ಪ್ರವಾದಿ ಮಹಮ್ಮದ ಪೈಗಂಬರ್‌ ಕೊಡುಗೆ ದೊಡ್ಡದು

| Published : Nov 26 2024, 12:45 AM IST

ಸಾರಾಂಶ

ಗಜೇಂದ್ರಗಡ ಪಟ್ಟಣದ ಕುಷ್ಟಗಿ ರಸ್ತೆಯ ರಾಜಾಬಕ್ಷಿ ದರ್ಗಾದ ಬುಕ್ಕಿಟಗಾರ ಹೊಲದಲ್ಲಿ ಡಿ. ೧೩ರಂದು ನಡೆಯುವ ಗೌಸೆ ಆಜಂ ಕಾನ್ಪರೆನ್ಸ್ ಧಾರ್ಮಿಕ ಪ್ರವಚನದ ಭಿತ್ತಿಪತ್ರವನ್ನು ಶಾದಿಮಹಲ್‌ನಲ್ಲಿ ಬಿಡುಗಡೆ ಮಾಡಲಾಯಿತು.

ಗಜೇಂದ್ರಗಡ:

ಮಹಮ್ಮದ್ ಪೈಗಂಬರ್ ಅವರು ಮನುಕುಲದ ಪ್ರವಾದಿಯಾಗಿ, ಶಾಂತಿದೂತರಾಗಿ ಜಗತ್ತಿಗೆ ನೀಡಿದ ಕೊಡುಗೆಗಳನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಸನಸಾಬ ತಟಗಾರ ಹೇಳಿದರು.ಪಟ್ಟಣದ ಕುಷ್ಟಗಿ ರಸ್ತೆಯ ರಾಜಾಬಕ್ಷಿ ದರ್ಗಾದ ಬುಕ್ಕಿಟಗಾರ ಹೊಲದಲ್ಲಿ ಡಿ. ೧೩ರಂದು ನಡೆಯುವ ಗೌಸೆ ಆಜಂ ಕಾನ್ಪರೆನ್ಸ್ ಧಾರ್ಮಿಕ ಪ್ರವಚನದ ಭಿತ್ತಿಪತ್ರವನ್ನು ಶಾದಿಮಹಲ್‌ನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ಶಾಂತಿ, ಸಮಾನತೆ, ತ್ಯಾಗ ಹಾಗೂ ಸೌಹಾರ್ದತೆ ಇಸ್ಲಾಂ ಧರ್ಮದ ಮೂಲಭೂತ ಸಂದೇಶಗಳಾಗಿವೆ. ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ನಾವು ಸುಂದರ ಸಮಾಜ ಕಟ್ಟಬೇಕಾಗಿದೆ. ಈ ದೆಸೆಯಲ್ಲಿ ಪಟ್ಟಣದಲ್ಲಿ ನಡೆಯುವ ಐತಿಹಾಸಿಕ ಕಾರ್ಯಕ್ರಮಕ್ಕೆ ಅಣಿಯಾಗಿದ್ದೇವೆ ಎಂದರು.

ಗೌಸೆ ಆಜಂ ಕಾನ್ಪರೆನ್ಸ್ ಕಮೆಟಿಯ ಸದಸ್ಯ ದಾವಲಸಾಬ ತಾಳಿಕೋಟಿ ಮಾತನಾಡಿ, ಖ್ಯಾತ ಧಾರ್ಮಿಕ ಪ್ರವಚನಕಾರರು, ವಾಗ್ಮಿಗಳು, ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ವಂಶಸ್ಥರಾದ ಉತ್ತರಪ್ರದೇಶದ ಸೈಯದ್ ಮಹಮ್ಮದ್ ಹಾಷ್ಮಿ ಮಿಯಾ ಅವರು ಆಗಮಿಸಿ, ಪ್ರವಾದಿಗಳ ಕುರಿತು ಪ್ರವಚನ ನೀಡಲಿದ್ದಾರೆ. ಇಂತಹ ದೊಡ್ಡ ಮಟ್ಟದ ಕಾರ್ಯಕ್ರಮ ಪಟ್ಟಣದ ಇತಿಹಾಸದಲ್ಲಿ ಮೊದಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ಗೌಸೆ ಆಜಂ ಕಾನ್ಪರೆನ್ಸ್ ಕಮಿಟಿಯ ಹಣಕಾಸು ಸಮಿತಿ ಹಿರಿಯ ಸದಸ್ಯ ಎ.ಡಿ. ಕೋಲಕಾರ ಮಾತನಾಡಿ, ಡಿ. ೧೩ರಂದು ಪಟ್ಟಣದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸೈಯದ್ ಮೊಹಮ್ಮದ್ ನೂರಾನಿ, ಸುಫಿಯಾನ್ ಸಖಾಫಿ ಅವರು ಕನ್ನಡದಲ್ಲಿ ಪ್ರವಾದಿಗಳ ಕುರಿತು ಪ್ರವಚನ ನೀಡಲಿದ್ದು, ಸಮಾಜ ಬಾಂಧವರು ತನು, ಮನ, ಧನದಿಂದ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು, ೮-೧೦ ಸಾವಿರ ಜನಸಂಖ್ಯೆ ಸೇರುವ ಸಾಧ್ಯತೆ ಇದೆ ಎಂದರು. ಧರ್ಮಗುರುಗಳಾದ ಯಾಸೀನ ಮೌಲಾನ ಅವರು ಮಾತನಾಡಿದರು.

ಈ ವೇಳೆ ಮೌಲಾನಾ ಖಲೀಲ ಅಹ್ಮದ ಖಾಜಿ, ರಫೀಕ್ ಮೌಲಾನ, ಫಯಾಜ್ ತೋಟದ, ನಾಸೀರ ಸುರಪುರ, ಪಿ.ಕೆ. ಬಾಗವಾನ, ಎ.ಕೆ. ಕಾತರಕಿ, ಶಾಮೀದಸಾಬ್‌ ದಿಂಡವಾಡ, ರಸೂಲ್‌ಸಾಬ್‌ ಆರಗಿದ್ದಿ, ಮೈಬುಸಾಬ ಚಿನ್ನೂರ, ಕೆ.ಸಿ. ಗೋಡೇಕಾರ, ಖಲಂದರ ಡಾಲಯತ, ಬಾಷಾ ಮುದಗಲ್ಲ, ಇಮ್ರಾನ್ ಅತ್ತಾರ, ಆರೀಫ್ ಮನಿಯಾರ, ಅಲಿ ಕಿಲ್ಲೆದಾರ, ಸಲೀಂ ಮಾನಿಯಾರ ಸೇರಿ ಇತರರು ಇದ್ದರು.