ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದರಿಂದ ನೂರಾರು ವಿದ್ಯಾರ್ಥಿಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರೆ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭದ್ರನ್ನವರ ಆರೋಪಿಸಿದರು.ಬನಹಟ್ಟಿಯಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ನೀಟ್ ಪ್ರಶ್ನೆ ಪತ್ರಿಕೆ ಸೊರಿಕೆ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಇಷ್ಟೊಂದು ಅಕ್ರಮ ನಡೆದಿದ್ದರೂ ಕೇಂದ್ರದ ಬಿಜೆಪಿ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್ ಬಳಿ ಹಮ್ಮಿಕೊಂಡಿದ್ದ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರ ಅಮಾಯಕ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಮಾಡಿಸಿದೆ. ಈ ಮೂಲಕ ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ದುರ್ಬಲ ಪ್ರಧಾನಿ ಮತ್ತು ಬೇಜವಾಬ್ದಾರಿಯ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ ಅವರು ವಿದ್ಯಾರ್ಥಿಗಳ ಮೇಲೆ ನಡೆದ ದೌರ್ಜನ್ಯದ ನೈತಿಕ ಹೊಣೆ ಹೊತ್ತು ಕುಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.ವಿದ್ಯಾರ್ಥಿಗಳ ಪ್ರತಿಭಟನೆ ಹತ್ತಕ್ಕಲು ಪೊಲೀಸ್ ಬಲ ಬಳಸಿ ಲಾಠಿಚಾರ್ಜ್ ನಡೆಸುವ ಮೂಲಕ ಹೋರಾಟ ಹತ್ತಕ್ಕಲು ಯತ್ನಿಸಿದ ಕೇಂದ್ರ ಸರ್ಕಾರ ತಕ್ಷಣವೇ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಂಡು ನೊಂದ ವಿದ್ಯಾರ್ಥಿಗಳ ಜೀವನಕ್ಕೆ ಭದ್ರತೆ ನೀಡಬೇಕು ಎಂದರು.
ನಗರದ ಈಶ್ವರಲಿಂಗ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ತಹಸೀಲ್ದಾರ್ ಕಚೇರಿ ವರೆಗೆ ತೆರಳಿ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಧುರೀಣರಾದ ನೀಲಕಂಠ ಮುತ್ತೂರ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ಬಸವರಾಜ ಶಿರೋಳ, ಸುರೇಶ ಪಾಟೀಲ, ಸಂಗಮೇಶ ಮಡಿವಾಳರ, ಯಾಸೀನ್ ದಲಾಯತ, ಬಸಯ್ಯ ಉಳವಿಮಠ, ಮಹೇಶ ಚಿಂಚಖಂಡಿ, ತುಕ್ಕಪ್ಪ ಭೂಮಕ್ಕನವರ, ಭರಮು ಉಳ್ಳಾಗಡ್ಡಿ, ಕಿರಣ ಕರ್ಲಟ್ಟಿ, ಶಿವಪ್ಪ ವಾಲಿ, ಮಹಾಂತೇಶ ಮನ್ಮಿ, ರವಿ ಜಮಖಂಡಿ, ಅಶೋಕ ಮೊಟಗಿ, ಇರ್ಷಾದ್ ಮೋಮಿನ್, ಹಾರೂನ್ ಬೇವೂರ, ಪಿಂಟು ಕುಂಬಾರ, ಶಂಕರ ಕೆಸರಗೊಪ್ಪ, ರೇಣುಕಾ ಮಡ್ಡಿಮನಿ, ವಿದ್ಯಾ ಬಿಳ್ಳುರ, ಸಂಗೀತಾ ಖಾನಾಪುರ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಮತಕ್ಷೇತ್ರದ ಕಾರ್ಯಕರ್ತರು ಹಾಜರಿದ್ದರು.