ಶಾಸ್ತ್ರೀಯ ನೃತ್ಯ ಕಲಿಯುವವರ ಸಂಖ್ಯೆ ಹೆಚ್ಚುತ್ತಿದೆ: ಸಾಯಿರಾಮನ್ ನೃತ್ಯ ಕೇಂದ್ರದ ಡಾ. ಸಾಗರ್

| Published : Apr 30 2024, 02:09 AM IST

ಶಾಸ್ತ್ರೀಯ ನೃತ್ಯ ಕಲಿಯುವವರ ಸಂಖ್ಯೆ ಹೆಚ್ಚುತ್ತಿದೆ: ಸಾಯಿರಾಮನ್ ನೃತ್ಯ ಕೇಂದ್ರದ ಡಾ. ಸಾಗರ್
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ ಮಾನ್ಯತೆ ಪಡೆದ ಏಕೈಕ ನೃತ್ಯ ಶಾಲೆಯಾದ ಸಾಯಿರಾಮನ್ ನೃತ್ಯ ಕೇಂದ್ರದ ವತಿಯಿಂದ ನಡೆಸುವ ಸಂಗೀತ, ತಾಳ, ವಾದ್ಯ ಹಾಗೂ ನೃತ್ಯಪರಿಕರಗಳಿಗೆ ಈ ಬಾರಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಪ್ರಸ್ತುತ ಕಾಲಮಾನದಲ್ಲಿ ತುಮಕೂರು ಜಿಲ್ಲೆಯಲ್ಲಿ ಶಾಸ್ತ್ರೀಯ ನೃತ್ಯ ಕಲಿಯುವ ಹಾಗೂ ಕಲಿಸುವವರ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಪೋಷಕರು ಹಾಗೂ ಮಕ್ಕಳು ಭರತನಾಟ್ಯ, ಯಕ್ಷಗಾನ ಮುಂತಾದ ಪ್ರಕಾರಗಳನ್ನು ಕಲಿಯಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂದು ಸಾಯಿರಾಮನ್ ನೃತ್ಯ ಕೇಂದ್ರದ ಡಾ. ಸಾಗರ್ ಟಿ.ಎಸ್. ಹೇಳಿದರು.

ನಗರದ ಶ್ರೀ ಸಾಯಿರಾಮನ್ ನೃತ್ಯ ಕೇಂದ್ರದ ವತಿಯಿಂದ ವಿಶ್ವ ನೃತ್ಯ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೃತ್ಯ ಗುರುಗಳು ಸಂಘಟಿತರಾದರೆ ಉತ್ತಮ ಕಾರ್ಯಕ್ರಮಗಳು, ಕಾರ್ಯಾಗಾರಗಳು, ವಿಚಾರ ಸಂಕಿರಣಗಳನ್ನು ಆಯೋಜಿಸಿ ಶಾಸ್ತ್ರೀಯ ನೃತ್ಯವನ್ನು ಇನ್ನು ಹೆಚ್ಚು ಪ್ರವರ್ಧಮಾನಕ್ಕೆ ತರಬಹುದು ಎಂದರು.

ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ ಮಾನ್ಯತೆ ಪಡೆದ ಏಕೈಕ ನೃತ್ಯ ಶಾಲೆಯಾದ ಸಾಯಿರಾಮನ್ ನೃತ್ಯ ಕೇಂದ್ರದ ವತಿಯಿಂದ ನಡೆಸುವ ಸಂಗೀತ, ತಾಳ, ವಾದ್ಯ ಹಾಗೂ ನೃತ್ಯಪರಿಕರಗಳಿಗೆ ಈ ಬಾರಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ವಿಶೇಷವಾಗಿದೆ ಎಂದರು.

ಇಂತಹ ಪರೀಕ್ಷೆಗಳು ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತವೆ ಎಂದು ಅವರು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಮಾತನಾಡಿ, ತುಮಕೂರಿನಲ್ಲಿ ಜನಿಸಿ, ಶಾಸ್ತ್ರೀಯ ನೃತ್ಯವನ್ನು ಮೈಗೂಡಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿರುವ ಕಲಾವಿದರಲ್ಲಿ ವಿದ್ವಾನ್ ಸಾಗರ್ ಮೊದಲಿಗರು. ಅವರ ಸಾಯಿರಾಮನ್ ನೃತ್ಯ ಕೇಂದ್ರ ತುಮಕೂರಿನ ನೃತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ಶ್ರಮಿಸಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಧಾರವಾಡದ ನೃತ್ಯ ಗುರುಗಳಾದ ವಿಧೂಷಿ ನಾಗರತ್ನ ಹಡಗಲಿ ಮಾತನಾಡಿ, ಎಲ್ಲ ನೃತ್ಯ ಗುರುಗಳೂ ಒಂದೆಡೆ ಸೇರಿ ವಿಶ್ವ ನೃತ್ಯ ದಿನಾಚರಣೆ ಆಚರಿಸುತ್ತಿರುವುದು ಬಹಳ ವಿಶೇಷವಾಗಿದೆ. ಪ್ರತಿಭಾವಂತ ಮಕ್ಕಳಿಗೆ ಉತ್ತೇಜನ ನೀಡುವಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ಪ್ರತಿ ವರ್ಷವೂ ಇಂತಹ ಕಾರ್ಯಕ್ರಮಗಳನ್ನು ಮಾಡುವುದರಿಂದ ನೃತ್ಯ ಶಿಕ್ಷಕರಲ್ಲಿ ಇನ್ನೂ ಹೆಚ್ಚಿನ ಸ್ನೇಹ ಬಾಂಧವ್ಯ ಹೆಚ್ಚುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ನೃತ್ಯ ಕಲೆ ಉಳಿದ ಕಲೆಗಳಿಂದ ಸ್ಪೂರ್ತಿ ಪಡೆದು ಒಂದು ಪರಿಪೂರ್ಣ ಆಕರ್ಷಕ ಕಲಾ ಪ್ರಕಾರವಾಗಿ ಮೂಡಿ ಬರುತ್ತದೆ. ಕಾಳಿದಾಸ ಹೇಳಿರುವಂತೆ ನೃತ್ಯವು ಎಲ್ಲ ವರ್ಗದ ಎಲ್ಲ ಅಭಿರುಚಿಯ ಪ್ರೇಕ್ಷಕರನ್ನು ಆನಂದಪಡಿಸುತ್ತದೆ. ಹಾಗಾಗಿ ನೃತ್ಯ ಕಲಾವಿದರೆಲ್ಲಾ ಸೇರಿ ಡಾ. ಸಾಗರ್ ರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಇನ್ನು ಹೆಚ್ಚು ಪರಿಶ್ರಮದಿಂದ ನೃತ್ಯ ಕಲಿತು ತುಮಕೂರಿಗೆ, ಕನ್ನಡ ನಾಡಿಗೆ ಕೀರ್ತಿ ತರುವಂತಾಗಲಿ ಎಂದರು.

ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ನೃತ್ಯಗುರುಗಳಾದ ದಾಮೋರ್ ನಾಯಕ್, ಸುಬ್ರಹ್ಮಣ್ಯ ಚಿಕ್ಕನಾಯಕನಹಳ್ಳಿ, ಸೌಮ್ಯಶ್ರೀ ತಿಪಟೂರು, ಅನುಶ್ರೀ, ನಾಗರಾಜು, ವೆಂಕಟೇಶ್ ರನ್ನು ಸನ್ಮಾನಿಸಲಾಯಿತು.