ಬಸವರಾಜ ಸರೂರ
ರಾಣಿಬೆನ್ನೂರು: ಸ್ಥಳೀಯ ನಗರಸಭೆ ಮಳೆಗಾಲ ಮುನ್ನ ಎಚ್ಚೆತ್ತುಕೊಳ್ಳದೇ ಇರುವುದರಿಂದ ಸಾರ್ವಜನಿಕರು ಮಳೆಗಾಲದಲ್ಲಿ ಮತ್ತೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ.ನಗರದಲ್ಲಿ ಸುಮಾರು 1.30 ಲಕ್ಷ ಜನಸಂಖ್ಯೆಯಿದ್ದು, ನಿತ್ಯ 45ರಿಂದ 50 ಟನ್‌ನಷ್ಟು ಕಸ ಸಂಗ್ರಹವಾಗುತ್ತಿದೆ. ಮನೆ ಮನೆಗೆ ತೆರಳಿ ಕಸ ಸಂಗ್ರಹ ಮಾಡುವ ವ್ಯವಸ್ಥೆಯಿದ್ದರೂ ಅಲ್ಲಲ್ಲಿ ಕಸದ ರಾಶಿ ಹರಡಿಕೊಂಡು ಸಮಸ್ಯೆ ಉಲ್ಬಣವಾಗುತ್ತಿದೆ. ನಗರಸಭೆಯಲ್ಲಿ ಒಟ್ಟಾರೆ 203 (ಹೊರಗುತ್ತಿಗೆ ಸೇರಿದಂತೆ) ಪೌರ ಕಾರ್ಮಿಕರಿದ್ದಾರೆ. ಮನೆ ಮನೆ ತೆರಳಿ ಕಸ ಸಂಗ್ರಹ ಮಾಡಲು 27 ವಾಹನಗಳಿದ್ದು, ಗುತ್ತಿಗೆ ಆಧಾರದ ಮೇಲೆ 2 ಟ್ರ್ಯಾಕ್ಟರ್‌ಗಳು, ನಗರಸಭೆ ಸೇರಿದ 2 ಟ್ರ್ಯಾಕ್ಟರ್‌ಗಳು, 2 ಟಿಪ್ಪರಗಳು, ಜೆಸಿಬಿ, ಜೆಟಿಂಗ್ ಮಷಿನ್‌ಗಳು, ಆಟೋ ಟಿಪ್ಪರ್‌ಗಳು, ಚರಂಡಿ ಹೂಳು ತೆಗೆಯುವ ಯಂತ್ರ, ಒಳಚರಂಡಿ ಹೂಳು ತೆಗೆಯುವ ಯಂತ್ರಗಳಿವೆ. ಆದರೆ ಇಷ್ಟೆಲ್ಲ ಯಂತ್ರಗಳಿದ್ದರೂ ಅಲ್ಲಲ್ಲಿ ಕಸ ಹರಡಿಕೊಂಡು ಚರಂಡಿ ಸೇರುತ್ತಿರುವ ಕಾರಣ ಮಳೆಗಾಲದಲ್ಲಿ ನೀರು ಹರಿಯಲು ಸಾಧ್ಯವಾಗದೇ ಕೊಳಚೆ ನೀರು ರಸ್ತೆಯಲ್ಲಿ ಹರಿಯುವಂತಾಗಿದೆ.
₹10 ಲಕ್ಷಕ್ಕೂ ಅಧಿಕ ವೆಚ್ಚ: ನಗರದಲ್ಲಿ ಸ್ವಚ್ಛತೆ ಕಾಪಾಡಲು ನಗರಸಭೆಯಿಂದ ಮಾಸಿಕ ₹10 ಲಕ್ಷಕ್ಕಿಂತಲೂ ಹೆಚ್ಚಿನ ಹಣ ವೆಚ್ಚ ಮಾಡಲಾಗುತ್ತಿದೆ. ನಾಲ್ಕು ಪ್ಯಾಕೇಜ್ ಆಧಾರದ ಮೇಲೆ ಕಸ ಸಂಗ್ರಹಣೆ ಮಾಡಲಾಗುತ್ತಿದ್ದರೂ ಬಸ್ ನಿಲ್ದಾಣ ಹಿಂಭಾಗ, ಎಕೆಜಿ ಕಾಲನಿ, ಕುರಬಗೇರಿ ಹತ್ತಿರ, ಸೆಂಟ್ ಲಾರೆನ್ಸ್ ಶಾಲೆಯ ಹತ್ತಿರ, ಹೊಸದಾಗಿ ರಚನೆಯಾದ ಲೇಔಟ್‌ಗಳು ಸೇರಿದಂತೆ ವಿವಿಧ ಭಾಗದಲ್ಲಿ ಕಸದ ಸಮಸ್ಯೆ ಕಾಣುತ್ತಿದೆ. 700 ಜನಸಂಖ್ಯೆಗೆ ಒಬ್ಬ ಪೌರಕಾರ್ಮಿಕ ಎಂಬ ನಿಯಮವಿದೆ. ಹೀಗಾಗಿ ಸ್ಥಳೀಯ ನಗರಸಭೆಗೆ ಇನ್ನೂ ಹೆಚ್ಚಿನ ಪೌರಕಾರ್ಮಿಕರ ಅಗತ್ಯವಿದೆ.ರಾಜಕಾಲುವೆ ಸ್ವಚ್ಚತೆಯಿಲ್ಲ: ನಗರದಲ್ಲಿ ಅಲ್ಲಲ್ಲಿ ರಾಜಕಾಲುವೆ ಸ್ವಚ್ಚತೆಯಾಗಿಲ್ಲ. ಈಗ ಮಳೆಗಾಲ ಆರಂಭವಾಗಿದ್ದು, ಮಳೆ ಬಂದರೆ ಸಾಕು ತಗ್ಗು ಪ್ರದೇಶದಲ್ಲಿ ನೀರು ನಿಂತು ಅಲ್ಲಿನ ಜನರು ಪರದಾಡಬೇಕಾಗಿದೆ. ಸರಿಯಾದ ರೀತಿಯಲ್ಲಿ ರಾಜಕಾಲುವೆ ನಿರ್ಮಾಣವಾಗದ ಪರಿಣಾಮ ಪಂಪಾನಗರ, ಚೌಡೇಶ್ವರ ನಗರಿ, ಮೃತ್ಯುಂಜಯ ನಗರ, ಚಿದಂಬರ ನಗರ ಸೇರಿದಂತೆ ಇತರ ಪ್ರದೇಶಗಳು ನೀರಿನಲ್ಲಿ ನಿಲ್ಲಬೇಕಾಗಿದೆ. ಅತಿದೊಡ್ಡ ಪ್ರದೇಶವಾದ ನಗರದಲ್ಲಿ ನಿತ್ಯ ಸಮಸ್ಯೆ ಹೆಚ್ಚಾಗುತ್ತಿದೆ. ನಗರಸಭೆ ಇರುವ ಸಿಬ್ಬಂದಿಯಲ್ಲಿಯೇ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಅನಿವಾರ್ಯವಾಗಿದ್ದು, ಕೂಡಲೇ ಮಳೆ ಬರುವ ಮುನ್ನ ಸಮಸ್ಯೆ ಬಗೆಹರಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಕಸ ಬಿಸಾಡಬೇಡಿ: ಈಗಾಗಲೇ ಅವಶ್ಯವಿದ್ದ ಕಡೆಗೆ ರಾಜಕಾಲುವೆ ಶುಚಿಗೊಳಿಸುವ ಕೆಲಸ ಮಾಡಲಾಗಿದೆ. ಹಿಂದೆ ಕಾಮಗಾರಿ ವಿಭಾಗದಿಂದಲೂ ಕೆಲಸ ಮಾಡಲಾಗಿದೆ. ಜೆಸಿಬಿಯಿಂದ ಕೆಲಸ ಆಗದ ಕಡೆಗೆ ಹಿಟಾಚಿ ಮೂಲಕ ಕೆಲಸ ಮಾಡಲು ಅನುಮೋದನೆ ಪಡೆಯಲಾಗಿದ್ದು, ಆದಷ್ಟು ಬೇಗನೆ ಮಾಡಲಾಗುವುದು. ಸಾರ್ವಜನಿಕರು ಚರಂಡಿಯಲ್ಲಿ ಕಸ ಹಾಗೂ ಇತರ ವಸ್ತುಗಳನ್ನು ಬಿಸಾಡಬಾರದು ಎಂದು ರಾಣಿಬೆನ್ನೂರು ನಗರಸಭೆಯ ಪರಿಸರ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ ಕೊಡಬಾಳ ಹೇಳುತ್ತಾರೆ.