ಸಾರಾಂಶ
ದಾವಣಗೆರೆ: ನೂತನವಾಗಿ ನಿರ್ಮಾಣಗೊಂಡ ದಾವಣಗೆರೆ ತಾಲೂಕು ಕಚೇರಿ ಕಟ್ಟಡ ಸಮುಚ್ಚಯವನ್ನು ಉದ್ಘಾಟಿಸಿ, ತಹಸೀಲ್ದಾರ್ ಕಚೇರಿಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲು ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.
ನಗರದ ಶ್ರೀ ಜಯದೇವ ವೃತ್ತದಲ್ಲಿ ವಿಶ್ವ ಕರವೇ ಜಿಲ್ಲಾಧ್ಯಕ್ಷ ಬಾಬುರಾವ್, ವೇದಿಕೆಯ ಆಟೋ ಚಾಲಕರ ಘಟಕದ ಅಧ್ಯಕ್ಷ ಇಸ್ಮಾಯಿಲ್ ಜಬೀವುಲ್ಲಾ ನೇತೃತ್ವದಲ್ಲಿ ಪ್ರತಿಭಟಿಸಿದ ಮುಖಂಡರು, ಕಾರ್ಯಕರ್ತರು ಆದಷ್ಟು ಬೇಗನೆ ತಾಲೂಕು ಕಚೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಕರವೇ ಮುಖಂಡರು, ಸ್ವಾತಂತ್ರ್ಯ ಪೂರ್ವದ ಹಳೆಯ ತಾಲೂಕು ಕಚೇರಿ ಹಾಗೂ ಉಪ ನೋಂದಣಾಧಿಕಾರಿಗಳ ಕಚೇರಿ ಕಟ್ಟಡವನ್ನು ತೆರವುಗೊಳಿಸಿ, ಅಲ್ಲಿ ಈಗ ಹೊಸದಾಗಿ ಕಟ್ಟಡ ನಿರ್ಮಿಸಲಾಗಿದೆ. 8 ವರ್ಷಗಳ ಹಿಂದೆ ಹೊಸ ಕಟ್ಟಡ ನಿರ್ಮಾಣ ಕಾರ್ಯ ಕೈಗೊಂಡು, 2 ವರ್ಷಗಳ ಹಿಂದೆಯೇ ಪೂರ್ಣ ಕಾಮಗಾರಿ ಮುಗಿಸಲಾಗಿದೆ. ಆದರೆ, ಇಂದಿಗೂ ನೂತನ ಕಟ್ಟಡವನ್ನೇ ಉದ್ಘಾಟಿಸಿಲ್ಲ ಎಂದು ತಿಳಿಸಿದರು.
ಹೊಸ ತಾಲೂಕು ಕಚೇರಿಯಲ್ಲಿ ಪೀಠೋಪಕರಣಗಳನ್ನು ಸಹ ಅಳವಡಿಸಲಾಗಿದೆ. ಬಳಕೆಯಾಗದೇ, ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಹೊಸ ಕಟ್ಟಡವೇ ನಿರ್ವಹಣೆ ಇಲ್ಲದೇ, ಅಲ್ಲಲ್ಲಿ ಸೋರಿಕೆ ಸಹ ಆಗುತ್ತಿದೆ. ಸ್ವಂತ ಕಟ್ಟಡ ನಿರ್ಮಾಣ ಪೂರ್ಣವಾಗಿ 2 ವರ್ಷ ಕಳೆದರೂ ಇಂದಿಗೂ ತಾಲೂಕು ಕಚೇರಿಯು ಎಪಿಎಂಸಿ ಅಧೀನದ ರೈತ ಭವನ(ಹಳೆ ಡಿಸಿ ಕಚೇರಿ)ದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಇನ್ನೂ ಎಷ್ಟು ದಿನ ಸ್ವಂತ ಕಟ್ಟಡವಿದ್ದರೂ, ಬಾಡಿಗೆ ಕಟ್ಟಡದಲ್ಲೇ ತಾಲೂಕು ಕಚೇರಿಯನ್ನು ತಳ್ಳಲಾಗುತ್ತದೆ ಎಂದು ಪ್ರಶ್ನಿಸಿದರು.ಎಪಿಎಂಸಿ ಅಧೀನದ ರೈತ ಭವನದ ಬಾಡಿಗೆ ಕಟ್ಟಡದಲ್ಲೇ ಈಗಲೂ ಬಾಡಿಗೆ ಪಾವತಿಸಿ, ಸಾರ್ವಜನಿಕರು ತೆರಿಗೆ ರೂಪದಲ್ಲಿ ಕಟ್ಟಿದ ಹಣವನ್ನು ಪೋಲು ಮಾಡಲಾಗುತ್ತಿದೆ. ಉದ್ಘಾಟನೆಯೇ ಆಗದ ನೂತನ ತಾಲೂಕು ಕಚೇರಿಯು ಕುಡುಕರು, ಜೂಜಾಡುವವರು ಸೇರಿದಂತೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದೆ. ಹೊಸ ತಾಲೂಕು ಕಚೇರಿ ಕಟ್ಟಡ ಉದ್ಘಾಟನೆಗೊಳ್ಳದಿದ್ದರೂ ಈಗಲೇ ಸೋರಿಕೆಯಾಗುತ್ತಿದೆ. ಇದನ್ನು ನೋಡಿದರೆ, ಕಟ್ಟಡ ನಿರ್ಮಾಣ ಕಾಮಗಾರಿ ಕಳಪೆಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.
ದಾವಣಗೆರೆ ಹಳೆ ಭಾಗ ಹಾಗೂ ನಗರ, ಗ್ರಾಮೀಣ ಜನರಿಗೆ ಅನುಕೂಲವಾಗುವಂತಹ ಆಯಕಟ್ಟಿನ ಗಡಿಯಾರ ಕಂಬ ಸಮೀಪದ ತಾಲೂಕು ಕಚೇರಿ ಸ್ವಂತ ಜಾಗವನ್ನು ಬಿಟ್ಟು, ಇನ್ನೂ ಎಷ್ಟು ದಿನಗಳ ಕಾಲ ಬಾಡಿಗೆ ಕಟ್ಟಡದಲ್ಲಿ ಇರಬೇಕು ? ಹೊಸ ಕಟ್ಟಡ ಉದ್ಘಾಟನೆಯಾಗಿ, ಅಲ್ಲಿಗೆ ತಾಲೂಕು ಕಚೇರಿ ಸ್ಥಳಾಂತರಗೊಂಡರೆ ರೈಲ್ವೇ ನಿಲ್ದಾಣ, ಖಾಸಗಿ ಬಸ್ಸು ನಿಲ್ದಾಣ, ಪಾಲಿಕೆ, ಉಪ ವಿಭಾಗಾಧಿಕಾರಿ ಕಚೇರಿ ಸಮೀಪವಾಗಿ, ನಗರ, ಗ್ರಾಮೀಣ ಜನರಿಗೂ ಬಂದು, ಹೋಗಲು ಅನುಕೂಲವಾಗುತ್ತದೆ ಎಂದರು.ಒಂದು ವೇಳೆ ತಾಲೂಕು ಕಚೇರಿಗೆ ಬಾಡಿಗೆ ಕಟ್ಟಡದ ಮುಕ್ತಿ ಕೊಟ್ಟು, ಸ್ವಂತ ಕಟ್ಟಡಕ್ಕೆ ಶಾಶ್ವತವಾಗಿ ಸ್ಥಳಾಂತರಿಸುವ ಕೆಲಸ ತ್ವರಿತವಾಗಿ ಆಗದಿದ್ದರೆ, ಅತೀ ಶೀಘ್ರದಲ್ಲೇ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸಾರ್ವಜನಿಕರು, ರೈತರು, ಹಿರಿಯ ನಾಗರಿಕರು,ವಿದ್ಯಾರ್ಥಿಗಳನ್ನು ಸಂಘಟಿಸಿ ತೀವ್ರ ಸ್ವರೂಪದ ಹೋರಾಟ ನಡೆಸಬೇಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಿಶ್ವ ಕರವೇ ಮುಖಂಡರಾದ ಬಿ.ವಿ.ಮಂಜುನಾಥ, ಕೆ.ಎಚ್.ಮಹಬೂಬ್, ಅಜಂ ರಜ್ವಿ, ಚಮನ್, ಚಂದ್ರಶೇಖರ ಕೆ.ಗಣಪ, ಗಿರೀಶ, ರಮೇಶ, ಸೈಯದ್, ಗಣೇಶ, ಎನ್.ನವೀನ, ಸೈಯದ್ ಶಹಬಾಜ್, ಖಲಂದರ್ ಖಾನ್, ಶಾರೂಕ್ ಹಷ್ಮಿ, ಬ್ರಹ್ಮಾನಂದ, ಎಲ್ಐಸಿ ಮಂಜು, ಮೊಹಮ್ಮದ್ ಹನೀಫ್, ರಿಯಾಜ್, ವಾಸನದ ಗದಿಗೆಪ್ಪ, ಕೆ.ಪಿ.ರಂಗನಾಥ, ಮಹಲಿಂಗಪ್ಪ, ವಿ.ಮಂಜುನಾಥ ಸೇರಿದಂತೆ ಅನೇಕರು ಭಾಗವಹಿಸಿದ್ದರು.