ಕಂಪ್ಲಿ: ಪಟ್ಟಣದಲ್ಲಿ ಮಂಗಳವಾರ ದೇವಸಮುದ್ರ ವಲಯದ ಅಂಗನವಾಡಿ ಕಾರ್ಯಕರ್ತೆಯರ ಸಭೆ ನಡೆಯಿತು.ಸಭೆಯಲ್ಲಿ ಅಂಗನವಾಡಿ ಕೇಂದ್ರಗಳ ಕಾರ್ಯ ನಿರ್ವಹಣೆ, ಮಕ್ಕಳ ಪೌಷ್ಠಿಕ ಆಹಾರ, ಸ್ವಚ್ಛತೆ, ಭಾಗ್ಯಲಕ್ಷ್ಮೀ ಯೋಜನೆ ಹಾಗೂ ಅಪ್ರಾಪ್ತರ ಮದುವೆ ತಡೆ ಕುರಿತಂತೆ ಸಮಗ್ರ ಚರ್ಚೆ ನಡೆಯಿತು.
ಮಹಿಳಾ ಮೇಲ್ವಿಚಾರಕಿ ಲತೀಫಾಬೇಗಮ್ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪ್ರತಿದಿನ ಕೇಂದ್ರಗಳನ್ನು ಸಕಾಲಕ್ಕೆ ತೆರೆಯುವ ಮೂಲಕ ಮಕ್ಕಳಿಗೆ ಪೌಷ್ಠಿಕ ಆಹಾರ, ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಆರೈಕೆ ವ್ಯವಸ್ಥೆ ಸಮರ್ಪಕವಾಗಿ ದೊರೆಯುವಂತೆ ನೋಡಿಕೊಳ್ಳಬೇಕು. ಕೇಂದ್ರಗಳಲ್ಲಿ ವಿದ್ಯುತ್, ಫ್ಯಾನ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಸೌಕರ್ಯಗಳ ಕೊರತೆ ಉಂಟಾಗದಂತೆ ಕಾರ್ಯಕರ್ತೆಯರು ಗಮನಹರಿಸಬೇಕು. ಮಕ್ಕಳಿಗೆ ನೀಡುವ ಆಹಾರ ತಯಾರಿಕೆಯಲ್ಲಿ ಸ್ವಚ್ಛತೆ ಮತ್ತು ಪೌಷ್ಠಿಕಾಂಶ ಕಾಪಾಡಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಅವಧಿ ಮೀರಿದ ಪಡಿತರ ಸಾಮಗ್ರಿಗಳನ್ನು ಯಾವುದೇ ಕಾರಣಕ್ಕೂ ವಿತರಿಸಬಾರದು. ಸರ್ಕಾರದಿಂದ ನಿಗದಿಪಡಿಸಲಾದ ಪಡಿತರವನ್ನು ಸಕಾಲಕ್ಕೆ ಫಲಾನುಭವಿಗಳಿಗೆ ತಲುಪಿಸುವಲ್ಲಿ ಜವಾಬ್ದಾರಿತನ ತೋರಬೇಕು ಎಂದು ತಿಳಿಸಿದರು.ಇನ್ನು ಗ್ರಾಮಗಳಲ್ಲಿ ಅಪ್ರಾಪ್ತೆಯರ ಮದುವೆ ಮಾತುಕತೆ, ನಿಶ್ಚಿತಾರ್ಥ ಅಥವಾ ಮದುವೆ ಸಿದ್ಧತೆಗಳ ಮಾಹಿತಿ ತಿಳಿದ ತಕ್ಷಣವೇ ಚೈಲ್ಡ್‌ಲೈನ್ 1098, ತುರ್ತು ಸಹಾಯವಾಣಿ 112 ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಭಾಗ್ಯಲಕ್ಷ್ಮೀ ಯೋಜನೆಯ ಪ್ರಗತಿ ಕುರಿತು ಪರಿಶೀಲನೆ ನಡೆಸಲಾಯಿತು. ಮೇ 11ರಂದು ಅಂಗನವಾಡಿ ಕೇಂದ್ರ ಆರಂಭಗೊಂಡ ಹಿನ್ನೆಲೆಯಲ್ಲಿ 18 ವರ್ಷ ಪೂರ್ಣಗೊಳಿಸಿರುವ 2007-08ನೇ ಸಾಲಿನ 131 ಭಾಗ್ಯಲಕ್ಷ್ಮೀ ಫಲಾನುಭವಿಗಳಲ್ಲಿ ಈಗಾಗಲೇ 68 ಫಲಾನುಭವಿಗಳ ಮಾಹಿತಿಯನ್ನು ಆನ್‌ಲೈನ್ ಮೂಲಕ ದಾಖಲಿಸಲಾಗಿದೆ. ಉಳಿದ ಫಲಾನುಭವಿಗಳ ಮಾಹಿತಿಯನ್ನು ಶೀಘ್ರದಲ್ಲಿ ದಾಖಲಿಸುವಂತೆ ಸೂಚನೆ ನೀಡಲಾಯಿತು.ಇದೇ ವೇಳೆ ಮಾತೃವಂದನಾ ಯೋಜನೆ ಅರ್ಜಿಗಳು, ಪಡಿತರ ವಿತರಣೆ, ಮಕ್ಕಳ ಹಾಜರಾತಿ ಸೇರಿದಂತೆ ವಿವಿಧ ಕಡತಗಳ ಪರಿಶೀಲನೆ ನಡೆಯಿತು. ಸಭೆಗೆ ಮುನ್ನ ಎಸಿಡಿಪಿಒ ಮೋಹನ್ ಕಾಳಾಪುರ ಭೇಟಿ ನೀಡಿ ವಿವಿಧ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಮೆಟ್ರಿ, ಸಣಾಪುರ ಹಾಗೂ ದೇವಸಮುದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರಾದ ಅಕ್ಕಮಹಾದೇವಿ, ಈರಮ್ಮ, ವಿಜಯಕುಮಾರಿ, ಹೇಮಲತಾ, ಉಮಾ, ಪವಿತ್ರಾ ಸೇರಿದಂತೆ ಹಲವರು ಭಾಗವಹಿಸಿದ್ದರು.