ಸಾರಾಂಶ
ಹಳಿಯಾಳ: ಆಧುನಿಕ ಯುಗದಲ್ಲಿ ತಂತ್ರಜ್ಞಾನ, ಶೈಕ್ಷಣಿಕ ಅವಿಷ್ಕಾರದ ಜತೆಗೆ ಅಪರಾಧಗಳ ಸ್ವರೂಪ ಕೂಡ ಬದಲಾಗುತ್ತಿದ್ದು, ಅದಕ್ಕಾಗಿ ಪ್ರತಿಯೊಬ್ಬರಿಗೂ ಸೈಬರ್ ಅಪರಾಧಗಳ ಬಗ್ಗೆ ಜಾಗ್ರತೆ ಅಗತ್ಯವಾಗಿದೆ ಎಂದು ಹಳಿಯಾಳ ಪಿಎಸ್‌ಐ ವಿನೋದ ರೆಡ್ಡಿ ತಿಳಿಸಿದರು.
ಪಟ್ಟಣದ ಕೆಎಲ್‌ಎಸ್ ಸಂಸ್ಥೆಯ ಬಿಸಿಎ ಹಾಗೂ ಬಿಕಾಂ ಮಹಾವಿದ್ಯಾಲಯದಲ್ಲಿ ನಡೆದ ಟೆಕ್ನೋಸ್ಪಾರ್ಕ್ ತಾಂತ್ರಿಕ ಹಬ್ಬದಲ್ಲಿ ಅವರು, ಸೈಬರ್ ಅಪರಾಧಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಮಾತನಾಡಿದರು.ಆಧುನಿಕ ತಂತ್ರಜ್ಞಾನದ ಉಪಯುಕ್ತತೆಯ ಜತೆಗೆ ಅದರಿಂದ ಉಂಟಾಗುವ ಕೆಡಕುಗಳನ್ನು ಅರಿತುಕೊಳ್ಳಬೇಕು. ಸೈಬರ್ ಅಪರಾಧಗಳ ಬಗ್ಗೆ ಮಾಹಿತಿ ಇದ್ದಲ್ಲಿ ಅದರಿಂದ ಎದುರಾಗುವ ತೊಂದರೆಗಳನ್ನು ಆರಂಭದಲ್ಲಿ ತಪ್ಪಿಸಬಹುದು ಎಂದರು.
ಕಾಲೇಜು ಶಿಕ್ಷಣ ಇದು ಜೀವನದ ಮಹತ್ವದ ಭಾಗ. ಇಲ್ಲಿ ಜಾಗರೂಕತೆಯಿಂದ ಹೆಜ್ಜೆಯಿಡಬೇಕಾಗಿದೆ. ಪಾಲಕರು ನಿಮ್ಮ ಬಗ್ಗೆ ಕಂಡ ಕನಸನ್ನು ಸಾಕಾರಗೊಳಿಸುವ ಬಹುದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ವೈಭವದ ಜಗತ್ತಿಗೆ ಅಥವಾ ಕ್ಷಣಿಕ ಸುಖ ಸಂತೋಷಕ್ಕಾಗಿ ಎಡವಿ ಬೀಳಬೇಡಿ. ಶಿಕ್ಷಣದ ಜತೆಯಲ್ಲಿ ಉತ್ತಮ ಚಾರಿತ್ರ್ಯ ಬೆಳೆಸಿಕೊಳ್ಳಿ ಎಂದರು.ಕಾಲೇಜು ಪ್ರಾಚಾರ್ಯ ಶ್ರೀನಿವಾಸ್ ಪ್ರಭು ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ಸಂಯೋಜಕಿ ದೀಪಾ ನಾಯ್ಕ, ಬಿಕಾಂ ವಿಭಾಗದ ಮುಖ್ಯಸ್ಥೆ ನಮೃತಾ ಗುರವ, ಟೆಕ್ನೋ ಸ್ಪಾರ್ಕ್ ಸಂಯೋಜಕ ವರುಣ ಪಾಟೀಲ, ಉಪನ್ಯಾಸಕ ಮೆಹ್ತಾಬ ಶೇಖ್, ಮಾಧವ ಸುರತ್ಕರ, ಶಾಂತಾರಾಮ ಚಿಬುಲಕರ, ಸಂಗೀತಾ ಪ್ರಭು, ಮಿನಾಜ್ ಶೇಖ್, ಪ್ರಗತಿ ಯಕ್ಕುಂಡಿ, ಸ್ವಾತಿ ಮೋರೆ, ವಿಭಾ ಉಡುಪಿ ಹಾಗೂ ಬೋಧಕೇತರ ಸಿಬ್ಬಂದಿ ಸಂಜಯ ಕುಲಕರ್ಣಿ, ಲೀಲಾ ಅಂಬಿಗ, ಶೀತಲ್ ತೋರಸ್ಕರ ಇದ್ದರು.
ಎರಡು ದಿನಗಳ ವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ದಾಂಡೇಲಿ ಹಾಗೂ ಹಳಿಯಾಳ ತಾಲೂಕಿನ ಒಂಬತ್ತು ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಹಳಿಯಾಳದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯ ಪ್ರಥಮ ಸ್ಥಾನ ಪಡೆಯಿತು. ಎಂಟು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಬೇಕಾಬಿಟ್ಟಿ ಕಾರು ಚಾಲನೆ: ಚಾಲಕನಿಗೆ ದಂಡ
ಭಟ್ಕಳ: ಮುರುಡೇಶ್ವರ ಕಡಲತೀರದಲ್ಲಿ ಬೇಕಾಬಿಟ್ಟಿ ಕಾರು ಚಾಲನೆ ಮಾಡಿದ್ದಲ್ಲದೇ ವೀಲಿಂಗ್ ಮಾಡುತ್ತಿದ್ದ ಚಾಲಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದ ಘಟನೆ ಶುಕ್ರವಾರ ನಡೆದಿದೆ.ಬೆಂಗಳೂರು ನಿವಾಸಿ ಗೌರವ್ ಎನ್.ವಿ. ಎಂಬಾತ ಶುಕ್ರವಾರ ಮಾರುತಿ ಇಕೋ ಕಾರನ್ನು ಮುರ್ಡೇಶ್ವರ ಕಡಲ ತೀರದಲ್ಲಿ ಬೇಕಾಬಿಟ್ಟಿ ಚಾಲನೆ ಮತ್ತು ವೀಲಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಮುರುಡೇಶ್ವರ ಪಿಎಸ್ಐ ಇದನ್ನು ಗಮನಿಸಿ ಆತನ ಮೇಲೆ ಪ್ರಕರಣ ದಾಖಲಿಸಿಕೊಂಡು ₹1000 ದಂಡ ವಿಧಿಸಿದ್ದಾರೆ.