ಹು-ಧಾ ಅವಳಿ ನಗರದ ಮಧ್ಯೆದ ನವನಗರ ಪ್ರಾದೇಶಿಕ ಸಾರಿಗೆ ಕಚೇರಿ (ಕೆಎ-25) ವ್ಯಾಪ್ತಿಯಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ (1991-92ರಿಂದ 2019-20) ಸಾರಿಗೆ ಇಲಾಖೆಯ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣಗಳ ಸಂಖ್ಯೆ ಬರೋಬ್ಬರಿ 2955.
ಬಸವರಾಜ ಹಿರೇಮಠ
ಧಾರವಾಡ:ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಸವಾರರಿಗೆ ದಂಡ ತುಂಬಲು ಸರ್ಕಾರ ಶೇ. 50ರಷ್ಟು ರಿಯಾಯ್ತಿಯನ್ನು ನ. 20ರಿಂದ ಡಿ. 12ರ ವರೆಗೆ ನೀಡಿದರೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹು-ಧಾ ಅವಳಿ ನಗರದ ಮಧ್ಯೆದ ನವನಗರ ಪ್ರಾದೇಶಿಕ ಸಾರಿಗೆ ಕಚೇರಿ (ಕೆಎ-25) ವ್ಯಾಪ್ತಿಯಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ (1991-92ರಿಂದ 2019-20) ಸಾರಿಗೆ ಇಲಾಖೆಯ ನಿಯಮ ಉಲ್ಲಂಘನೆ ಮಾಡಿರುವ ಪ್ರಕರಣಗಳ ಸಂಖ್ಯೆ ಬರೋಬ್ಬರಿ 2955. ಆದರೆ, ಶೇ.50ರ ರಿಯಾಯ್ತಿ ನೀಡಿ, ಈ ಬಗ್ಗೆ ಸಾಕಷ್ಟು ಪ್ರಚಾರ ಮಾಡುವ ಮೂಲಕ ವಾಹನ ಮಾಲೀಕರ ಗಮನಕ್ಕೆ ತಂದರೂ ಇಬ್ಬರು ಮಾತ್ರ ದಂಡ (ಒಬ್ಬರು ₹ 2000, ಮತ್ತೊಬ್ಬರು ₹ 2500) ತುಂಬಿದರೆ 2953 ಪ್ರಕರಣ ಬಾಕಿ ಉಳಿದುಕೊಂಡಿವೆ. ಮತ್ತೊಂದೆಡೆ ಹುಬ್ಬಳ್ಳಿಯ ಗಬ್ಬೂರ ಪ್ರಾದೇಶಿಕ ಸಾರಿಗೆ ಕಚೇರಿ (ಕೆಎ 63) ವ್ಯಾಪ್ತಿಯಲ್ಲಿ 456 ಪ್ರಕರಣಗಳ ಪೈಕಿ 16 ಪ್ರಕರಣಗಳಲ್ಲಿ ₹ 74800 ದಂಡದ ಮೊತ್ತ ಸಂಗ್ರಹವಾಗಿದೆ.ರಾಜ್ಯ ಸರ್ಕಾರದ ನಿರ್ದೇಶನದಂತೆ ಶೇ.50ರ ರಿಯಾಯ್ತಿದಲ್ಲಿ ದಂಡ ತುಂಬಲು ಅವಕಾಶ ನೀಡಿ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ ನಡೆಸಲಾಗಿತ್ತು. ಮಾಧ್ಯಮಗಳ ಮೂಲಕವೂ ಮಾಲೀಕರ ಗಮನಕ್ಕೆ ತರಲಾಗಿತ್ತು. ಇಷ್ಟಾಗಿಯೂ ವಾಹನ ಮಾಲೀಕರು ನಿರ್ಲಕ್ಷ್ಯಿಸಿದ್ದಾರೆ. ಅಂತಹ ಮಾಲೀಕರಿಗೆ ನೋಟಿಸ್ ನೀಡಿ ವಾಹನ ಜಪ್ತಿ ಮಾಡುವ ಕಾರ್ಯವನ್ನು ನಿಯಮಾವಳಿ ಪ್ರಕಾರ ಮಾಡುತ್ತೇವೆ ಎಂದು ಆರ್‌ಟಿಒ ಅಧಿಕಾರಿಗಳು ಕನ್ನಡಪ್ರಭಕ್ಕೆ ಸ್ಪಷ್ಟಪಡಿಸಿದರು.
ಮೋಟಾರು ವಾಹನ ಕಾಯ್ದೆ ಅನ್ವಯ ನಿಯಮಾವಳಿ ಉಲ್ಲಂಘಿಸುವ ವಾಹನಗಳ ವಿರುದ್ಧ ವಾಹನ ನಿರೀಕ್ಷಕರು ಪ್ರಕರಣ ದಾಖಲಿಸುತ್ತಾರೆ. ಸೂಕ್ತ ದಾಖಲಾತಿ, ಪರವಾನಗಿ, ಹೊಗೆ ಮುಕ್ತ ಪ್ರಮಾಣಪತ್ರ ಇಲ್ಲದಿರುವುದು, ನೋಂದಣಿ ನವೀಕರಣ, ತೆರಿಗೆ ಪಾವತಿ, ನಿಗದಿಗಿಂತ ಹೆಚ್ಚಿನ ತೂಕದ ಸಾಮಗ್ರಿ ಸಾಗಣೆ, ಗೂಡ್ಸ್ ವಾಹನದಲ್ಲಿ ಪ್ರಯಾಣಿಕರ ಸಾಗಣೆ ಸೇರಿದಂತೆ ನಿಯಮ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಲಾಗಿತ್ತು. ದಂಡ ತುಂಬದಿರಲು ಕಾರಣಗಳಿವು..1991ರಿಂದ 2020ರ ವರೆಗೆ ದಂಡ ತುಂಬದಿರಲು ಪ್ರಮುಖ ಕಾರಣ, ದಂಡಕ್ಕೆ ಗುರಿಯಾದ ಬಹಳಷ್ಟು ವಾಹನ ಗುಜರಿಗೆ ಹೋಗಿವೆ. ನಿಯಮಾವಳಿ ಪ್ರಕಾರ ಸಾರಿಗೆ ಇಲಾಖೆ ಪರವಾನಗಿ ಪಡೆದೇ ಗುಜರಿಗೆ ಹಾಕಬೇಕು. ಆದರೆ, ಈ ನಿಯಮ ಪಾಲನೆಯಾಗುತ್ತಿಲ್ಲ. ಇನ್ನು, ವಾಹನ ಮಾಲೀಕರು ಬದಲಾಗಿದ್ದು, ವಿಳಾಸಗಳು ತಪ್ಪಾಗಿರುತ್ತವೆ. ಹಳೆಯ ಮಾಲೀಕರ ಹೆಸರಿನಲ್ಲಿಯೇ ವಾಹನ ಓಡಾಡಿರುತ್ತದೆ. ಇನ್ನು ಕೆಲ ಮಾಲೀಕರು ದಂಡ ತುಂಬಲು ನಿರ್ಲಕ್ಷ್ಯ ವಹಿಸುತ್ತಾರೆ. ದಂಡ ತುಂಬಲು ಆನ್‌ಲೈನ್ ವ್ಯವಸ್ಥೆ ಇಲ್ಲದೇ ಕಚೇರಿಗೆ ಬಂದು ತುಂಬಬೇಕಾದ ಕಾರಣದಿಂದಲೂ ದಂಡಕ್ಕೆ ಗುರಿಯಾದ ವಾಹನ ಮಾಲೀಕರು ಶೇ. 50ರ ರಿಯಾಯ್ತಿಯ ಸುವರ್ಣಾವಕಾಶ ಬಳಸಿಕೊಳ್ಳಲು ಮುಂದಾಗಿಲ್ಲ ಎಂಬ ಮಾಹಿತಿ ಇದೆ.