ಲಿ ಗಾಂಜಾ ಘಾಟು ಜೋರಾಗಿಯೇ ಇದೆ.

ಗೋಪಾಲ್ ಯಡಗೆರೆ ಕನ್ನಡಪ್ರಭ ವಾರ್ತೆ ಶಿವಮೊಗ್ಗ ಸಾಂಸ್ಕೃತಿಕ ಜಿಲ್ಲೆ, ಸಮಾಜವಾದಿ ನೆಲೆ ಎಂದೆಲ್ಲ ಬಿಂಬಿತವಾದ ಶಿವಮೊಗ್ಗ ಜಿಲ್ಲೆ ಸೇರಿ ಮಲೆನಾಡಿನಲ್ಲಿ ಗಾಂಜಾ ಘಾಟು ಜೋರಾಗಿಯೇ ಇದೆ. ಪೊಲೀಸರ ಬಿಗಿ ಯತ್ನದ ನಡುವೆಯೂ ಗಾಂಜಾ ದಂಧೆ ಅವಿರತವಾಗಿ ನಡೆಯುತ್ತಿದೆ. ಮಲೆನಾಡ ದಟ್ಟಾರಣ್ಯದಲ್ಲಿಯೇ ಬೆಳೆಯುತ್ತಿದ್ದ ಅಕ್ರಮ ಗಾಂಜಾ ಬೆಳೆಯ ಮೇಲೆ ನಡೆದ ನಿರಂತರ ದಾಳಿಯ ಬಳಿಕ ಕಳ್ಳ ಮಾರ್ಗದಲ್ಲಿ ಆಂಧ್ರ, ಹೊರ ಜಿಲ್ಲೆಗಳಿಂದ ಬರಲಾರಂಭಿಸಿರುವುದು ಪೊಲೀಸರಿಗೆ ಹೊಸ ತಲೆ ನೋವು ತಂದಿದೆ. ಶಿವಮೊಗ್ಗ ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಹಬ್ ಆಗುತ್ತಿದ್ದು, ದೂರದ ಊರುಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ. ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಪೆಡ್ಲರ್‌ಗಳು ಕೆಲಸ ಮಾಡುತ್ತಿದ್ದಾರೆ. ಕಾಲೇಜುಗಳ ಸಮೀಪ, ಗುಡ್ಡಬೆಟ್ಟಗಳ ತಪ್ಪಲು, ಪ್ರವಾಸಿತಾಣಗಳ ಸಮೀಪದ ಅತಿಥಿ ಗೃಹಗಳು ಮಾದಕ ವಸ್ತು ಸೇವನೆ ಮಾಡುವವರ ಅಡ್ಡೆಯಾಗಿ ಮಾರ್ಪಡುತ್ತಿವೆ. ಹೊರ ರಾಜ್ಯ, ಜಿಲ್ಲೆಗಳಿಂದ ಪ್ರವಾಸಿ ತಾಣಗಳಿಗೆ ಬರುವ ಪ್ರವಾಸಿಗರು ಬ್ಯಾಗ್‌ಗಳಲ್ಲಿ ಸಣ್ಣ ಪ್ರಮಾಣದ ಅಮಲು ಪದಾರ್ಥಗಳನ್ನು ತಾವೇ ತಂದುಕೊಳ್ಳುವುದೂ ಕಂಡು ಬರುತ್ತಿದೆ. ಕೊಕೇನ್‌, ಹೆರಾಯಿನ್‌ನಂತಹ ದುಬಾರಿ ಬೆಲೆಯ ಮಾದಕ ವಸ್ತುಗಳ ಬಳಕೆ ಕಡಿಮೆ. ಕಡಿಮೆ ಬೆಲೆಗೆ ಸಿಗುವ ಗಾಂಜಾ, ಸ್ವಲ್ಪ ದುಬಾರಿ ಎನಿಸುವ ಚರಸ್‌ ಸುಲಭವಾಗಿ ಯುವಕರ ಕೈ ಸೇರುತ್ತಿದೆ ಎನ್ನುತ್ತವೆ ಮೂಲಗಳು. ಮೂರು ವರ್ಷಗಳ ಹಿಂದೆ ವೈದ್ಯಕೀಯ ಕಾಲೇಜು ವಿದ್ಯಾರ್ಥಿಯೊಬ್ಬ ತಾನು ವಾಸಿಸುತ್ತಿದ್ದ ಬಾಡಿಗೆ ಮನೆಯ ಕೋಣೆಯೊಂದರಲ್ಲಿ ಕೃತಕ ಬೆಳಕು ಬಳಸಿ ಗಾಂಜಾ ಬೆಳೆಸಿದ್ದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು. ಯುವ, ಶ್ರಮಿಕ ವರ್ಗ ಚಟಕ್ಕೆ ಬಲಿ:

ಮುಖ್ಯವಾಗಿ ಯುವಜನತೆ, ದುಡಿಯುವ ಶ್ರಮಿಕ ವರ್ಗ ಈ ಚಟಕ್ಕೆ ಬಲಿಯಾಗುತ್ತಿದ್ದು, ಏರುತ್ತಿರುವ ಮದ್ಯದ ದರ ಕೂಡ ಈ ಚಟಕ್ಕೆ ಬೀಳಲು ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಈ ವರ್ಗ ಒಂದು ದಿನ ಮದ್ಯ ಪಡೆಯಲು 200-250 ರು. ಖರ್ಚು ಮಾಡಬೇಕು. ಆದರೆ, ಇದಕ್ಕಿಂತ ಕಡಿಮೆ ದರದಲ್ಲಿ ಗಾಂಜಾ ಸಿಗುತ್ತಿರುವುದು ಇದರತ್ತ ಈ ವರ್ಗ ವಾಲಲು ಕಾರಣ ಎನ್ನಲಾಗಿದೆ. ವಾಣಿಜ್ಯ ಸ್ವರೂಪ ಪಡೆದ ಗಾಂಜಾ ಸೇವನೆ:

ಮಲೆನಾಡಿಗೆ ಗಾಂಜಾ ಹೊಸದೇನಲ್ಲ. ಅಲ್ಲಲ್ಲಿ ಲಾಗಾಯ್ತಿನಿಂದಲೂ ಇದರ ಬಳಕೆಯಿತ್ತು. ಅತ್ಯಂತ ಖಾಸಗಿ ಮತ್ತು ಸೀಮಿತವಾಗಿ ಇದರ ಬಳಕೆಯಾಗುತ್ತಿತ್ತು. ಆದರೆ, ಕಳೆದ ಎರಡು ದಶಕಗಳಿಂದ ಇದಕ್ಕೊಂದು ವಾಣಿಜ್ಯ ಸ್ವರೂಪ ದೊರೆತಿದ್ದು, ಮಲೆನಾಡಿನ ರೈತರು ಅರಿವಿದ್ದೋ, ಅರಿವಿಲ್ಲದೆ ಹಣದಾಸೆಗೋ ಈ ಜಾಲದಲ್ಲಿ ಸಿಕ್ಕು ಜೈಲು ಸೇರುತ್ತಿದ್ದಾರೆ. ಮುಖ್ಯವಾಗಿ ಮಲೆನಾಡಿನ ಹೊಲ, ತೋಟಗಳಲ್ಲಿ, ಅರಣ್ಯಗಳಲ್ಲಿ, ಬೆಟ್ಟ-ಗುಡ್ಡಗಳ ತಪ್ಪಲಲ್ಲಿ ಉಪ ಬೆಳೆಯಂತೆ ಗಾಂಜಾ ಬೆಳೆಯಲಾಗುತ್ತಿದೆ. ಹತ್ತಿಪ್ಪತ್ತು ಗಿಡದಿಂದ ಹಿಡಿದು ನೂರಾರು ಗಿಡಗಳವರೆಗೆ ಬೆಳೆಯುತ್ತಿರುವುದು ಕಂಡು ಬರುತ್ತಿದೆ. ಇಲ್ಲಿನ ಅರಣ್ಯ ಪ್ರದೇಶಗಳಲ್ಲಿ ಗಾಂಜಾ ಬೆಳೆದಿರುವ ಮಾಹಿತಿ ಸಂಗ್ರಹಿಸಿ, ಡ್ರೋನ್‌ ಬಳಸಿ, ಕಾರ್ಯಾಚರಣೆ ನಡೆಸಿ, ಹಸಿ ಗಾಂಜಾ ಪತ್ತೆ ಮಾಡಲಾಗಿತ್ತು. 2023ರಿಂದ 2025ರವರೆಗೆ ಇಂತಹ 7 ಪ್ರಕರಣಗಳಲ್ಲಿ 15 ಆರೋಪಿಗಳನ್ನು ಬಂಧಿಸಲಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಬೆಳೆಯ ನಡುವೆ ಗಾಂಜಾ ಬೆಳೆಯುವುದು ಒಂದು ದಂಧೆಯಾದರೆ, ನಗರ ಪ್ರದೇಶದಲ್ಲಿ ಇದಕ್ಕೆ ಮಾರುಕಟ್ಟೆ ಮಾಡುವ ವ್ಯವಸ್ಥಿತ ಯತ್ನ ನಡೆಯುತ್ತಲೇ ಇದೆ.

ಮಲೆನಾಡಿನ ಕಾಡಂಚಿನಲ್ಲಿರುವ, ಬಡ ರೈತರನ್ನು ಗುರುತಿಸುವ ಕೆಲ ಬ್ರೋಕರ್‌ಗಳು ಗಾಂಜಾ ಬೀಜವನ್ನು ಬೈಬ್ಯಾಕ್‌ ಮಾದರಿಯಲ್ಲಿ ನೀಡುತ್ತಾರೆ. ಗಾಂಜಾ ಬೆಳೆದ ಬಳಿಕ ತಾವೇ ಕೊಳ್ಳುವುದಾಗಿ ನಂಬಿಸಿ ರೈತರನ್ನು ಏಮಾರಿಸುತ್ತಾರೆ. ಕಾಸಿನಾಸೆಗೆ ಮುಂದಾಗುವಾಗ ಭವಿಷ್ಯದಲ್ಲಿ ಎದುರಾಗಬಹುದಾದ ಅನಾಹುತದ ಯೋಚನೆಗೆ ಇಳಿಯದ ಕೆಲವು ರೈತರು ಗುಡ್ಡ ಪ್ರದೇಶಗಳಲ್ಲಿ, ಶುಂಠಿ ಹೊಲಗಳಲ್ಲಿ ಗುಟ್ಟಾಗಿ ಇದನ್ನು ಬೆಳೆಯುತ್ತಾರೆ ಎನ್ನುತ್ತವೆ ಮೂಲಗಳು.

ಇತ್ತೀಚಿನ ದಿನಗಳಲ್ಲಿ ಮಾತ್ರೆ, ಲೇಹ್ಯ ಸೇರಿದಂತೆ ಬೇರೆ, ಬೇರೆ ರೂಪಗಳಲ್ಲಿಯೂ ಮಾದಕ ವಸ್ತು ಬಳಕೆಯಾಗುತ್ತಿದೆ. ಹೀಗಾಗಿ, ಇದನ್ನು ಸುಲಭವಾಗಿ ಪತ್ತೆ ಹಚ್ಚುವುದು ಕಷ್ಟ ಎನ್ನುತ್ತಾರೆ ಪೊಲೀಸರು. ಇತ್ತೀಚೆಗೆ ನಡೆಯುತ್ತಿರುವ ಹಲವು ಕೊಲೆ ಮತ್ತು ಹಲ್ಲೆ ಪ್ರಕರಣಗಳಲ್ಲಿ ಗಾಂಜಾ ಸೇವಿಸಿದವರೇ ಭಾಗಿಯಾಗುತ್ತಿರುವುದು ಪೊಲೀಸರಿಗೆ ಸಮಸ್ಯೆಯಾಗಿ ಕಾಡುತ್ತಿದೆ.

ಜೈಲುಗಳಲ್ಲೂ ಗಾಂಜಾ ವ್ಯಸನಿಗಳು ಕಂಡು ಬರುತ್ತಿರುವುದು ಆತಂಕದ ಸಂಗತಿ. ಸಾಕಷ್ಟು ಭದ್ರತೆ ಇರುವ ಶಿವಮೊಗ್ಗದ ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಕ್ಯಾಂಟೀನ್‌ಗೆ ತಂದಿದ್ದ ಬಾಳೆಗೊನೆಯ ದಿಂಡಿನಲ್ಲಿ ಇತ್ತೀಚೆಗೆ ಗಾಂಜಾ ಪತ್ತೆಯಾಗಿತ್ತು. ಇದೇ ಜೈಲಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಥಮ ದರ್ಜೆ ಸಹಾಯಕನೊಬ್ಬ ತನ್ನ ಒಳಉಡುಪಿನಲ್ಲಿ ಕೈದಿಗಳಿಗೆ ಗಾಂಜಾ ಪೂರೈಕೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೊಲೀಸರೀಗ ಮಾದಕ ವಸ್ತುಗಳನ್ನು ಪತ್ತೆ ಮಾಡಲು ಪರಿಣಿತಿ ಹೊಂದಿರುವ ಪೊಲೀಸ್ ಶ್ವಾನ ‘ರುದ್ರ’ ಬಳಸಿಕೊಳ್ಳುತ್ತಿದ್ದಾರೆ. ಇದರ ಮೂಲಕ ಶಾಲಾ-ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರಂತರವಾಗಿ ಮಾದಕ ವಸ್ತುಗಳ ಪರಿಶೀಲನೆ ನಡೆಸಲಾಗುತ್ತಿದೆ.